
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ.
ಬಿಮ್ಸ್ ಸಂಸ್ಥೆಯು ಇತ್ತೀಚೆಗೆ ಇಂಡಿಯಾ ಟುಡೇ ಸಂಸ್ಥೆಯು ನಡೆಸಿದ ʼಬೆಸ್ಟ್ ಮೆಡಿಕಲ್ ಕಾಲೇಜ್ ಆಫ್ ಇಂಡಿಯಾʼಸಮೀಕ್ಷೆಯಲ್ಲಿ ದೇಶದ 884 ವೈದ್ಯಕೀಯ ಕಾಲೇಜುಗಳ ಪೈಕಿ 32ನೇ ರ್ಯಾಂಕ್ ಪಡೆದುಕೊಂಡಿದೆ. ಕಳೆದ ವರ್ಷವೂ 33 ನೇ ರ್ಯಾಂಕ್ ಪಡೆದುಕೊಂಡಿದ್ದ ಬಿಮ್ಸ್ ಈ ವರ್ಷ ಒಂದು ಸ್ಥಾನವನ್ನು ಮೇಲೇರಿ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಸಂಸ್ಥೆಯ ಹೆಗ್ಗಳಿಕೆಯನ್ನು ಇಮ್ಮಡಿಗೊಳಿಸಿದೆ.
ಸಂಸ್ಥೆಯ ಅಗತ್ಯ ಸೌಲಭ್ಯ, ಸೇವಾಯೋಗ್ಯ ಸ್ಥಳ, ವೈಜ್ಞಾನಿಕ ಪ್ರವೇಶಾತಿ, ಉದ್ಯೋಗ ಪೂರಕ ಕೋರ್ಸ್, ಶೈಕ್ಷಣಿಕ ಗುಣಮಟ್ಟ, ಕೌಶಲಪೂರ್ಣ ತರಬೇತಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಸೇರಿದಂತೆ ಇತರ ಹಲವು ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಇಂಡಿಯಾ ಟುಡೇ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು 32ನೇ ರ್ಯಾಂಕನ್ನು ಗಿಟ್ಟಿಸಿಕೊಂಡಿದೆ.
ಬೆಳಗಾವಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ ಬದಿಯಿರುವ ಬಿಮ್ಸ್ ಸಂಸ್ಥೆ 2005ರಲ್ಲಿ ಸುಮಾರು 33 ಎಕರೆ ವಿಸ್ತೀರ್ಣದ ವಿಶಾಲ ಜಾಗದಲ್ಲಿ ನಿರ್ಮಾಣಗೊಂಡಿರುತ್ತದೆ. 2010ರಲ್ಲಿ ಮೊದಲ ಎಮ್‌ಬಿಬಿಎಸ್ ಬ್ಯಾಚ್ ತೇರ್ಗಡೆಹೊಂದಿತು. ಇಲ್ಲಿಯವರೆಗೆ 1500ಕ್ಕೂ ಅಧಿಕ ಎಮ್‌ಬಿಬಿಎಸ್ ಮತ್ತು ನೂರಾರು ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಸ್ಥೆಯಿಂದ ತೇರ್ಗಡೆಹೊಂದಿ ವೈದ್ಯಕೀಯ ಸೇವೆಯಲ್ಲಿ ನಿರತರಾಗಿದ್ದಾರೆ. ಎಮ್‌ಬಿಬಿಎಸ್, ಸ್ನಾತಕೋತ್ತರ ( ಎಂಡಿ, ಎಂಎಸ್) ಜಿಎನ್‌ಎಮ್, ಬಿಎಸ್‌ಸಿ, ಪ್ಯಾರಾಮೆಡಿಕಲ್, ನರ್ಸಿಂಗ್ ಸೇರಿದಂತೆ ವೈದ್ಯಕೀಯ ಸೇವಾ ಕ್ಷೇತ್ರದ ಹಲವು ಕೋರ್ಸ್‌ಗಳನ್ನು ಸಂಸ್ಥೆಯು ಅನುಷ್ಠಾನಗೊಳಿಸಿದೆ.
ಬೆಳಗಾವಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ, ಹೊರ ರಾಜ್ಯದ ರೋಗಿಗಳು ಬಿಮ್ಸ್‌ನಲ್ಲಿ ಗುಣಮಟ್ಟದ ಸೇವೆ ಪಡೆದುಕೊಂಡು ಗುಣಮಖರಾಗುತ್ತಿದ್ದಾರೆ. ಔಷಧಿ, ಶಸ್ತ್ರಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಹೆರಿಗೆ, ಸ್ತ್ರೀರೋಗ ಶಾಸ್ತ್ರ, ಕಿವಿ ಮತ್ತು ಗಂಟಲು, ಚರ್ಮ ರೋಗಗಳು, ಕಣ್ಣಿನ ಚಿಕಿತ್ಸೆ, ಮನೋವೈದ್ಯಶಾಸ್ತ್ರ ಮತ್ತು ದಂತವೈದ್ಯಶಾಸ್ತ್ರದಲ್ಲಿ ವಿಶೇಷ ಸೇವೆಗಳನ್ನು ಹೊಂದಿರುವ ಬಿಮ್ಸ್ ಸಂಸ್ಥೆಯು ದಿನದ 24 ಗಂಟೆಯೂ ತೆರೆದಿರುತ್ತದೆ. ದಿನವೂ 1000 ರಿಂದ 1600ಕ್ಕೂ ಅಧಿಕ ಹೊರ ರೋಗಿಗಳು ಮತ್ತು 100 ರಿಂದ 120 ಒಳ ರೋಗಿಗಳಾಗಿ ಬಿಮ್ಸ್‌ನಲ್ಲಿ ವೈದ್ಯಕೀಯ ಸೇವೆ ಪಡೆದುಕೊಳ್ಳುತ್ತಿದ್ದಾರೆ.
ಬೋಧಕ, ಬೋಧಕೇತರ ಸಿಬ್ಬಂದಿ, ನುರಿತ ವೈದ್ಯರು, ಸುಶ್ರೂಷಧಿಕಾರಿಗಳು , ಪ್ರಯೋಗಾಲಯ ತಂತ್ರಜ್ಞರು, ಸೇರಿದಂತೆ ಹಲವರು ಸಂಸ್ಥೆಯ ಬೆನ್ನಿಗೆ ನಿಂತಿರುವುದರಿಂದ ಬಿಮ್ಸ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದು ಬಿಮ್ಸ್ ನ ನಿರ್ದೇಶಕ ಡಾ.ಅಶೋಕ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.