Kannada NewsLatestPragativahini Special

ಉತ್ತಮ ಮನೋಭಾವ ನೂರು ಮೀಟರ್ ಓಟದಂತಲ್ಲ…

ಜಯಶ್ರೀ ಜೆ. ಅಬ್ಬಿಗೇರಿ

ಹಲವಾರು ಹಿನ್ನೆಡೆಗಳನ್ನು ಮತ್ತು ಟೀಕೆಗಳನ್ನು ಎದುರಿಸಿ, ಸಕಾರಾತ್ಮಕ ಮತ್ತು ಉತ್ತಮ ಮನೋಭಾವದ ಅಡೆತಡೆಗಳನ್ನು ನಿವಾರಿಸಲು, ಇತರರಿಗೆ ಸ್ಪೂರ್ತಿ ನೀಡಲು, ಸಹಾಯ ಮಾಡುವ ನವೀಕರಿಸಬಹುದಾದ ಶಕ್ತಿಯಂತಹ ಕ್ಷೇತ್ರಗಳಲ್ಲಿ ತಮ್ಮ ಗುರಿಗಳನ್ನು ಸಾಧಿಸಲು ನಿರ್ಧರಿಸುವ ಎಲಾನ್ ಮಸ್ಕ್. ಅಂತೆಯೇ ವೈಫಲ್ಯದ ಬಗ್ಗೆ ಯಾವಾಗಲೂ ಸಕಾರಾತ್ಮಕ ಮನೋಭಾವ ಹೊಂದಿರುವ ವರ್ಜಿನ್ ಗ್ರೂಪ್‌ನ ರಿಚರ್ಡ್ ಬ್ರಾನ್ಸನ್. ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕರು ಬಿಲ್ ಗೇಟ್ಸ್ ತಮ್ಮ ಆಶಾವಾದಿ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರೆಲ್ಲರ ಕೀರ್ತಿ ಅವರ ಮನೋಭಾವದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ನೂರು ಮೀಟರ್ ಓಟದಂತಲ್ಲ

ಯಶಸ್ವಿ ವ್ಯಕ್ತಿಗಳನ್ನು ನೋಡಿದಾಗ ನಾವು ಹೀಗಿದ್ದರೆ ಚೆನ್ನ ಅಂದುಕೊಳ್ತಿವಿ. ಅವರಂತಾದರೆ ನಮ್ಮತನ ಕಳೆದುಕೊಂಡು ಬಿಡ್ತಿವಿ ಅಂತನೂ ಅನಿಸುತ್ತೆ. ಕೆಲವೊಮ್ಮೆ ಹಾಗಾಗಲು ಹೋಗಿ ಪೇಚಿಗೆ ಸಿಲುಕಿ ಹಾಕಿಕೊಳ್ತಿವಿ. ಹಲವೊಮ್ಮೆ ನಗೆಪಾಟಲಿಗೆ ಈಡಾಗುವ ಪ್ರಸಂಗಗಳು ಇಲ್ಲದಿಲ್ಲ. ಹಾಗಿದ್ದರೆ ನಾವು ಹೇಗಿದ್ದರೆ ಚೆನ್ನ ಅನ್ನೋ ಪ್ರಶ್ನೆ ಬಹುತೇಕ ಸಲ ಬಹಳಷ್ಟು ಜನರಿಗೆ ಪ್ರಶ್ನೆಯಾಗಿಯೇ ಉಳಿದುಕೊಂಡು ಬಿಡುತ್ತದೆ. ಜೀವನದಲ್ಲಿ ಚೆನ್ನಾಗಿ ಇರಬೇಕೆಂದರೆ ಒಳ್ಳೆಯ ಗುಣ ಸ್ವಭಾವ ಮನೋಭಾವ ಬೆಳೆಸಿಕೊಳ್ಳಬೇಕೆನ್ನುವ ಹಿರಿಯರ ಕಿವಿಮಾತು ಕಿವಿಗೆ ಮೇಲಿಂದ ಮೇಲೆ ಬೀಳುತ್ತಲೇ ಇರುತ್ತವೆ. ‘ಈ ಒಳ್ಳೆಯ ಮನೋಭಾವವನ್ನು ಬೆಳೆಸಿಕೊಳ್ಳುವ ಪ್ರಕ್ರಿಯೆ 100 ಮೀಟರ್ ಓಟದಂತಲ್ಲ. ಅದು ಮ್ಯಾರಥಾನ ಓಟದಂತೆ.’ ಎಂಬ ಸಂಗತಿ ಗೊತ್ತಾಗಿ ಅದನ್ನು ಮುಂದೂಡುತ್ತಲೇ ಬರಲಾಗುತ್ತದೆ.
ತಡೆ ಹಾಕುವವರಾರು?

ಕೊನೆಗೆ ಅದನ್ನು ಹೊಸ ವರ್ಷದ ಹೊಸ ರೆಸಲ್ಯೂಷನ್ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಈ ಸಲ ನಾನು ಉತ್ತಮ ಮನೋಭಾವದತ್ತ ಹೆಜ್ಜೆ ಹಾಕಿಯೇ ಹಾಕುತ್ತೇನೆ ಎನ್ನುವ ಭರವಸೆಯ ಗೋಪುರಕ್ಕೆ ಪ್ರತಿಬಾರಿ ತಡೆ ಹಾಕುವವರಾರು? ಎಂದು ಪ್ರಶ್ನೆ ಮುಂದಿಟ್ಟುಕೊಂಡು ಉತ್ತರ ಹುಡುಕಿದರೆ ‘ನಾನೇ’ ಎಂಬ ಅಚ್ಚರಿಯ ಉತ್ತರ ಸಿಗುತ್ತದೆ. ತಡೆ ಹಾಕುವವನನ್ನು ಪ್ರೇರೇಪಿಸಿದರೆ ನಿಮ್ಮ ಮನೋಭಾವದಲ್ಲಿ ಅಷ್ಟೇ ಅಲ್ಲ ಕಾರ್ಯಕ್ಷೇತ್ರದಲ್ಲಿ ಸುಧಾರಿತ ಪ್ರದರ್ಶನ ತೋರಲು ಸಾಧ್ಯ. ಹಿಂದೆಂದೂ ಕಾಣದ ಯಶಸ್ಸನ್ನು ಕಾಣಲು ಖಂಡಿತ ಸಾಧ್ಯ. ಯಾವುದೇ ತಗಾದೆ ತೆಗೆಯದೆ ಆತ್ಮವಿಶ್ವಾಸದಿಂದ ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಮನೋಭಾವ ಹೊಂದುವ ಅಶಾಮನೋಭಾವನೆಯನ್ನು ಹೊಂದಿದರೆ ನಿಮ್ಮ ಗೆಲುವಿನ ಪತಾಕೆಯನ್ನು ಎತ್ತಿ ಹಿಡಿಯಲಿದ್ದೀರಿ ಎಂಬುದು ಸತ್ಯದ ಮಾತು. ಉತ್ತಮ ಮನೋಭಾವದ ಕನಸಿಗೆ ಬಣ್ಣ ಹಚ್ಚುವಲ್ಲಿ ಈ ಲೇಖನ ನೆರವಾಗಬಹುದು.

ಉತ್ತಮ ಮನೋಭಾವವೆಂದರೆ…
ಉತ್ತಮ ಮತ್ತು ಧನಾತ್ಮಕ ವರ್ತನೆ ಎಂದರೆ ಪ್ರತಿ ಸನ್ನಿವೇಶದಲ್ಲೂ ಸಕಾರಾತ್ಮಕತೆಯನ್ನು ಕಂಡುಕೊಳ್ಳುವುದರ ಮೇಲೆ ಕೇಂದ್ರೀಕರಿಸುವ ರಚನಾತ್ಮಕತೆ ಹೊಂದುವುದು. ಬೆಳವಣಿಗೆಯ ಪ್ರತಿ ಆಶಾವಾದಿ ಮತ್ತು ಸಮರ್ಪಿತ ಮನಸ್ಥಿತಿಯನ್ನು ಹೊಂದಿರುವುದು. ಒಟ್ಟಾರೆಯಾಗಿ ಜೀವನ ಜನರು ಕೆಲಸ ಮತ್ತು ಘಟನೆಗಳ ಕಡೆಗೆ ಭರವಸೆಯ ದೃಷ್ಟಿಕೋನವನ್ನುö ಹೊಂದಿರುವುದು.

ಉತ್ತಮ ಮನೋಭಾವ ಏಕೆ ಬೇಕು?
ಜೀವನದಲ್ಲಿ ಯಶಸ್ವಿಯಾಗುವುದನ್ನು ಅಥವಾ ಸೊಲನ್ನು ಅನುಭವಿಸುವುದನ್ನು ಕೂಡ ನಿರ್ಧರಿಸುವುದು ನಮ್ಮ ಮನೋಭಾವವೇ. ಅಂದರೆ ಸಕಾರಾತ್ಮಕ ಮನೋಭಾವವು ಯಶಸ್ಸಿಗೆ ನಿರ್ಣಾಯಕವಾಗಿದೆ. ಪ್ರೇರಣೆಯಿಂದಿರಲು, ಅಡೆತಡೆಗಳನ್ನು ನಿವಾರಿಸಲು ಮತ್ತು ಸುತ್ತಮುತ್ತ ಉತ್ತಮ ಸಂಬಂಧಗಳ ನಿರ್ಮಿಸಲು ಸಹಾಯಕವಾಗುತ್ತದೆ. ಇತರರನ್ನು ಪ್ರೇರೇಪಿಸಲು ಉಪಯುಕ್ತ ಸಲಹೆಗಳನ್ನು ನೀಡಲು ಬೇಕು.
ಹಾರ್ವರ್ಡ್ ವಿಶ್ವವಿದ್ಯಾಲಯದ ವಿಲಿಯಂ ಜೇಮ್ಸ್ ಹೇಳುತ್ತಾರೆ, ‘ಮಾನವ, ತನ್ನ ಮನೋಭಾವ ಬದಲಾಯಿಸುವುದರ ಮೂಲಕ ತನ್ನ ಬಾಳ್ವೆಯನ್ನು ಬದಲಿಸಬಹುದು ಎಂಬುದೇ ನಮ್ಮ ಜನಾಂಗದ ಅತ್ಯುನ್ನತ ಶೋಧವಾಗಿದೆ.’

ಉತ್ತಮ ಮನೋಭಾವ ಹೊಂದಲು ಸಾಬೀತಾಗಿರುವ ಸಲಹೆಗಳು, ಗಮನಹರಿಸಿ
ಅರ್ಧ ಖಾಲಿ ಇರುವ ಇಲ್ಲವೇ ಅರ್ಧ ನೀರು ತುಂಬಿರುವ ಗ್ಲಾಸ್‌ನ್ನು ನೋಡಿದಾಗ ನೀವು ನಕಾರಾತ್ಮಕ ಪರಿಸ್ಥಿತಿಯನ್ನು ನೋಡಿದಂತೆ ಗ್ಲಾಸು ಅರ್ಧ ಖಾಲಿಯಾಗಿದೆ ಎಂದು ಉತ್ತರಿಸದೇ ಗ್ಲಾಸು ಅರ್ಧ ತುಂಬಿದೆ ಎಂದು ಉತ್ತರಿಸಲು ಪ್ರಯತ್ನಿಸಿ. ನಕಾರಾತ್ಮಕತೆಯು ಕೆಳಕ್ಕೆ ತಳ್ಳುವುದು ಸಹಜ. ಆದರೆ ನಕಾರಾತ್ಮಕತೆ ಮೇಲೆ ಕೇಂದ್ರೀಕರಿಸಿದರೆ ಪ್ರೇರಣೆ ಬರಿದಾಗುತ್ತದೆ. ಆದ್ದರಿಂದ ಸಕಾರಾತ್ಮಕತೆಯೆಂಬ ಕನ್ನಡಕವನ್ನು ಧರಿಸಿ,
ನಿರೀಕ್ಷಿಸಿ

ಎಂತಹ ದುಸ್ಥಿತಿಯಲ್ಲೂ ಉತ್ತಮವಾದುದನ್ನು ನಿರೀಕ್ಷಿಸಿ. ಧನಾತ್ಮಕವಾದ ಯೋಚನೆಗಳಿಂದ ನಮ್ಮ ವ್ಯಕ್ತಿತ್ವ ಕೂಡಿರಬೇಕು. ಧನಾತ್ಮಕವಾಗಿದ್ದರೆ ಮಾತ್ರ ಸಾಧನೆ ಸಾಧ್ಯ. ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಗಳು ಇದಕ್ಕೆ ಸಾಕ್ಷಿಯಾಗಿವೆ. ಹತ್ತು ಹಲವು ಪ್ರೇರಕ ಮಾತುಗಳನ್ನು ಕೇಳಿಯೇ ಇರುತ್ತೇವೆ. ಅವುಗಳಲ್ಲಿ ಕೆಲವೊಂದನ್ನು ತಪ್ಪದೇ ಕೃತಿಗಿಳಿಸಬೇಕು. ಜ್ಞಾನಿಗಳ ಭಾಷಣದಲ್ಲಿ, ಸ್ವಾಮಿಗಳ ಹಿತೋಪದೇಶದಲ್ಲಿ, ಪ್ರವಚನಕಾರರ ಪ್ರವಚನದಲ್ಲಿ ಗುರುಗಳ ಕಿವಿಮಾತುಗಳಲ್ಲಿ ಕೇಳಿದ ಹಲವು ಬಗೆಯ ಉತ್ತಮ ಆಲೋಚನೆಗಳು ಒತ್ತರಿಸಿ ಬರುತ್ತವೆ.. ಅವು ನಮ್ಮ ಯಶಸ್ಸಿನ ಹಾದಿಗೆ ಬಹಳ ಮುಖ್ಯವಾಗಿ ಬೇಕಾಗುತ್ತವೆ. ಸಕಾರತ್ಮಕತೆ ಎಲ್ಲ ಕಡೆಗೂ ಚಾಚಿಕೊಂಡಾಗ ನಾವು ಸಮಕಾಲೀನವಾಗುತ್ತ ಹೋಗುತ್ತೇವೆ. ನಮ್ಮ ಬದುಕು ಅರ್ಥವಂತಿಕೆಯನ್ನು ವಿಸ್ತರಿಸಿಕೊಳ್ಳುತ್ತದೆ. ಮುಂದೆಯೂ ಸಕಾರಾತ್ಮಕ ಯೋಚನೆಗಳು ಬೆನ್ನು ಬೀಳುವ, ಕಾಡುವ ವಿಚಾರಗಳಾಗಬೇಕು. ನಮ್ಮ ನಂಬಿಕೆಗಳು ನಿರೀಕ್ಷೆಗಳು ಒಳಗೊಂಡಂತೆ ನಾವು ಯೋಚಿಸುವ ರೀತಿಯೇ ನಮ್ಮನ್ನು ಸುಖಕರ ಜೀವನದ ಉತ್ತುಂಗಕ್ಕೆ ತಲುಪಿಸುವುದು.

ತಣ್ಣನೆಯ ನಗು ಹರಿಸಿ
ಯಾವಾಗಲೂ ಒಳಿತನ್ನು ಮೆಲಕು ಹಾಕುವ ಗುಣ ಹೊಂದಬೇಕು. ಆದರೆ ಕೆಲವು ಜನರು ಆಗದ ಹೋಗದ ಮಾತುಗಳನ್ನಾಡುತ್ತ, ಯಾವಾಗಲೂ ನಡೆದ ಕೆಟ್ಟ ಘಟನೆಗಳ ಬಗ್ಗೆ ಮಾತನಾಡುತ್ತಾರೆ. ಇಂತಹವರ ನಕಾರಾತ್ಮಕ ವರ್ತನೆ ಕಿರಿಕಿರಿ ಉಂಟು ಮಾಡುತ್ತದೆ. ಸಿಟ್ಟನ್ನು ತರಿಸುತ್ತದೆ. ಅಂತಹ ಸಂದರ್ಭದಲ್ಲಿ ಕೋಪವನ್ನು ನಿಯಂತ್ರಿಸಿ ಒಂದಿಷ್ಟು ತಣ್ಣನೆಯ ನಗು ಹರಿಸುವ ರೂಢಿ ಮಾಡಿಕೊಳ್ಳಬೇಕು.
ಮಾತು ಕಲಿಯಿರಿ

ಆತ್ಮೀಯರ ಜತೆ ತೋರಿಕೆಯ ಮಾತನಾಡದೆ, ಸಣ್ಣಪುಟ್ಟ ಹುಸಿಮುನಿಸು ಮೆರೆಯಬೇಕು. ಆನು ತಾನುಗಳ ಮಧ್ಯದ ಗೆರೆ ಅಳಿಸಿ ಹಾಕಿ ಆತ್ಮೀಯವಾಗಿ ಮಾತನಾಡಿದರೆ ಮಿಂಚಿನ ಸಂಚಲನ ಮೂಡಿಸಬಲ್ಲೆವು. ಅಪರಿಚಿತರೊಂದಿಗೆ ಕೈ ಕುಲುಕಿ ಮಂದಹಾಸ ಬೀರಿ ಸರಳ ಸಜ್ಜನಿಕೆಯ ಮಾತುಗಳನ್ನಾಡುವ ಅಭ್ಯಾಸ ಮಾಡಿಕೊಂಡರೆ ಸಾಕು ಒಂದೇ ಬಾರಿಗೆ ವಿಖ್ಯಾತರಾಗುವ ಸುಯೋಗವೂ ಉಂಟು. ಅಂದರೆ ಎಲ್ಲೋ ತೆರೆಮರೆಯಲ್ಲಿರುವ ನಾವು ಎಲ್ಲರ ಕಣ್ಮಣಿ ಆಗಬಹುದು. ರೊಧಿಸುವಾಗ ಸಂತೈಸುವ ಕರವಾಗಬೇಕು. ಆ ಶಕ್ತಿಯನ್ನು ಸಂವಹನವು ಹೊಂದಿದೆ. ಸಂವಹನದ ಕೌಶಲ ಉಳ್ಳವರ ಮಾತುಗಳು ವೇದನೆಗೆ ಜತೆಗಾರನಂತೆ. ಬಳಲಿ ಬೆಂಡಾದ ಜೀವಕ್ಕೆ ಚೇತಕದಂತೆ. ಒಟ್ಟಾರೆ ಮಾತಿನಲ್ಲಿ ಸಂವಹನದಲ್ಲಿ ಸರಿದೂಗಿಸುವ ಕಲೆ ಕಲಿಯುವ ಅವಶ್ಯಕತೆಯಿದೆ.

ಪೈಪೋಟಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇತರರೊಂದಿಗೆ ಪೈಪೋಟಿ ನಡೆಸುವುದಕ್ಕಿಂತ ನಿನ್ನೆಯ ನಿನ್ನೊಂದಿಗೆ ನೀನು ಪೈಪೋಟಿಗೆ ಇಳಿಯಲು ವಿಫಲರಾದರೆ ವೈಫಲ್ಯ ಕಟ್ಟಿಟ್ಟ ಬುತ್ತಿ. ನಿನ್ನೊಂದಿಗೆ ನೀ ಪೈಪೋಟಿ ನಡೆಸಿದರೆ ಗಮನಾರ್ಹ ಸಾಧನೆ ಖಂಡಿತ. ಹಲವು ಏರಿಳಿತಗಳನ್ನು ಕಾಣುವ ಬದುಕಿನಲ್ಲಿ ಆರಕ್ಕೇರದ ಮೂರಕ್ಕಿಳಿಯದ ಪರಿಸ್ಥಿತಿಯೂ ಕಂಡು ಬರುತ್ತದೆ. ಮನಸ್ಸನ್ನು ಒಂದು ಶಿಸ್ತಿನ ಚೌಕಟ್ಟಿನಲ್ಲಿ, ಉತ್ತಮ ಮನೋಭಾವದ ಚೌಕಟ್ಟಿನಲ್ಲಿ ತರುವುದೊರೊಳಗೆ ಸುಸ್ತು ಹೊಡೆದು ಹೋಗಿರುತ್ತದೆ. ಆದರೆ ಹಾಗೆ ತರುವಲ್ಲಿ ಯಶಸ್ವಿಯಾದರೆ ಮೈಮನಸ್ಸು ಪುಳಕಗೊಳ್ಳುತ್ತವೆ. ಸಕಾರಾತ್ಮಕತೆಯ ಮನೋಭಾವ ಎಲ್ಲಿಯವರೆಗೆ ಕರೆದುಕೊಂಡು ಹೋಗುತ್ತದೆ ಅಂತ ಆಲೋಚಿಸಿದರೆ ಅನೇಕ ಸಾಧಕರು ಜಾಗತಿಕ ಮಟ್ಟದಲ್ಲಿ ಗೌರವ ಘನತೆ ಹೆಚ್ಚಿಸಿದ ಉದಾಹರಣೆಗಳು ಇಲ್ಲದಿಲ್ಲ. ಜನಮನ್ನಣೆಯನ್ನು ಗಳಿಸಿದ ಸಾಕಷ್ಟು ಉದಾಹರಣೆಗಳೂ ಸಾಕಷ್ಟಿವೆ.

Attitude Quotes

ಸದ್ಗುಣಗಳ ಗಣಿ
ಉತ್ತಮ ಮನೋಭಾವಕ್ಕೆ ಸಂಬಂಧಿಸಿದಂತೆ ಗುಣಗಳ ಪಟ್ಟಿ :

ವಾಸ್ತವಿಕ ಗುರಿ ಹೊಂದಿಸಿ, ನಿಮ್ಮ ಗುರಿಯನ್ನು ಬೆಂಬಲಿಸುವ ಜನರೊಂದಿಗೆ, ರಚನಾತ್ಮಕ ಟೀಕೆಗಳನ್ನು ನೀಡುವ ಜನರೊಂದಿಗೆ ನಿಮ್ಮನ್ನು ಸುತ್ತುವರೆದಿರಿ. ಸಹಾನುಭೂತಿ ಹೊಂದಿ, ಚಿಂತನಶೀಲರಾಗಿ, ಕ್ರಿಯಾಶೀಲರಾಗಿ, ಅಹಂಕಾರವನ್ನು ತಗ್ಗಿಸಿ, ಇತರರನ್ನು ಪ್ರಶಂಸಿಸಿ,ತಿರಸ್ಕಾರಗಳನ್ನು ಎದುರಿಸಿ, ಕಠಿಣ ಸನ್ನಿವೇಶವನ್ನು ಎದೆಗಾರಿಕೆಯಿಂದ ಎದುರಿಸಿ, ತಪ್ಪುಗಳಿಂದ ಕಲಿಯಿರಿ, ಕೀಳರಿಮೆಯಿಂದ ಹೊರ ಬನ್ನಿ, ಬದಲಾವಣೆಗೆ ಒಡ್ಡಿಕೊಳ್ಳಿ, ಸ್ವಯಂ ಸಮಗ್ರತೆ ಹೊಂದಿ. ತಾಳ್ಮೆ ಪ್ರೀತಿಯಿರಲಿ.

ಕೊನೆ ಹನಿ
ಏನೇ ಹೇಳಿ ಮನಸ್ಸಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಭಾವನೆಗಳ ನಡುವೆ ಸೆಣಸಾಟ ನಡೆಯುವುದುಂಟು. ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು ಜಿದ್ದಿಗೆ ಬಿದ್ದವರಂತೆ ಪೈಪೋಟಿ ನಡೆಸುತ್ತವೆ. ಮನದೊಳಗಣ ಭಾವಗಳ ಅವಿನಾಭಾವ ಸಂಬಂಧವನ್ನು ಒಂದುಗೂಡಿಸಿದರೆ ಹೆಗ್ಗಳಿಕೆ ಶತಸಿದ್ಧ. ಆದರೆ ಇದು ಮ್ಯಾರಥಾನ ಓಟದಂತೆ ನಿರಂತರ ಓಡುತ್ತಲೇ ಇರಬೇಕು. ಹಾಗಾದಾಗ ಉತ್ತಮ ಮನೋಭಾವ ರೂಢಿಸಿಕೊಳ್ಳಲು ಸಾಧ್ಯ. ಅದು ಬದುಕಿನಲ್ಲಿ ಒಂದು ಹೊಸ ಅಧ್ಯಾಯಕ್ಕೆ ನಾಂದಿಯಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಜೀವನದ ಹಾದಿಯಲ್ಲಿ ಕಷ್ಟಗಳ ಬಿಸಿ ತಟ್ಟಿದಾಗ ಈ ಉತ್ತಮ ಮನೋಭಾವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ನಮ್ಮ ಮನೋಭಾವವು ನಮ್ಮ ಉತ್ಸಾಹವನ್ನು ಇಂಧನೊಳಿಸುತ್ತದೆ. ಬದುಕನ್ನು ಅಮಿತ ಆನಂದದ ಸಮೃದ್ಧಿಯಲ್ಲಿ ಚೆಂದದ ನಂದನವನದಲ್ಲಿ ತಂದು ನಿಲ್ಲಿಸುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button