ಹೊಸಪೇಟೆಯ ಶಾಸಕರ ಕಚೇರಿ ನಾಮಫಲಕ ತೆರವು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖಾತೆಯಿಂದ ತೀವ್ರ ಅಸಮಾಧಾನಗೊಂಡಿರುವ ಶಾಸಕ ಆನಂದ ಸಿಂಗ್ ಬುಧವಾರವೇ ತಮ್ಮ ಸಚಿವಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆಗಳಿವೆ.
ಇನ್ನೊಂದು ಮೂಲಗಳ ಪ್ರಕಾರ ಅವರು ಈಗಾಗಲೆ ಮುಖ್ಯಮಂತ್ರಿಗಳಿಗೆ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
ತಮಗೆ ನೀಡಿರುವ ಪ್ರವಾಸೋದ್ಯಮ ಮತ್ತು ಪರಿಸರ, ಜೀವಿಶಾಸ್ತ್ರ ಖಾತೆಯಿಂದ ತೀವ್ರ ಅಸಮಾಧಾನಗೊಂಡಿರುವ ಆನಂದ ಸಿಂಗ್ ಈಗಾಗಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಖಾತೆ ಬದಲಾವಣೆ ಮಾಡಲು ವಿನಂತಿಸಿ, ಅದಕ್ಕೆ ಗಡುವನ್ನೂ ನೀಡಿದ್ದಾರೆ. ಗಡುವಿನೊಳಗೆ ಖಾತೆ ಬದಲಾಗದಿದ್ದರೆ ನನ್ನ ರಾಜಿನಾಮೆ ಅಂಗೀಕರಿಸಿ ಎಂದು ಪತ್ರವನ್ನೂ ಕೊಡ್ಡು ಬಂದಿದ್ದಾರೆ ಎನ್ನಲಾಗುತ್ತಿದೆ.
ಈ ಮಧ್ಯೆ ಮಂಗಳವಾರ ಸಂಜೆ ಹೊಸಪೆಟೆಯ ರಾಣಿಪೇಟೆಯಲ್ಲಿರುವ ಆನಂದ್ ಸಿಂಗ್ ಅವರ ಶಾಸಕರ ಕಚೇರಿಯ ನಾಮಫಲಕ ತೆರವುಗೊಳಿಸಲಾಗಿದೆ. ಬುಲ್ಡೋಜರ್ ಹಚ್ಚಿ ನಾಮಫಲಕ ತೆಗೆಯಲಾಗಿದೆ. ಬುಧವಾರದಿಂದ ಇಲ್ಲಿ ಶಾಸಕರು ಲಭ್ಯವಿರುವುದಿಲ್ಲ, ಸಾರ್ವಜನಿಕರ ಅಹವಾಲು ಸ್ವೀಕರಿಸುವುದಿಲ್ಲ ಎಂದು ತಿಳಿಸಲಾಗಿದೆ.
ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸಚಿವ ಆನಂದ ಸಿಂಗ್ ನಿರಾಕರಿಸಿದ್ದಾರೆ. ನನ್ನ ತೀರ್ಮಾನವನ್ನು ಈಗಾಗಲೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಇದನ್ನು ಹೊರತುಪಡಿಸಿ ಮತ್ತೇನನ್ನೂ ಹೇಳಲಾರೆ ಎಂದಿದ್ದಾರೆ.
ಯಾವುದೇ ಕಾರಣಕ್ಕೂ ನನ್ನ ನಿಲುವಿನಿಂದ ಹಿಂದೆ ಸರಿಯಲಾರೆ ಎಂದು ಅವರು ಈಗಾಗಲೆ ತಿಳಿಸಿದ್ದಾರೆ.
ತಮ್ಮ ಖಾತೆ ಬದಲಾಗದಿದ್ದರೆ ಅಧಿಕಾರ ವಹಿಸಿಕೊಳ್ಳಲಾರೆ, ಸ್ವಾತಂತ್ರ್ಯೋತ್ಸವದ ದಿನ ಧ್ವಜಾರೋಹಣವನ್ನೂ ಮಾಡಲಾರೆ ಎಂದು ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ