*ಮನೋಜ್ಞ ಅಭಿನಯ: ಮತ್ತೆ ಮತ್ತೆ ನೋಡಬೇಕೆನಿಸಿದ ಯಕ್ಷಗಾನ ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶಿರಸಿಯ ಯಕ್ಷಗೆಜ್ಜೆ ಮಹಿಳಾ ತಂಡದವರಿಂದ ಶನಿವಾರ ಕನ್ನಡ ಭವನದಲ್ಲಿ ಪ್ರದರ್ಶನಗೊಂಡ ಯಕ್ಷಗಾನ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿತು. ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆಯ ಜೊತೆಗೆ, ಯಕ್ಷಗಾನದ ಅಭಿರುಚಿ ಹುಟ್ಟಿಸುವಲ್ಲಿ ಯಶಸ್ವಿಯಾಯಿತು. ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ನರಕಾಸುರ ವಧೆ ಅರ್ಥಾತ್ ಪಾರಿಜಾತ ಯಕ್ಷಗಾನ ಪ್ರದರ್ಶನ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರು ಕುಳಿತಲ್ಲಿಂದ ಕದಲದಂತೆ ಹಿಡಿದಿಡುವಲ್ಲಿ ಯಶಸ್ವಿಯಾಯಿತು.
ನರಕಾಸುರ ದೇವಲೋಕದ ಮೇಲೆ ಯುದ್ಧ ಸಾರಿ ದೇವೆಂದ್ರನನ್ನು ಜಯಿಸಿ ದೇವೇದ್ರನನ್ನು ಸೂರೆಗೊಂಡನು. ದೇವೇಂದ್ರ ವಿಷ್ಣುವಿನ ಅವತಾರವಾಗಿ ಕೃಷ್ಣನಿಗೆ ಶರಣು ಹೋಗಿ, ಸತ್ಯಭಾಮೆಯ ಸಹಿತವಾಗಿ ದೇವಲೊಕಕ್ಕೆ ಹೋಗಿ ಮನವೊಲಿಸಲು ವಿಫಲನಾದಾಗ ಯುದ್ಧಕ್ಕಿಳಿಯುತ್ತಾನೆ. ನರಕಾಸುರ ತಂದೆ – ತಾಯಿಯರಿಂದ ಮಾತ್ರ ಸೋಲು ಎನ್ನುವ ಬ್ರಹ್ಮನ ವರ ಪಡೆದಿದ್ದರಿಂದ ಕೃಷ್ಣನೂ ಸೋಲುಕಂಡಾಗ ಸತ್ಯಭಾಮೆ ಯುದ್ಧಕ್ಕೆ ಸಿದ್ಧಳಾಗುತ್ತಾಳೆ. ಕೃಷ್ಣನ ಬೆವರಿನಿಂದ ನರಕಾಸುರ ಹುಟ್ಟಿದ್ದರಿಂದ, ಕೃಷ್ಣ – ಸತ್ಯಭಾಮೆಯರ ಜೊತೆಯಾಗಿ ಎದುರು ನಿಂತಾಗ ನರಕಾಸುರ ಸೋತು ಶರಣಾಗುತ್ತಾನೆ. ಆಗ ಕೃಷ್ಣ ನರಕಾಸುರನಿಗೆ ಮೋಕ್ಷ ಕರುಣಿಸುತ್ತಾನೆ.
ನಿರ್ಮಲಾ ಹೆಗಡೆಯವರ ಕೃಷ್ಣ, ಪ್ರೀತಿ ಹೆಗಡೆಯವರ ಸತ್ಯಭಾಮೆ ಮತ್ತು ಸೌಮ್ಯ ಹೆಗಡೆಯವರ ನರಕಾಸುರ ಪಾತ್ರಗಳ ಅಭಿನಯ ಪ್ರೇಕ್ಷಕರು ಮತ್ತೆ ಮತ್ತೆ ಕರತಾಡನ ಮಾಡುವಂತೆ ಮಾಡಿತು. ಕೃಷ್ಣ – ಸತ್ಯಭಾಮೆಯರ ನೃತ್ಯ ಮನಸೂರೆಗೊಂಡಿತು. ದೇವೇಂದ್ರನಾಗಿ ರೇಣುಕಾ ನಾಗರಾಜ, ಅಗ್ನಿಯಾಗಿ ಭಾಗ್ಯಶ್ರೀ ಪವಾರ, ವರುಣನಾಗಿ ಪ್ರಕೃತಿ ಪವಾರ ಪಾತ್ರ ನಿರ್ವಹಿಸಿದರು. ಹಿಮ್ಮೇಳದಲ್ಲಿ ಗಜಾನನ ಭಟ್ ತುಳಗೇರಿ, ಶಂಕರ ಭಾಗವತ ಯಲ್ಲಾಪುರ, ಪ್ರಶಾಂತ ಹೆಗಡೆ ಕೈಗಡಿ, ವೇಷಭೂಷಣ ಉಮೇಶ ಹೆಗಡೆ ಹೊಕಣಕೇರಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಸಾಂಸ್ಕೃತಿಕ ಆತ್ಮ:

ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಚೆಂಡೆ ಭಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಯಕ್ಷಗಾನವು ಕರ್ನಾಟಕದ ಕರಾವಳಿ ಭಾಗಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಸಾಂಸ್ಕೃತಿಕ ಆತ್ಮವಿದ್ದಂತೆ. ನೃತ್ಯ, ಸಂಗೀತ, ಮಾತುಗಾರಿಕೆ, ವೇಷಭೂಷಣ, ಅಭಿನಯ— ಇಷ್ಟೊಂದು ವೈವಿಧ್ಯತೆ ಒಂದೇ ಕಲೆಯಲ್ಲಿ ಇರುವುದನ್ನು ನೋಡಿದರೆ, ಯಕ್ಷಗಾನ ಎಷ್ಟು ವಿಶಿಷ್ಟವಾದ ಕಲೆ ಎಂಬುದು ನಮಗೆ ಅರ್ಥವಾಗುತ್ತದೆ ಎಂದರು.
ರಾಮಾಯಣ, ಮಹಾಭಾರತ, ಪುರಾಣಗಳನ್ನು ಆಧರಿಸಿದ ಈ ಕಲೆಯನ್ನು ನೋಡಿದಾಗ ಇದು ಕೇವಲ ಆಟವಲ್ಲ, ಆಟದೊಂದಿಗೆ ಪಾಠ ಎನ್ನುವ ಅನುಭವ ದೊರೆಯುತ್ತದೆ. ಇಂದು ಮಕ್ಕಳಿಗೆ “ನಲಿಕಲಿ” ಎಂಬ ಕಲಿಕಾ ವಿಧಾನ ಬಂದಿದೆ. ಆಡುತ್ತ ಕಲಿಸುವುದು ಅದರ ತಿರುಳು. ಆದರೆ ಆಡುತ್ತ ಕಲಿಸುವ ಈ ಪರಂಪರೆ ನಮ್ಮ ಯಕ್ಷಗಾನದಲ್ಲಿ ಪ್ರಾಚೀನ ಕಾಲದಿಂದಲೇ ಜೀವಂತವಾಗಿದೆ ಎಂದು ಅವರು ಹೇಳಿದರು.
ರಾತ್ರಿಯಿಡೀ ನಡೆಯುವ ಯಕ್ಷಗಾನ ಪ್ರದರ್ಶನವನ್ನು ಗಮನಿಸಿದರೆ, ಒಬ್ಬ ವ್ಯಕ್ತಿಗೆ ಜೀವನಪೂರ್ತಿ ಸಾಕಾಗುವಷ್ಟು ಮೌಲ್ಯಗಳು ಅದರಲ್ಲಿ ಅಡಗಿವೆ. ರಾಮಾಯಣ –ಮಹಾಭಾರತ ಕಥೆಗಳ ಮೂಲಕ ನಮಗೆ ಜೀವನದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಅತ್ಯಂತ ಸರಳವಾಗಿ ಬೋಧಿಸುತ್ತವೆ. ಹಿಂದೆ ಪುರುಷರೇ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಸಂದರ್ಭಗಳಿದ್ದವು. ಇಂದು ಮಹಿಳೆಯರು ಯಕ್ಷಗಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ನಮ್ಮ ಕಲೆಯ ಬೆಳವಣಿಗೆಯ ಸಂಕೇತ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಯಕ್ಷಗಾನ ಕಲಾವಿದರಿಗೆ ಬೇಕಾದ ಬೆಂಬಲ, ಪ್ರೇಕ್ಷಕರ ಸಂಖ್ಯೆ, ಆಧುನಿಕ ಮನರಂಜನಾ ಮಾಧ್ಯಮಗಳ ಸ್ಪರ್ಧೆ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಯುವ ಪೀಳಿಗೆಗೆ ಅಭಿರುಚಿ ಬೆಳೆಸುವ ಜೊತೆಗೆ, ಸಾಮಾಜಿಕ ಮಾಧ್ಯಮಗಳ ಮೂಲಕ ಕಲೆಯನ್ನು ಬೆಳೆಸಬೇಕಿದೆ ಎಂದು ಎಂ.ಕೆ.ಹೆಗಡೆ ಹೇಳಿದರು.
ಕನ್ನಡ ಭವನದ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಹೊಟೆಲ್ ಮಾಲಿಕರ ಸಂಘದ ಗೌರವಾಧ್ಯಕ್ಷ ವಿಜಯ ಸಾಲಿಯಾನ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕನ್ನಡಭವನದ ಕಾರ್ಯದರ್ಶಿ ಯ.ರು.ಪಾಟೀಲ ವೇದಿಕೆಯಲ್ಲಿದ್ದರು. ಹವ್ಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪೂರ್ಣಿಮಾ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಜಗಜಂಪಿ, ರಾಮಕೃಷ್ಣ ಮರಾಠೆ, ಎಸ್.ಆರ್.ಹೆಗಡೆ, ಎಂ.ಜೆ.ರಾವ್ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿದರು.
ವಿಜಯಲಕ್ಷ್ಮೀ ಶಿಂಧೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಸಂಘಟಿಸಿ, ನಿರೂಪಿಸಿದರು. ವಿಜಯಲಕ್ಷ್ಮೀ ಅನಂತ ಪರಿವಾರದವರು ಕಾರ್ಯಕ್ರಮ ಪ್ರಾಯೋಜಿಸಿದ್ದರು. ಹವ್ಯಕ ಕ್ಷೇಮಾಭಿವೃದ್ದಿ ಸಂಘ, ಬಂಟರ ಸಂಘ, ಕಲಾರಂಗ ಮತ್ತು ಕನ್ನಡ ಭವನ ಕಾರ್ಯಕ್ರಮ ಸಂಘಟಿಸಿದ್ದವು.



