
ಪ್ರಗತಿವಾಹಿನಿ ಸುದ್ದಿ, ಕಾರವಾರ -: ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಇಂಟರ್‌ನೆಟ್ ಸೇವೆ ಮಂದಗತಿಯಲ್ಲಿದ್ದು, ಇದರಿಂದ ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿದೆ. ಸರ್ಕಾರದ ಯೋಜನೆ ಯಶಸ್ವಿಯಾಗುವಲ್ಲಿ ಬಿಎಸ್‌ಎನ್‌ಎಲ್ ಕಾರ್ಯನಿರ್ವಹಿಸುವಲ್ಲಿ ಸಕ್ರಿಯವಾಗಬೇಕೆಂದು ಸಂಸದ ಅನಂತ ಕುಮಾರ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಬಿಎಸ್‌ಎನ್‌ಎಲ್, ಬಿಬಿಎನ್‌ಎಲ್, ಸಿಎಸ್‌ಸಿ, ಹೆಸ್ಕಾಂ, ನಾಡಕಛೇರಿ, ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಇಂಟರ್‌ನೆಟ್ ಸೇವೆ ನಿಧಾನಗತಿಯಲ್ಲಿದ್ದು, ಇದರಿಂದ ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿದೆ ಹಾಗೂ ನೆಟ್ವರ್ಕ್ ವೇಗ ಹಾಗೂ ಸಂಪರ್ಕವನ್ನು ಜುಲೈ ೧೫ರೊಳಗೆ ಕಾರ್ಯಗತಗೊಳಿಸಬೇಕು. ಕಳಪೆಮಟ್ಟದ ಕನೆಕ್ಷನ್ ಸರಿಪಡಿಸಿ ಉತ್ತಮ ಮಟ್ಟದ ಬ್ರಾಡ್ ಕಾಸ್ಟ್ ಒದಗಿಸುವ ವ್ಯವಸ್ಥೆ ಶೀಘ್ರವೇ ಜಾರಿಯಾಗಬೇಕು ಮತ್ತು ಪ್ರತಿ ತಿಂಗಳು ಜಿಲ್ಲಾ ಪಂಚಾಯತ ಜೊತೆಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳು ಸಭೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಸಂಸದರು ಹೇಳಿದರು.
ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ಮಾತನಾಡಿ, ಬಿಎಸ್‌ಎನ್‌ಎಲ್‌ನ ಸ್ಥಳೀಯ ಹಾಗೂ ಉನ್ನತಮಟ್ಟದ ಅಧಿಕಾರಿಗಳು ಸಮಸ್ಯೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದು, ಪದೇ ಪದೆ ಒಂದೇ ವಿಷಯದ ಕುರಿತು ಚರ್ಚಿಸುವ ಬದಲು ತಮ್ಮ ಯಾವುದೇ ಆಂತರಿಕ ಭಿನ್ನಾಬಿಪ್ರಾಯಗಳಿಗೆ ಆಸ್ಪದ ನೀಡದೇ ಜುಲೈ ೧೫ರೊಳಗೆ ಸಮಸ್ಯೆ ಬಗೆ ಹರಿಸಿ ಉತ್ತಮ ಮಟ್ಟದ ನೆಟ್ವರ್ಕ್ ಸಂಪರ್ಕವನ್ನು ಒದಗಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿಇಒ ಎಂ.ರೋಷನ್, ಕಾರವಾರ -ಅಂಕೋಲಾ ಕ್ಷೇತ್ರಗಳ ಶಾಸಕಿ ರೂಪಾಲಿ ನಾಯ್ಕ, ಬಿಎಸ್‌ಎನ್‌ಎಲ್ ಅಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ