Kannada NewsKarnataka NewsLatest
ಅನಮೋಡ ಅಬಕಾರಿ ತನಿಖಾ ಠಾಣೆಯಿಂದ ಪಾರಾಗಿ ಬಂದ ಖಾಸಗಿ ಬಸ್ಸಿನಲ್ಲಿ ಗೋವಾ ರಾಜ್ಯದ 520 ಲೀ. ಮದ್ಯ ಪತ್ತೆ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಉತ್ತರ ಕನ್ನಡ ಜಿಲ್ಲೆಯ ಅನಮೋಡ ಬಳಿ ಕರ್ನಾಟಕ -ಗೋವಾ ರಾಜ್ಯಗಳ ಗಡಿಯಲ್ಲಿ ಅಬಕಾರಿ ತನಿಖಾ ಠಾಣೆಯನ್ನು ದಾಟಿ ಹುಬ್ಬಳ್ಳಿ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಹೊರಟಿದ್ದ ಖಾಸಗಿ ಐಷಾರಾಮಿ ಬಸ್ಸನ್ನು ತಾಲ್ಲೂಕಿನ ಅಬಕಾರಿ ಅಧಿಕಾರಿಗಳು ಶನಿವಾರ ತಾಲ್ಲೂಕಿನ ಲಿಂಗನಮಠ ಗ್ರಾಮದ ಬಳಿ ಹುಬ್ಬಳ್ಳಿ-ರಾಮನಗರ ಹೆದ್ದಾರಿಯಲ್ಲಿ ತಡೆದು ತಪಾಸಣೆ ನಡೆಸಿದಾಗ ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ರಾಜ್ಯದಲ್ಲಿ ತಯಾರಿಸಿದ 520 ಲೀ.ಮದ್ಯ ಪತ್ತೆಯಾಗಿದೆ.
ಬೆಳಗಾವಿ ಜಿಲ್ಲೆಯ ಅಬಕಾರಿ ಇಲಾಖೆಯವರ ತಪಾಸಣೆಗೂ ಕೆಲ ಗಂಟೆಗಳ ಮೊದಲು ಈ ಬಸ್ ಅನಮೋಡ ತನಿಖಾ ಠಾಣೆ ದಾಟಿ ಬಂದಿದೆ. ಆದರೆ ಖಾನಾಪುರದ ಅಬಕಾರಿ ಅಧಿಕಾರಿಗಳಿಗೆ ಸಿಕ್ಕ ಲಕ್ಷಾಂತರ ಮೌಲ್ಯದ ಮದ್ಯ ಅನಮೋಡ ಅಬಕಾರಿ ಠಾಣೆಯವರ ಕಣ್ಣಿಗೆ ಏಕೆ ಬೀಳಲಿಲ್ಲ ಎಂಬುದು ನಿಗೂಢವಾಗಿದ್ದು, ನಿತ್ಯ ಅನಮೋಡ ಅಬಕಾರಿ ತನಿಖಾ ಠಾಣೆಯ ಮೂಲಕ ನೂರಾರು ವಾಹನಗಳು ರಾಜ್ಯವನ್ನು ಪ್ರವೇಶಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಹೊಂದಿದ್ದ ಬಸ್ ಚೆಕ್ ಪೋಸ್ಟ್ ದಾಟಿ ಬಂದಿರುವ ಘಟನೆ ಅನಮೋಡ ಅಬಕಾರಿ ಇಲಾಖೆಯವರ ಕಾರ್ಯವೈಖರಿಯ ಬಗ್ಗೆ ಅನುಮಾನ ಮೂಡಿಸಿದೆ.
ಖಚಿತ ಮಾಹಿತಿ ಮೇರೆಗೆ ಲಿಂಗನಮಠ ಬಳಿ ಸ್ಥಳೀಯ ಅಬಕಾರಿ ಅಧಿಕಾರಿಗಳ ತಪಾಸಣೆ ಸಂದರ್ಭದಲ್ಲಿ ಆಂಧ್ರ ಪ್ರದೇಶ ರಾಜ್ಯದ ನೊಂದಣಿಯ ಅಶೋಕ ಲೈಲಂಡ್ ಸುಖಾಸೀನ ಬಸ್ಸಿನಲ್ಲಿ ಗೋವಾ ರಾಜ್ಯದಲ್ಲಿ ಮಾರಾಟಕ್ಕೆಂದು ತಯಾರಿಸಲಾದ 2.ಲೀ ಅಳತೆಯ 105 ವಿಸ್ಕಿ, 750 ಮಿ.ಲೀ ಅಳತೆಯ 204 ವಿಸ್ಕಿ, 180 ಮಿ.ಲೀ ಅಳತೆಯ 864 ವಿಸ್ಕಿ ಬಾಟಲಿಗಳು ಸೇರಿದಂತೆ ಒಟ್ಟು 519 ಲೀ.ನಷ್ಟು ಮದ್ಯ ದೊರೆತಿದೆ. ಮದ್ಯವನ್ನು ಬಸ್ಸಿನ ಸಮೇತ ವಶಪಡಿಸಿಕೊಂಡು ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಸ್ಸಿನ ಚಾಲಕ ಪರಾರಿಯಾಗಿದ್ದು, ಕ್ಲೀನರ್ ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ನಿವಾಸಿ ತೊರಾಟೆ ವೆಂಕಟಸ್ವಾಮಿ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರ ಸೂಚನೆ ಮೇರೆಗೆ ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಅಬಕಾರಿ ಅಪರ ಆಯುಕ್ತ ಮಂಜುನಾಥ, ಜಂಟಿ ಆಯುಕ್ತ ಜಯರಾಮೇಗೌಡ ಮತ್ತು ಉಪ ಅಧೀಕ್ಷಕ ಸಿ.ಎಸ್ ಪಾಟೀಲ ಅವರ ಮಾರ್ಗದರ್ಶನದಲ್ಲಿ ನಡೆದ ಬಸ್ ತಪಾಸಣೆ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕ ದಾವಲಸಾಬ್ ಶಿಂಧೋಗಿ, ಸಿಬ್ಬಂದಿ ಜಯರಾಮ್ ಹೆಗಡೆ, ಎನ್.ಆರ್ ಪಾಟೀಲ, ಚಾಲುಕ್ಯ ಶಹಾಪುರ, ಮಂಜುನಾಥ ಬಳಗಪ್ಪನವರ, ವಿಜಯಲಕ್ಷ್ಮೀ ಬಡಿದಾಳ, ಮಂಜು ಮತ್ತು ಸಂತೋಷ ಭಾಗವಹಿಸಿದ್ದರು. ಈ ಪ್ರಕರಣದಲ್ಲಿ ವಶಕ್ಕೆ ಪಡೆದ ಮದ್ಯದ ಮೌಲ್ಯ 21.68 ಲಕ್ಷ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ. ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ