Karnataka News

*ವಿಚಿತ್ರ ಕಾಯಿಲೆಗೆ ತುತ್ತಾಗಿದ್ದ ಬಾಲಕನ ಆರೋಗ್ಯದಲ್ಲಿ ಅಲ್ಪ ಚೇತರಿಕೆ*

ಪ್ರಗತಿ ವಾಹಿನಿ ಸುದ್ದಿ, ಕಾರವಾರ:

ಚಿಕ್ಕ ಗುಳ್ಳೆಯೊಂದು ಮುಖದ ತುಂಬೆಲ್ಲ ಆವರಿಸಿ, ಗುಣಮುಖವಾಗುವುದೇ ಕಷ್ಟ ಎಂದುಕೊಂಡಿದ್ದ ಮಗು ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರು ತಿಳಿಸಿದ್ದು, ಎಲ್ಲರ ಹಾರೈಕೆ, ಪ್ರಾರ್ಥನೆ ಫಲಿಸಿದಂತಾಗಿದೆ.

ಕಾರವಾರದ ನಂದನಗದ್ದಾದ ಪ್ರೇಮಾನಂದ ಕಾಂಬ್ಳೆ, ಪ್ರಜ್ಞಾ ಕಾಂಬ್ಳೆ ದಂಪತಿಯ ನಾಲ್ಕು ವರ್ಷದ ಪುತ್ರನ ಕಿವಿಯ ಹಿಂಬದಿಯಲ್ಲಿ ಮೂಡಿದ್ದ ಚಿಕ್ಕ ಗುಳ್ಳೆಯೊಂದು ಮುಖದ ತುಂಬೆಲ್ಲ ಆವರಿಸಿಕೊಂಡು, ಮುಖವನ್ನ ಕಣ್ಣೆತ್ತಿ ನೋಡಲೂ ಆಗದ ಸ್ಥಿತಿಗೆ ತಲುಪಿತ್ತು.

 

ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಷ್ಟೇ ಅಲ್ಲದೇ, ಮಹಾರಾಷ್ಟ್ರದಲ್ಲಿ ನಾಟಿ ಔಷಧ ಮಾಡಿದ್ದರೂ ಮಗುವಿನ ಕಾಯಿಲೆ ಉಲ್ಬಣವಾಗಿತ್ತೇ ವಿನಾ ಗುಣಮುಖವಾಗುವ ಯಾವುದೇ ಲಕ್ಷಣ ಗೋಚರಿಸುತ್ತಿರಲಿಲ್ಲ.

 

ಬಡ ಮೀನುಗಾರ ಕುಟುಂಬದವರಾದ ಮಗುವಿನ ಪಾಲಕರು, ಆರ್ಥಿಕ ಸಮಸ್ಯೆಯಿಂದಾಗಿ ದೊಡ್ಡ ಆಸ್ಪತ್ರೆಗಳಿಗೆ ಮಗುವನ್ನ ಕರೆದುಕೊಂಡು ಹೋಗಲಾಗದೆ ಮನೆಯಲ್ಲೇ ಆರೈಕೆ ಮಾಡಿಕೊಂಡಿದ್ದರು.ಡಿ.10ರಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರಿಗೆ ಈ ಬಗ್ಗೆ ಸ್ಥಳೀಯ ಯುವರಾಜ್ ಎನ್ನುವವರು ಕರೆ ಮಾಡಿ, ಮಗುವಿನ ಹಾಗೂ ಕುಟುಂಬದ ಪರಿಸ್ಥಿತಿಯನ್ನ ವಿವರಿಸಿದರು.

 

ಕಾರವಾರದ ನಂದನಗದ್ದಾದ ನಾಗನಾಥ್ ದೇವಸ್ಥಾನದ ಸಮೀಪವೇ ಇದ್ದ ಇವರ ಪುಟ್ಟ ಮನೆಗೆ ಭೇಟಿ ನೀಡಿದ ಮಾಧವ ನಾಯಕರು, ತಕ್ಷಣವೇ ಮಗುವನ್ನ ತಮ್ಮದೇ ಕಾರಿನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಜಿಲ್ಲಾ ಆಸ್ಪತ್ರೆಯ ವೈದ್ಯರು, ಮಗು ಗುಣಮುಖವಾಗುವ ಬಗ್ಗೆ ಸಂದೇಹ ಹೊಂದಿದ್ದರು.

 

ಆದರೂ ಮಾಧವ ನಾಯಕರ ಕೋರಿಕೆಯ ಮೇರೆಗೆ ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ ಅವರು ಹುಬ್ಬಳ್ಳಿ ಕಿಮ್ಸ್ ವೈದ್ಯರೊಂದಿಗೆ ಮಾತುಕತೆ ನಡೆಸಿ, ಉಚಿತವಾಗಿ ಇಲ್ಲಿಂದ ತೆರಳಲು ಅಂಬ್ಯುಲೆನ್ಸ್ ಮಾಡಿಕೊಟ್ಟಿದ್ದರು.

 

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮಗುವನ್ನ ದಾಖಲು ಮಾಡಿದ ಬಳಿಕ ಮಾಧವ ನಾಯಕರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಇನ್ನಿತರರಿಗೂ ಮಾಹಿತಿ ನೀಡಿ, ಮಗುವಿಗೆ ಉತ್ತಮ ಚಿಕಿತ್ಸೆ ದೊರಕಿಸಿಕೊಡಲು ಪ್ರಯತ್ನಿಸಿದ್ದರು.

 

ಕಿಮ್ಸ್ ವೈದ್ಯರ ತಂಡ ಕೂಡ ಹೆಚ್ಚಿನ ಕಾಳಜಿ ವಹಿಸಿ, ತಪಾಸಣೆ ವೈದ್ಯೋಪಚಾರ ನೀಡಿದ್ದರಿಂದ ಇದೀಗ ಮಗು ಕೊಂಚ ಚೇತರಿಸಿಕೊಂಡು, ತಾನೇ ಕುಳಿತು ಊಟ ಮಾಡುವಷ್ಟರ ಮಟ್ಟಿಗೆ ಬಂದಿದೆ.

 

ಮನೆಯಲ್ಲಿ ನರಳುತ್ತಾ, ಅನ್ನಾಹಾರ ಬಿಟ್ಟಿದ್ದ ಮಗು ಬದುಕುಳಿಯುವ ಬಗ್ಗೆ ಕುಟುಂಬಸ್ಥರು, ವೈದ್ಯರುಗಳಿಗೂ ಅನುಮಾನವಿತ್ತು. ಆದರೆ ಸದ್ಯದ ಮಗುವಿನ ಆರೋಗ್ಯ ಸ್ಥಿತಿಯಂತೆ ಸಂಪೂರ್ಣ ಚೇತರಿಸಿಕೊಂಡು ಮನೆಗೆ ಮರಳುವ ಆಶಾಭಾವನೆ ಮೂಡಿದೆ.

 

ರಕ್ತ ನೀಡಿದ ನರ್ಸ್
ಮಗುವಿನ ತಂದೆ- ತಾಯಿಗಳಿಗೆ ಹೆಚ್ಚೇನು ತಿಳಿವಳಿಕೆ ಇರದ ಕಾರಣ ಮಗುವಿಗೆ ಔಷಧೋಪಚಾರ ಆರೈಕೆ ನೋಡಿಕೊಳ್ಳಲು ಸಮಸ್ಯೆಯಾಗಿತ್ತು. ಆದರೆ ಮಗುವನ್ನು ಕಾರವಾರದಿಂದ ಹುಬ್ಬಳ್ಳಿ ಕಿಮ್ಸ್‍ಗೆ ಕರೆದೊಯ್ದಿದ್ದ ಅಂಬ್ಯುಲೆನ್ಸ್ ಚಾಲಕ ವಿನಾಯಕ ಎನ್ನುವವರು ಅವರ ಪರಿಚಯದ ಖಾಸಗಿ ಆಸ್ಪತ್ರೆಯ ನರ್ಸ್ ಡೀನಾ ಎನ್ನುವವರಿಗೆ ಈ ಬಗ್ಗೆ ತಿಳಿಸಿದ್ದಾರೆ.

 

ಮಾತೃ ಹೃದಯಿ ಡೀನಾ, ಪ್ರತಿನಿತ್ಯ ಆಸ್ಪತ್ರೆಗೆ ಭೇಟಿ ನೀಡಿ ಮಗುವ ಆರೋಗ್ಯದ ಬಗ್ಗೆ, ಅಗತ್ಯತೆಗಳ ಬಗ್ಗೆ ಮಾಹಿತಿ ಪಡೆದು, ಮಗುವಿನ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ.

 

ಎರಡು ದಿನಗಳ ಹಿಂದೆ ಮಗುವನ್ನ ಐಸಿಯುವಿನಲ್ಲಿಟ್ಟಿದ್ದ ಸಂದರ್ಭದಲ್ಲಿ ಏಕಾಏಕಿ ರಕ್ತದ ಕೊರತೆ ಇರುವುದಾಗಿಯೂ ಹಾಗೂ ತುರ್ತು ರಕ್ತ ಪೂರೈಸಲು ವೈದ್ಯರು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ತುರ್ತಾಗಿ ಯಾರೂ ಸಿಗದಕ್ಕೆ ಸ್ವತಃ ನರ್ಸ್ ಬೀನಾ ಅವರೇ ರಕ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.

 

ಕಣ್ಣೀರಾದ ಅಜ್ಜಿ
ಮಗುವನ್ನ ಬಹಳ ಪ್ರೀತಿಸುವ ಅಜ್ಜಿಗೆ ಮಗುವ ಇಂದಿನ ಸ್ಥಿತಿ ಹೇಗಿದೆ ಎಂದು ಮಾಹಿತಿ ಕೊಡುವವರೂ ಯಾರೂ ಇರಲಿಲ್ಲ. ಅಜ್ಜಿಯ ಮನೆಯಲ್ಲಿ ಫೆÇೀನ್ ಕೂಡ ಇಲ್ಲ. ಹೀಗಾಗಿ ಮಾಧವ ನಾಯಕ ಅವರೇ ಶುಕ್ರವಾರ ಅಜ್ಜಿಯ ಮನೆಗೆ ತೆರಳಿ, ಮಗು ಕೊಂಚ ಚೇತರಿಸಿಕೊಂಡು ಊಟ ಮಾಡುತ್ತಿದ್ದ ವಿಡಿಯೋ ತೋರಿಸಿದಾಗ ಅಜ್ಜಿಯ ಕಣ್ಣಲ್ಲಿ ಸಂತಸದಿಂದ ಆನಂದ ಭಾಷ್ಪ ಸುರಿದಿದೆ.

 

ಮಾಧವ ನಾಯಕರಿಗೆ ಕೈಮುಗಿದು ಕೃತಜ್ಞತೆ ಹೇಳಿದರು. ಯಾರೂ ಇಲ್ಲದ ನಮಗೆ ದೇವರಾಗಿ ಬಂದಿರಿ ಎಂದು ಮಾಧವರಿಗೆ ಹೇಳಿದರು.

 

ವೈದ್ಯರೆಲ್ಲ ಮೊದ ಮೊದಲು ಬಾಲಕನಿಗೆ ಆಗಿರುವುದು ಕ್ಯಾನ್ಸರ್ ಎಂದು ತಿಳಿದಿದ್ದರು. ಆದರೆ ಈ ಮೊದಲು ಮಾಡಿದ ಔಷಧದ ದುಷ್ಪರಿಣಾಮ ಆಗಿರುವುದು ಕಿಮ್ಸ್‍ನಲ್ಲಿ ತಪಾಸಣೆ ಮಾಡಿದಾಗ ತಿಳಿದುಬಂದಿದೆ.

 

ಸದ್ಯ ಮಗು ಆರೋಗ್ಯಯುತವಾಗಿ, ಊಟ ತಿಂಡಿ ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಆರಾಮವಾಗಿ ಡಿಸ್ಚಾರ್ಜ್ ಆಗುವ ಸಾಧ್ಯತೆಯೂ ಇದೆ ಎಂದು ಮಾಧವ ನಾಯಕ ತಿಳಿಸಿದ್ದಾರೆ.

 

 

*ಕಾರವಾರ ಬಾಲಕನಿಗೆ ವಿಚಿತ್ರ ಕಾಯಿಲೆ*

https://pragati.taskdun.com/4-year-old-boy-sufferd-from-unidentifide-dieses/

 

https://pragati.taskdun.com/belagavi-police-arested-324-accused-in-last-1-year/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button