ಪ್ರಗತಿವಾಹಿನಿ ಸುದ್ದಿ; ಕಾರವಾರ: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮುಂಜಾನೆಯಿಂದಲೇ ವರುಣಾರ್ಭಟ ಜೋರಾಗಿದ್ದು, ಅದರಲ್ಲಿಯೂ ಕರಾವಳಿ, ಮಲೆನಾಡು ಜಿಲ್ಲೆಗಳು ಭಾರಿ ಮಳೆಯಿಂದ ತತ್ತರಿಸಿ ಹೋಗಿವೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ವಿದ್ಯುತ್ ಕಂಬಗಳು, ಬೃಹತ್ ಮರಗಳು ಧರಾಶಾಹಿಯಾಗಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಚಿಕ್ಕಮಗಳೂರಿನ ಮೂರು ತಾಲೂಕುಗಳಾದ ಶೃಂಗೇರಿ, ಕಳಸ ಹಾಗೂ ಮೂಡಿಗೆರೆ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಜಾಗೃತಾ ಕ್ರಮವಾಗಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯಾದ್ಯಂತ ಗುರುವಾರ ಹಾಗೂ ಶುಕ್ರವಾರ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತವುಂಟಾಗಿದೆ. ಮಳೆಯ ಆರ್ಭಟಕ್ಕೆ ಮನೆಗಳು ಬಿರುಕುಬಿಟ್ಟಿದ್ದು, ಜನರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಉತ್ತರ ಒಳನಾಡಿನ ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ ಹಾಗೂ ಬೆಳಗಾವಿ ಜಿಲ್ಲೆಗಳು, ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಓಡಿಶಾ, ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ