ಪ್ರಗತಿವಾಹಿನಿ ವಿಶೇಷ ಒಂದು ಕಾಲದಲ್ಲಿ ಪ್ರಚಲಿತವಾಗಿದ್ದ, ಮನೋರಂಜನೆಯ ಮಾಧ್ಯಮವಾಗಿದ್ದ ಗ್ರಾಮೀಣ ಕ್ರೀಡೆಗಳು ಮೆಲ್ಲಗೆ ಮರೆಯಾಗುತ್ತಿರುವುದನ್ನು ಗಮನಿಸಿದ್ದೀರಾ ?
ಬದಲಾದ ಜಾಗತಿಕ ಬದುಕು, ರಸವತ್ತಾದ ಬದುಕಿನ ಮೂಲಗಳನ್ನು ಕಿತ್ತುಕೊಂಡು, ಆಧುನಿಕ ಬದುಕಿನ ಮುಖವಾಡ ಧರಿಸಿ, ಜೀವನದಲ್ಲಿ ಅನುಭವಿಸಬಹುದಾದ ಎಲ್ಲ ಮಾರ್ಗಗಳನ್ನು ಮುಚ್ಚುತ್ತಿದೆ ಎಂಬುದು ವಿಷಾದದ ಸಂಗತಿ !
ಬದಲಾವಣೆ ಜೀವನಕ್ಕೆ ಬೇಕೇಬೇಕು. ಅಭಿವೃದ್ಧಿಯಾಗದ ಕ್ಷೇತ್ರವನ್ನು ಒಂದೊಂದಾಗಿ ಗುರುತಿಸಿ, ಆದ್ಯತೆಯನ್ನು ಕೊಟ್ಟು, ಮುನ್ನೆಲೆಗೆ ತರುವುದು ನಮ್ಮೆಲ್ಲರ ಕರ್ತವ್ಯ. ಹಾಗೆಂದ ಮಾತ್ರಕ್ಕೆ ತಲತಲಾಂತರದಿಂದ ಬಂದ ಸನ್ನಡತೆಗಳನ್ನು ತೂರಿ, ಜೀವನಕ್ಕೆ ಅನುಪಯುಕ್ತವಾದ, ಸಮಯ ಹಾಳು ಮಾಡುವ, ದೈಹಿಕ ವ್ಯಾಯಾಮಕ್ಕೆ ಕಡಿವಾಣ ಹಾಕುವ, ಆರ್ಥಿಕ ದುಂದುವೆಚ್ಚಕ್ಕೆ ದಾರಿ ಮಾಡಿಕೊಡುವ ಕ್ರೀಡೆಗೆ ಮಾರು ಹೋಗಿ, ನಮ್ಮ ದೇಶೀಯ ಕ್ರೀಡೆಗಳನ್ನು ತೊರೆಯುತ್ತಿರುವ ಹೊಸ ಪೀಳಿಗೆಗೆ, ಶೈಕ್ಷಣಿಕ, ಸಾಮಾಜಿಕ, ಕೌಟುಂಬಿಕ ಪರಿಸರದಲ್ಲಿ ಸೂಕ್ತ ತರಬೇತಿಯ ಕೊರತೆ ಕಾಣುತ್ತಿದೆ.
ಕ್ರಿಕೆಟ್ ಎಂಬ ಕ್ರೀಡೆ ದೇಶೀಯ ಅಂದರೆ ಗ್ರಾಮೀಣ ಭಾಗದ ಜಾನಪದ ಕ್ರೀಡೆಗಳನ್ನು ಬುಡ ಸಮೇತ ಕಿತ್ತು ಹಾಕುತ್ತಿದೆ. ಅದಕ್ಕೆ ಸರಕಾರಗಳೂ ಸೇರಿದಂತೆ ವ್ಯವಸ್ಥೆ ಪ್ರೋತ್ಸಾಹ ಕೊಡುವಂತೆ ಕಾಣಿಸುತ್ತಿದೆ. ಬ್ರಿಟನ್ ನ ಜನ ಯಾವತ್ತೂ ಕೂಡಾ ಒಂದು ದೇಶದ ಅಭಿವೃದ್ಧಿಯನ್ನು ಬಯಸದ ರಾಷ್ಟ್ರ ಎಂಬುದನ್ನು ಇತಿಹಾಸದಿಂದ ತಿಳಿದಿದ್ದೇವೆ. ಈ ಮಾತು ಅದೆಷ್ಟು ಸತ್ಯ ಅಸತ್ಯವೆಂಬುದನ್ನು, ಪಾಠಗಳನ್ನು ಹೇಳಿಸಿದ ಸರಕಾರಗಳೇ ಹೇಳಬೇಕು.
ಬ್ರಿಟನ್ ನಿಂದ ಬಂದ ಬ್ರಿಟಿಷ್ ಜನಾಂಗವು ಸಾಮ್ರಾಜ್ಯಶಾಹಿಯಾಗಿತ್ತು. ಜಗತ್ತನ್ನೇ ಆಳಿದ, ಸೂರ್ಯ ಮುಳುಗದ ಸಾಮ್ರಾಜ್ಯವಾಗಿತ್ತು. ತನ್ನ ಒಡೆದು ಆಳುವ ನೀತಿಯಿಂದ, ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಲಾಭ ಪಡೆದುಕೊಂಡು ಹೋದರು. ಇದು ‘ಈಸ್ಟ್ ಇಂಡಿಯಾ ಕಂಪನಿ’ಯನ್ನು ಕುರಿತಾದ ವಾಕ್ಯ.
ಇಂತಹ ರಾಷ್ಟ್ರ ಜನರು ಸದಾ ಕ್ರಿಯಾಶೀಲರಾಗಿ, ಆರ್ಥಿಕ ಉತ್ಪನ್ನದಲ್ಲಿ ಮುಳುಗಿದ್ದರೆ, ಆ ದೇಶವು ಪ್ರಗತಿ ಸಾಧಿಸುತ್ತದೆ. ಮೊದಲನೆಯ ಹೊಡೆತ ಬೀಳಬೇಕಾದ ವಲಯವೆಂದರೆ ಆರ್ಥಿಕ ವಲಯ. ಅಂದಾಗ ಜನ ಜೀವನ ಸುಲಭವಾಗಿ ನಡೆಯದಂತೆ, ಬಡತನದಲ್ಲೇ ಬವಣೆಗಳನ್ನು ಎದುರಿಸುವಂತೆ ಮಾಡಬೇಕು. ಅಂದರೆ ಒಂದು ಇಡೀ ದೊಡ್ಡ ಸಮೂಹವನ್ನು ಒಂದೆಡೆ ಕಟ್ಟಿ ಹಾಕಬೇಕು. ಅದಕ್ಕೇನು ಮಾಡಬೇಕೆಂಬ ಒಳ ಪಿತೂರಿಯೇ ಕ್ರಿಕೆಟ್ !
ಅಚ್ಚರಿಯಾದರೂ ತಪ್ಪೇನಿಲ್ಲ. ತನ್ನ ವಿರುದ್ಧದ ಜನರನ್ನು ಒಳಗೊಂಡಂತೆ, ಒಂದು ಚೆಂಡು, ಒಂದು ಬ್ಯಾಟ್, ಮೂರಡಿ ಉದ್ದದ ಆರು ಕಟ್ಟಿಗೆಗಳ ಸಹಾಯದಿಂದ, ಲಕ್ಷೋಪ ಲಕ್ಷ ಜನರನ್ನು ಏಕ ಕಾಲದಲ್ಲಿ ನಿಷ್ಕ್ರಿಯರನ್ನಾಗಿಸುವ ಕಲೆಯನ್ನು ಜಗತ್ತಿಗೆ ತೋರ್ಪಡಿಸಿದರು. ಅದು ಆ ದೇಶದ ಕ್ರೀಡೆ ಎಂಬುದೊಂದು ಹಣೆಪಟ್ಟಿ ! ಅದರಲ್ಲಿ ರೋಚಕ ಅಂಶಗಳಿವೆ ಎಂಬುದನ್ನು ತಲೆಯಲ್ಲಿ ತುಂಬಿ, ಕಾಲ ಕ್ರಮೇಣ ದುಡಿವ ಯುವ ಸಮುದಾಯಕ್ಕೆ ಮೊದಲ ಕೊಡಲಿ ಪೆಟ್ಟು ಕೊಡುವಲ್ಲಿ ಯಶಸ್ವಿಯಾದರು.
ಮುಗ್ಧ ಜನ ಇದನ್ನು ಕ್ರೀಡಾ ಮನೋಭಾವದಿಂದ ಮುಕ್ತವಾಗಿ ಸ್ವೀಕರಿಸಿದರು. ಇದರ ಹಿಂದೆ ನಮ್ಮ ಜೀವನದ ಅಮೂಲ್ಯ ಸಮಯವನ್ನು , ಸಮಯದ ದುಡಿಮೆಯನ್ನು, ದುಡಿಮೆಯ ಹಣವನ್ನು ಸದ್ದಿಲ್ಲದೇ ನಮ್ಮಿಂದ ದೂರವಿರುವಂತೆ ನೋಡಿಕೊಂಡರು. ಇದು ಕಣ್ಣಿಗೆ ಕಂಡರೂ ಅರಿವಿಗೆ ಬಾರದಂತೆ ನೋಡಿಕೊಂಡರಲ್ಲ ಅದು ಅವರ ಚಾಣಾಕ್ಷತನಕ್ಕೆ ಉದಾಹರಣೆ. ಕ್ರಿಕೆಟ್ ಎಂಬ ಭೂತ ಭಾರತದ ಹೆಗಲ ಮೇಲೆ ! ಅಲ್ಲಿಂದಲೇ ಯುವ ಸಮುದಾಯ ಕಾರ್ಯದಲ್ಲಿ ದಕ್ಷತೆ ಕಳೆದುಕೊಳ್ಳುತ್ತಾ ಬಂತು.
ಅಮೆರಿಕ, ಜಪಾನ್, ಇಟಲಿ, ಫ್ರಾನ್ಸ್ ದೇಶಗಳಲ್ಲಿ ಕ್ರಿಕೆಟ್ ಗೆ ಜಾಗವಿಲ್ಲ. ಕಾರಣ ಅತ್ಯಮೂಲ್ಯ ಸಮಯದ ವ್ಯರ್ಥವಾಗುವ ಚಟುವಟಿಕೆಗಳು ಅಲ್ಲಿ ನಿಷಿದ್ಧ. ಸರಕಾರಗಳು ಮಾನವ ಸಂಪನ್ಮೂಲಗಳ ಬಗೆಗೆ ಅತೀವ ಕಾಳಜಿಯನ್ನು ವಹಿಸುತ್ತವೆ. ಆರ್ಥಿಕ ದುರ್ಬಲತೆಗೆ ಕಾರಣ ಕಂಡುಕೊಂಡು ಅಂತಹ ಚಟುವಟಿಕೆಗಳನ್ನು ದೂರವಿಡುತ್ತವೆ. ಹಾಗಾಗಿ ಅಲ್ಲಿ ಅಭಿವೃದ್ಧಿ ಕಾಣಿಸುತ್ತವೆ. ಹಾಗೆಂದ ಮಾತ್ರಕ್ಕೆ ಸಮಸ್ಯೆಗಳಿಲ್ಲ ಎಂದರ್ಥವಲ್ಲ. ಸಮಸ್ಯೆಗಳ ಪ್ರಮಾಣ ಕಡಿಮೆ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೀನ್ಯಾ, ವೆಸ್ಟ್ ಇಂಡೀಸ್ (ಕೆರೆಬಿಯನ್ ರಾಷ್ಟ್ರಗಳು) ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಬಹುತೇಕ ಬ್ರಿಟಿಷ್ ಅಧಿಪತ್ಯ ಸಾಧಿಸಿದ ರಾಷ್ಟ್ರಗಳೇ ಹೆಚ್ಚು.
ಶಿಕ್ಷಣ, ಧರ್ಮ, ಸಂಗೀತ, ಭಾಷೆ ಮತ್ತು ಲಿಪಿ, ಆಹಾರ ಮತ್ತು ಪಾನೀಯ, ಉಡುಗೆ ತೊಡುಗೆ, ಆಚಾರ ವಿಚಾರಗಳು ಎಲ್ಲ ರಂಗಗಳಲ್ಲೂ ದೇಶವನ್ನು ಬದಲಾಯಿಸುವ, ಅನುಕೂಲ ಪಡೆಯುವ,ತಮ್ಮಂತೆ ನಡೆಸಿಕೊಳ್ಳುವ ಸಂಚನ್ನು ಮುಗ್ಧ ಭಾರತೀಯರು ಅರ್ಥಮಾಡಿಕೊಳ್ಳುವಷ್ಟರಲ್ಲಿ ಒಂದು ಶತಮಾನವೇ ಕಳೆದು ಹೋಗಿತ್ತು. ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದ್ದ ಜನತೆ ಕುರುಡಾಗಿದೆ. ದುಡಿಯುವ ಸಮಯದಲ್ಲಿ ಮೋಜು ಮಸ್ತಿಯಲ್ಲಿ ತಲ್ಲೀನವಾದರೆ ದೇಶದ ಅಭಿವೃದ್ಧಿ ಹೇಗೆ ? ಅದಲ್ಲದೇ ಸ್ವಂತ ಜೀವನದ ಅಭಿವೃದ್ಧಿಯಾದರೂ ಹೇಗಾದೀತು ? ಕ್ರಿಕೆಟ್ ಮಂಡಳಿ, ಆಟಗಾರರಿಗೆ ಹೆಚ್ಚು ಹಣ ಹೋದರೆ, ದೇಶದ ಬೊಕ್ಕಸಕ್ಕೆ ದೊರೆಯುವ ಪಾಲೆಷ್ಟು ? ಅದೇ ಕೋಟಿ ಕೋಟಿ ಜನರು ದುಡಿದರೆ ಸಂಗ್ರಹವಾಗುವ ಪಾಲೆಷ್ಟು ? ಆರ್ಥಿಕ ತಜ್ಞರು ಲೆಕ್ಕಿಸಿ ಹೇಳಬೇಕು.
ಕ್ರೀಡೆಗಳು ಮನೋರಂಜನೆಯ ಒಂದು ಭಾಗವಷ್ಟೇ. ಏಕತಾನತೆಗೆ ಕಡಿವಾಣ ಹಾಕಿ, ಸ್ವಲ್ಪ ಹೊತ್ತು ಮನಸ್ಸನ್ನು ಪ್ರಪುಲ್ಲವಾಗಿಡಲು, ದೇಹದ ಅವಯವಗಳು ಚುರುಕಾಗಿರಲು ಸಹಾಯಕ. ಹಾಗೆಂದ ಮಾತ್ರಕ್ಕೆ ಜೀವನ ಪೂರ್ತಿ ಅದೇ ಹೇಗಾದೀತು ? ಅದಕ್ಕೆ ಸಮಯವನ್ನು ನಿಗದಿಗೊಳಿಸಿ, ಪ್ರೋತ್ಸಾಹ ನೀಡುವುದು ಅವಶ್ಯಕವಾಗಿದೆ.
ನೆರೆಯ ರಾಷ್ಟ್ರವನ್ನೇ ನೋಡಿ ಅಲ್ಲೇ ವೃದ್ಧರ ಸಂಖ್ಯೆ ಅಧಿಕವಾಗಿ ಯುವಕರ ಸಂಖ್ಯೆ ಕ್ಷೀಣವಾಗಿದೆ ಹೊಸದಾಗಿ ಮದುವೆಯಾದವರಿಗೆ ಯಾವಾಗ ಮಕ್ಕಳನ್ನು ಮಾಡಿಕೊಳ್ಳುತ್ತೀರಿ ಎಂದು ದೂರವಾಣಿ ಕರೆ ಮಾಡಿ ಕೇಳುವ ಪರಿಸ್ಥಿತಿ ಉಂಟಾಗಿದೆ. ಅಂದರೆ ದುಡಿಯುವ ವರ್ಗದ ಕೊರತೆ ಯನ್ನು ಎದುರಿಸುತ್ತಿದೆ. ನಮ್ಮದು ಹಾಗಾಗಿಲ್ಲ. ಅದಕ್ಕಾಗಿ ಸಮಯದ ಉಪಯೋಗ ತುಂಬಾ ಮುಖ್ಯವಾಗಿದೆ.
ಭಾರತ ನಿಜಕ್ಕೂ ಅದೃಷ್ಟವಂತ ದೇಶ. ಕಾರಣ ನೂರರಲ್ಲಿ ಅರವತ್ತರಷ್ಟು ಯುವಕರಿದ್ದಾರೆಂಬ ಸಂಗತಿಯೇ ರೋಚಕ. ಮಾನವ ಸಂಪನ್ಮೂಲ ಹೇರಳವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಸೂಕ್ತ ರೀತಿಯಲ್ಲಿ ಬಳಸಿಕೊಂಡಲ್ಲಿ ಆರ್ಥಿಕ ಕ್ಷೇತ್ರವನ್ನು ಗಟ್ಟಿಗೊಳಿಸಬಹುದು.
– ರವಿ ಕರಣಂ.
*ರಾಜ್ಯದಲ್ಲಿ 50 ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ಲಭ್ಯವಿದೆ :* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ