Kannada NewsKarnataka NewsPolitics

HD ಕುಮಾರಸ್ವಾಮಿಗೊಂದು ಬಹಿರಂಗ ಪತ್ರ

ಮಾನ್ಯ ಕೇಂದ್ರ ಸಚಿವರೂ, ಜೆಡಿಎಸ್ ನಾಯಕರೂ ಆದ ಎಚ್. ಡಿ. ಕುಮಾರಸ್ವಾಮಿಯವರೆ,

      ಎರಡು ತಿಂಗಳ ಹಿಂದಷ್ಟೆ ನೀವು ಲೋಕಸಭೆ  ಚುನಾವಣೆಯಲ್ಲಿ ಆಯ್ಕೆಯಾದಿರಿ. ನಿಮ್ಮನ್ನು ಪ್ರಧಾನಿ ಮೋದಿಯವರು ಕೇಂದ್ರ ಸಚಿವರನ್ನಾಗಿ ಮಾಡಿದರು, ಅಲ್ಲದೆ ಎರಡು ಖಾತೆಗಳನ್ನೂ ನೀಡಿದರು. ಅದು ಈ ರಾಷ್ಟ್ರದ ಜನರ ಸೇವೆಗಾಗಿ. ಆದರೆ ನಿಮಗೆ ನಿಮ್ಮ ಆ ಸ್ಥಾನದ ಮಹತ್ವವೇ ತಿಳಿದಂತಿಲ್ಲ ಅಥವಾ ನಿಮಗೆ ನಿಮ್ಮ ಕರ್ತವ್ಯದ ಎಚ್ಚರವೇ ಇದ್ದಂತಿಲ್ಲ. ಇದು ಬೆಸರದ ವಿಷಯ. ನೀವು ಮತ್ತೆ ಕರ್ನಾಟಕಕ್ಕೆ ಬಂದು ಬಿಜೆಪಿ ಜತೆ ಪಾದಯಾತ್ರೆಯಲ್ಲಿ ಭಾಗವಹಿಸಿ ಡಿ. ಕೆ. ಶಿವಕುಮಾರರೊಂದಿಗೆ ಕಚ್ಚಾಡುತ್ತ ಕುಳಿತಿದ್ದೀರಿ. ನಿಮ್ಮ ಕರ್ತವ್ಯ ನೀವು ಮರೆತಹಾಗಿದೆ. ನೀವು ಕೇಂದ್ರ ಸಚಿವರಾಗಿ ದೇಶದ ಎಲ್ಲ ರಾಜ್ಯಗಳಿಗೆ ಸಂಬಂಧ ಪಟ್ಟವರು. ಮೊದಲು ನಿಮ್ಮ ಆಫೀಸಿನಲ್ಲಿ ಕುಳಿತು ನಿಮ್ಮ ಖಾತೆಗಳ ಬಗ್ಗೆ ತಿಳಿದುಕೊಂಡು ದೇಶದ ಜನರಿಗಾಗಿ ನಿಮ್ಮ ಖಾತೆಗಳ ಮೂಲಕ ಯಾವ ಬಗೆಯ  ಕೊಡುಗೆಗಳನ್ನು ಕೊಡಬಹುದೆಂಬುದನ್ನು ಯೋಚಿಸಬೇಕು. 

ನೀವು ರಾಜ್ಯಕ್ಕೆ ಬರಬಾರದು ಎಂದಲ್ಲ. ಪಕ್ಷದ ಬಗ್ಗೆ ಯೋಚಿಸಬಾರದು ಎಂದೂ ಅಲ್ಲ. ಆದರೆ ರಾಷ್ಟ್ರದ ಸಚಿವ ಸ್ಥಾನದ ಕೆಲಸ ಬಿಟ್ಟು ಇಲ್ಲೇ ಕುಳಿತು  ರಾಜ್ಯ ಸರಕಾರದ ವಿರುದ್ದ, ಸಚಿವರ ವಿರುದ್ಧ ಜಗಳ ಮಾಡುತ್ತ ಕಾಲಹರಣ ಮಾಡುವುದನ್ನು ಯಾರೂ ಮೆಚ್ಚಲು ಸಾಧ್ಯವಿಲ್ಲ. ಈಗಿನ ನಿಮ್ಮ ಸ್ಥಾನಕ್ಕೆ ನೀವೀಗ ನಡೆದುಕೊಳ್ಳುತ್ತಿರುವ ರೀತಿಯಿಂದ ಯಾವ ಗೌರವವೂ ಬರಲಾರದು. ಅಲ್ಲದೆ ನಿಮ್ಮ ಮತ್ತು ಡಿಕೆಶಿ ನಡುವಿನ ಆಸ್ತಿಪಾಸ್ತಿ ಜಗಳದಿಂದ ನಮ್ಮ ರಾಜ್ಯದ ಜನರಿಗಾಗಲಿ, ರಾಜ್ಯದ ಅಭಿವೃದ್ದಿಗಾಗಲಿ ಏನು ಸಂಬಂಧವಿದೆ? ಏನು ಪ್ರಯೋಜನವಿದೆ? 

ನೀವು ದೇಶದ ಬಗ್ಗೆ , ನಿಮ್ಮ ಖಾತೆಯ ಬಗ್ಗೆ , ಜನರ  ಸಮಸ್ಯೆಗಳ ಪರಿಹಾರದ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಬೇಕಾದ ಸಮಯ ಇದು. ಮೋದಿಯವರು ಇದನ್ನೆಲ್ಲ ಗಮನಿಸುವುದಿಲ್ಲ ಎಂದು ತಿಳಿದುಕೊಳ್ಳಬೇಡಿ. ಒಂದು ವೇಳೆ ನಿಮಗೆ ರಾಜ್ಯ ರಾಜಕೀಯದ ಕುರಿತಾಗಿಯೆ ಹೆಚ್ಚು ಆಸಕ್ತಿ ಇದೆ ಎಂದಾದರೆ ಯಾಕೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಿರಿ? . ಟಿಕೆಟ್ ಬೇಡ ಎನ್ನಬೇಕಿತ್ತು. ರಾಜ್ಯದಲ್ಲೇ ಇದ್ದು ಕಚ್ಚಾಡುತ್ತ ಕುಳಿತುಕೊಳ್ಳಬಹುದಿತ್ತು. ಮೊದಲು ನಿಮ್ಮ ಕರ್ತವ್ಯದ ಕಡೆ ಗಮನ ಕೊಡಿ. ಬೇರೆ ಬೇರೆ ರಾಜ್ಯಗಳಲ್ಲಿ ಸಂಚರಿಸಿ. ನಿಮ್ಮ ಖಾತೆಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಯೋಚಿಸಿ. ಮೊದಲಿನ ಹಾಗೆ ಮಂಡ್ಯ ಹಾಸನ ರಾಮನಗರ ಚೆನ್ನಪಟ್ಟಣ ಇವೇ ನಿಮ್ಮ ಕಾರ್ಯಕ್ಷೇತ್ರಗಳಲ್ಲ. ಒಂದು ಒಳ್ಳೆಯ ಅವಕಾಶ ದೊರಕಿರುವಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಿ. ಖಾತೆಗಳಿಗೂ ನಿಮ್ಮ ಸರಕಾರಕ್ಕೂ ಒಳ್ಳೆಯ ಹೆಸರು ಬರುವಂತೆ ಮಾಡಿ.  ಆಗ ನಾವೂ ಅದಕ್ಕಾಗಿ ಹೆಮ್ಮೆ ಪಡುತ್ತೇವೆ. ಈಗ ನೀವು ನಡೆದುಕೊಳ್ಳುತ್ತಿರುವ ರೀತಿ ನೀತಿಗಳನ್ನು ನಾವು ಖಂಡಿತವಾಗಿಯೂ ಒಪ್ಪಲಾರೆವು. ಬಿಜೆಪಿಯವರು ಪಾದಯಾತ್ರೆ ಮಾಡಲಿ. ನೀವು ಅದಕ್ಕೆ ನೈತಿಕ ಬೆಂಬಲ ಕೊಡಿ ಸಾಕು. ನೀವೀಗ ಕೇಂದ್ರ ಸಚಿವರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ನಿಮ್ಮ ಹುದ್ದೆಗೆ ಮೊದಲು ನ್ಯಾಯ ಒದಗಿಸಿ. 

ದಯವಿಟ್ಟು ತಕ್ಷಣ ದಿಲ್ಲಿಗೆ ಹೋಗಿ. ಅದರಲ್ಲೇ ನಿಮ್ಮ ಹಿತ , ಜನರ ಹಿತ ಎರಡೂ ಅಡಗಿದೆ. ನಾನೂ ಒಬ್ಬ ಭಾರತೀಯ ಪ್ರಜೆಯಾಗಿ ನಿಮಗೆ ಈ ಹಿತವಚನ ಹೇಳುವ ಅಧಿಕಾರ ಹೊಂದಿದ್ದೇನೆ. ಇದು ನನ್ನೊಬ್ಬನ ವಿಚಾರವೇನಲ್ಲ. ಬಹಳಷ್ಟು ಜನರ ಮನಸ್ಸಿನ ಮಾತನ್ನೇ ನಾನು ಹೇಳಿದ್ದೇನೆ. ನೀವ್ಯಾರು ನನಗೆ ಹೇಳುವವರು, ನನಗೆ ನನ್ನ ಕೆಲಸ ಏನು ಎಂದು ಗೊತ್ತು ಎಂದೇನಾದರೂ ನೀವು ಅಂದುಕೊಂಡರೆ ಅದೇ ನಿಮ್ಮ ಅಧ:ಪತನಕ್ಕೆ ದಾರಿಯಾದೀತು. 

                   – ಎಲ್. ಎಸ್. ಶಾಸ್ತ್ರಿ, ಬೆಳಗಾವಿ ಮತ್ತು ನನ್ನ ಈ ವಿಚಾರ ಬೆಂಬಲಿಸುವವರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button