Kannada NewsKarnataka NewsNational
*ಚಿರತೆಯೊಂದಿಗೆ ಧೈರ್ಯದಿಂದ ಹೋರಾಡಿದ ಯುವಕ*

ಪ್ರಗತಿವಾಹಿನಿ ಸುದ್ದಿ: ತನ್ನ ಮೇಲೆ ದಾಳಿ ಮಾಡಿದ ಚಿರತೆಯೊಂದಿಗೆ ಹೋರಾಡಿ ಯುವಕನೊಬ್ಬ ಪ್ರಾಣ ಉಳಿಸಿಕೊಂಡ ರೋಚಕ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನವೀನ್ (24) ಚಿರತೆ ದಾಳಿಯಿಂದ ಗಾಯಗೊಂಡ ಯುವ ರೈತ. ನವೀನ್ ಎಂದಿನಂತೆ ಇಂದು ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿದೆ. ಆಗ ಕೈಯಲ್ಲಿ ಕುಡುಗೋಲು ಹಿಡಿದಿದ್ದರಿಂದ ಚಿರತೆ ವಿರುದ್ಧ ನವೀನ್ ಧೈರ್ಯದಿಂದ ಸೆಣೆಸಾಡಿದ್ದಾರೆ.
ಇತ್ತ ಚಿರತೆಯೊಂದಿಗೆ ಹೋರಾಡುತ್ತಿದ್ದ ನವೀನ್ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿ ಬಂದಿದ್ದಾರೆ. ಜನ ಸೇರುತ್ತಿದ್ದಂತೆಯೇ ಚಿರತೆ ಕಾಡಿನೊಳಗೆ ಓಡಿ ಹೋಗಿದೆ.
ಚಿರತೆ ದಾಳಿಯಿಂದ ನವೀನ್ ಕೈ ಕಾಲಿಗೆ ಗಾಯಗಳಾಗಿದ್ದು, ಕೂಡಲೇ ಆತನನ್ನು ಹೊಳೆನರಸೀಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ನವೀನ್ ಆರೋಗ್ಯ ವಿಚಾರಿಸಿದ್ದಾರೆ.




