ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಆಝಾದಿ ಕಾ ಅಮೃತ ಮಹೋತ್ಸವ” ಸಂದರ್ಭದಲ್ಲಿ ಮೇ 28 ರಂದು ಸರಕಾರದ ನಿರ್ದೇಶನದಂತೆ “ಅಮೃತ ಭಾರತಿಗೆ ಕನ್ನಡದ ಆರತಿ” ಶೀರ್ಷಿಕೆಯಡಿ ಮೊದಲ ಹಂತದಲ್ಲಿ ಮೇ 28 ರಂದು ಜಿಲ್ಲೆಯ ನಾಲ್ಕು ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
“ಆಝಾದಿ ಕಾ ಅಮೃತ ಮಹೋತ್ಸವ” ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಮೇ 13) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿದ್ದು, ವೇದಿಕೆ ಕಾರ್ಯಕ್ರಮ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಮೇ 28 ರ ಕಾರ್ಯಕ್ರಮ ನಡೆಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದು ಎಂದು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಒಂದು ವೇಳೆ ಮೇ 28 ರಂದೇ ಕಾರ್ಯಕ್ರಮ ನಡೆಸುವುದಾದರೆ ಅದಕ್ಕೆ ಸಂಬಂಧಿಸಿದಂತೆ ಉಪ ಸಮಿತಿಗಳನ್ನು ರಚಿಸಿ ಪೂರ್ವಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಿತ್ತೂರು ಕೋಟೆ ಆವರಣ; ಬೆಳಗಾವಿ ವೀರಸೌಧ ಹಾಗೂ ಹುದಲಿಯಲ್ಲಿ ಹಾಗೂ ಹುಲಕುಂದ ಮೆರವಣಿಗೆ, ರೂಪಕ, ವೇದಿಕೆ ಕಾರ್ಯಕ್ರಮ, ಉಪನ್ಯಾಸ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಿತ್ರಪ್ರದರ್ಶನ ಏರ್ಪಡಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.
ಈ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಮೇ 28 ರಂದು ವೀರ ಸಾವರಕರ ಅವರ ಜನ್ಮದಿನದ ನಿಮಿತ್ಯವಾಗಿ ಜಿಲ್ಲೆಯ ನಾಲ್ಕು ಸ್ಥಳಗಳಾದ ಕಿತ್ತೂರು, ಬೆಳಗಾವಿ, ಹುದಲಿ ಹಾಗೂ ರಾಮದುರ್ಗ ತಾಲ್ಲೂಕಿನ ಹುಲಕುಂದ ಗ್ರಾಮದಲ್ಲಿ ಮೇ 28 ರಂದು ಮೆರವಣಿಗೆ, ರೂಪಕ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು, ವೇದಿಕೆ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಉಪವಿಭಾಗಧಿಕಾರಿ ರವೀಂದ್ರ ಕರಲಿಂಗಣ್ಣವರ, ಬೆಳಗಾವಿಯ ತಹಶೀಲ್ದಾರ್ ಆರ್. ಕೆ ಕುಲಕರ್ಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ