*ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟು ಅಂತ್ಯಸಂಸ್ಕಾರದ ವೇಳೆ ಕಣ್ಣು ತೆರೆದ ಒಂದು ವರ್ಷದ ಮಗು*
ಪ್ರಗತಿವಾಹಿನಿ ಸುದ್ದಿ: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗುವನ್ನು ವೈದ್ಯರು ಸಾವನ್ನಪ್ಪಿದೆ ಎಂದು ಮಗುವಿನ ಪೋಷಕರಿಗೆ ತಿಳಿಸಿದರು. ಆದರೆ ಮಗುವನ್ನು ಮೂರ್ತಜಾ ಖಾದ್ರಿ ದರ್ಗಾಕ್ಕೆ ಕರೆತರುವಷ್ಟರಲ್ಲಿ ಕೈ ಕಾಲು ಬಡೆದು ಕಣ್ಣು ತೆಗೆದು ಎಲ್ಲರನ್ನು ನೋಡಲು ಪ್ರಾರಂಭಿಸಿದೆ.
ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಮಗು ಇಳಕಲ್ ದರ್ಗಾದಲ್ಲಿ ಪುನರ್ಜನ್ಮ ಪಡೆದಿದೆ. ಒಂದು ವರ್ಷದ ಮಗುವಿನ ಅಂತ್ಯಸಂಸ್ಕಾರಕ್ಕೆ ಬಂದ ಸಂಬಂಧಿಕರು ಹಾಗೂ ಆಪ್ತರು ಖುಷಿಯಿಂದ ವಾಪಸಾದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ.
ಇಳಕಲ್ ನಗರದ ಕೊರವರ ಓಣಿಯ ನಿವಾಸಿ ಬಸವರಾಜ್ ಬಜಂತ್ರಿ ಅವರ ಪುತ್ರ 1 ವರ್ಷದ ದ್ಯಾಮನ್ನ ಬಸವರಾಜ ಭಜಂತ್ರಿ ಹಲವು ತಿಂಗಳಿಂದ ಕಾಯಿಲೆಗೆ ತುತ್ತಾಗಿದ್ದ. ಮಗುವಿನ ಆರೋಗ್ಯ ಸುಧಾರಣೆಗಾಗಿ ಪೋಷಕರು ಹಲವಾರು ಆಸ್ಪತ್ರೆಗೆ ತೋರಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಮಗುವಿನ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು, ವೈದ್ಯರು ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎಂದು ಮಗುವಿನ ಪೋಷಕರಿಗೆ ತಿಳಿಸಿದರು. ಪೋಷಕರು ತಮ್ಮ ಎಲ್ಲಾ ಸಂಬಂಧಿಕರಿಗೆ ವಿಷಯ ತಿಳಿಸಿ ತಮ್ಮ ಸ್ವಂತ ಊರಾದ ಇಳಕಲ್ ನಗರಕ್ಕೆ ಮಗುವಿನ ಶವವನ್ನು ತರಲು ನಿರ್ಧರಿಸಿದರು, ವಿಷಯ ತಿಳಿದ ಸಂಬಂಧಿಕರು ಮಗುವಿನ ಅಂತ್ಯಸಂಸ್ಕಾರಕ್ಕೆ ಆಗಮಿಸಿದರು.
ಬಾಗಲಕೋಟೆಯಿಂದ ಮಗುವನ್ನು ಕರೆತರುವ ಸಮಯದಲ್ಲಿ ಮಗು ಕೈ ಅಲುಗಾಡಿಸಿದೆ. ವಾಹನದಲ್ಲಿರುವರು ಮಗುವನ್ನು ಗಮನಿಸಿ ಬೆಚ್ಚಿಬಿದ್ದು ಇದು ದೇವರ ಕೃಪೆ ನಾವು ಮನೆಗೆ ಕರೆದುಕೊಂಡು ಹೋಗುವುದು ಬೇಡ, ಮೂರ್ತಜಾ ಖಾದ್ರಿ ದರ್ಗಾಕ್ಕೆ ಕರೆದುಕೊಂಡು ಹೋಗಿ ಅಜ್ಜನ ಮಡಿಲಿಗೆ ಓಪ್ಪಿಸೋಣ ಎಂದು ದರ್ಗಾಕ್ಕೆ ಕರೆ ತಂದರು. ಈ ವೇಳೆ ಮಗು ಕೈ ಕಾಲು ಬಡೆದು ಕಣ್ಣು ತೆಗೆದು ಎಲ್ಲರನ್ನು ನೋಡಲು ಪ್ರಾರಂಭಿಸಿತು. ನಂತರ ಮಗುವನ್ನು ಮತ್ತೋಮ್ಮೆ ಪರೀಕ್ಷಿಸಲು ಇಳಕಲ್ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ