Belagavi NewsBelgaum NewsKannada NewsKarnataka NewsNationalPolitics

*ನಕಲಿ ಔಷಧ ಮಾರಾಟ ಆರೋಪ: ವಿವಾ ಫಾರ್ಮಾ ವಿರುದ್ಧ ಕರವೇ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ನಕಲಿ ಔಷಧ ಮಾರಾಟದ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ವಿವಾ ಫಾರ್ಮಾ ಸಂಸ್ಥೆಯೂ ಈ ಜಾಲದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಈ ಸಂಬಂಧ ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ 11.30ಕ್ಕೆ ಜ್ಯೋತಿ ಕಾಲೇಜು ಎದುರಿನಲ್ಲಿರುವ ವಿವಾ ಫಾರ್ಮಾ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಔಷಧಗಳ ಪ್ಯಾಕೇಟ್‌ಗಳಿಗೆ ನಕಲಿ ಲೇಬಲ್‌ಗಳನ್ನು ಅಂಟಿಸಿ, ನಕಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಇಂತಹ ಕೃತ್ಯಗಳು ಸಾರ್ವಜನಿಕರ ಆರೋಗ್ಯ ಹಾಗೂ ಜೀವಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ಕರವೇ ಆತಂಕ ವ್ಯಕ್ತಪಡಿಸಿದೆ.

ಹೊರರಾಜ್ಯಗಳಿಂದ ನಕಲಿ ಔಷಧಗಳನ್ನು ತಂದು, ವಿವಿಧ ಔಷಧ ಕಂಪನಿಗಳ ಹೆಸರಿನ ಲೇಬಲ್‌ಗಳನ್ನು ಅಂಟಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಕರವೇ ಆರೋಪಿಸಿದೆ. ಈ ಜಾಲವು ರಾಜ್ಯದ ವಿವಿಧ ಪ್ರದೇಶಗಳಲ್ಲಿ ವ್ಯಾಪಕವಾಗಿರುವ ಸಾಧ್ಯತೆ ಇರುವುದರಿಂದ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ವಿವಾ ಫಾರ್ಮಾ ಮಾಲೀಕರನ್ನು ಬಂಧಿಸಿ, ಅವರು ರಾಜ್ಯದ ಇತರ ಪ್ರದೇಶಗಳಲ್ಲಿ ನಡೆಸುತ್ತಿರುವ ಔಷಧ ವ್ಯಾಪಾರವನ್ನೂ ಪರಿಶೀಲಿಸಿ, ತಪ್ಪಿತಸ್ಥರೆಂದು ತನಿಖೆಯಲ್ಲಿ ದೃಢಪಟ್ಟಲ್ಲಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರವೇ ಆಗ್ರಹಿಸಿದೆ.

ಅಲ್ಲದೆ, ನಕಲಿ ಔಷಧಗಳ ಮೂಲ, ಅವುಗಳನ್ನು ರಾಜ್ಯಕ್ಕೆ ತರುತ್ತಿರುವವರು, ನಕಲಿ ಲೇಬಲ್‌ಗಳನ್ನು ಸಿದ್ಧಪಡಿಸುವವರು ಹಾಗೂ ಇವುಗಳ ವಿತರಣಾ ಜಾಲದ ಕುರಿತು ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬೇಡಿಕೆಯನ್ನು ಕರವೇ ಮುಂದಿಟ್ಟಿದೆ.

ಈ ಪ್ರಕರಣದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಔಷಧ ನಿಯಂತ್ರಣ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ನಕಲಿ ಔಷಧ ಮಾರಾಟದ ಜಾಲದ ಸಂಪೂರ್ಣ ವಿವರವನ್ನು ಬಹಿರಂಗಪಡಿಸಬೇಕು ಎಂದು ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.

Related Articles

Back to top button