Film & EntertainmentKannada NewsKarnataka NewsLatest

*ಕನ್ನಡದ ಮತ್ತೊಬ್ಬ ನಟಿಯಿಂದ ಡಿವೋರ್ಸ್‌ ಘೋಷಣೆ*: *ಅಭಿಮಾನಿಗಳಿಗೆ ಕಾನೂನು ಕ್ರಮದ ಎಚ್ಚರಿಕೆ!*

ಪ್ರಗತಿವಾಹಿನಿ ಸುದ್ದಿ: ಕನ್ನಡ ಕಿರುತೆರೆಯ ಪರಿಚಿತ ನಟಿ ಐಶ್ವರ್ಯಾ ಪಿಸ್ಸೆ ತಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಮಹತ್ವದ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ. ಪತಿಯಿಂದ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದಿರುವುದಾಗಿ ತಿಳಿಸಿರುವ ಅವರು, ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಕುರಿತು ಆಧಾರರಹಿತ ವದಂತಿಗಳನ್ನು ಹರಡದಂತೆ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಮನವಿ ಮಾಡಿದ್ದಾರೆ.

‘ಅನುರೂಪ’, ‘ಸರ್ವಮಂಗಳ ಮಾಂಗಲ್ಯೇ’, ‘ಸುಂದರಿ ಮಾಂಗಲ್ಯ’ ಮತ್ತು ‘ಪುನರ್ವಿವಾಹ’ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ಐಶ್ವರ್ಯಾ ಪಿಸ್ಸೆ, ಕಿರುತೆರೆಯಲ್ಲಿ ಮನೆಮಗಳು ಹಾಗೂ ಸೊಸೆಯ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇದೀಗ ಅವರ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಟಿಯೇ ಸ್ಪಷ್ಟನೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ, ತಮ್ಮ ವೈಯಕ್ತಿಕ ಜೀವನದ ಸುತ್ತ ಹರಡುತ್ತಿರುವ ಅನಗತ್ಯ ವದಂತಿಗಳು ಮತ್ತು ಊಹಾಪೋಹಗಳಿಗೆ ತೆರೆ ಎಳೆಯಲು ಈ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ತಾವು ಮತ್ತು ತಮ್ಮ ಪತಿ ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಸಾಕಷ್ಟು ಆಲೋಚನೆ ನಡೆಸಿದ ಬಳಿಕ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದಿದ್ದೇವೆ ಎಂದು ಹೇಳಿದ್ದಾರೆ.

ಇದು ತಮ್ಮಿಬ್ಬರ ವೈಯಕ್ತಿಕ ನಿರ್ಧಾರವಾಗಿದ್ದು, ಈ ಸಂದರ್ಭದಲ್ಲಿ ಅಗತ್ಯವಿರುವ ಖಾಸಗಿತನ ಮತ್ತು ನೆಮ್ಮದಿಯನ್ನು ಗೌರವಿಸುವಂತೆ ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ಮನವಿ ಮಾಡಿದ್ದಾರೆ. ತೆರೆಯ ಮೇಲಿನ ಪಾತ್ರಗಳಿಗೂ ನಿಜ ಜೀವನಕ್ಕೂ ವ್ಯತ್ಯಾಸವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆ, ಲೈಕ್ಸ್‌ ಮತ್ತು ಫಾಲೋವರ್ಸ್‌ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಕಥೆಗಳನ್ನು ಸೃಷ್ಟಿಸುವುದು, ದಾರಿ ತಪ್ಪಿಸುವ ವಿಡಿಯೊಗಳನ್ನು ಪ್ರಕಟಿಸುವುದು ಹಾಗೂ ಆಧಾರರಹಿತ ಆರೋಪಗಳನ್ನು ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಎಚ್ಚರಿಸಿದ್ದಾರೆ. ತಮ್ಮ ಧಾರಾವಾಹಿಗಳ ದೃಶ್ಯಗಳನ್ನು ಸಂದರ್ಭಕ್ಕೆ ಸಂಬಂಧವಿಲ್ಲದಂತೆ ಬಳಸಿಕೊಂಡು ವೈಯಕ್ತಿಕ ವಿಚಾರಗಳನ್ನು ದುರುಪಯೋಗಪಡಿಸಿಕೊಳ್ಳದಂತೆಯೂ ಹೇಳಿದ್ದಾರೆ.

ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿ ನೋಡಬೇಕು ಎಂದು ಸ್ಪಷ್ಟಪಡಿಸಿರುವ ಐಶ್ವರ್ಯಾ, ತಮ್ಮ ಕೆಲಸವೇ ವೃತ್ತಿಯಾಗಿದ್ದು, ವೈಯಕ್ತಿಕ ಜೀವನ ಖಾಸಗಿ ವಿಚಾರವಾಗಿದೆ ಎಂದು ತಿಳಿಸಿದ್ದಾರೆ. ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ, ತಮ್ಮ ನಿರ್ಧಾರವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

ಸುಳ್ಳು ಮತ್ತು ಮಾನಹಾನಿಕರ ವಿಷಯಗಳನ್ನು ಹರಡುವ ಕೃತ್ಯಗಳು ಮುಂದುವರಿದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಮಾರ್ಗಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ನಟಿ ಎಚ್ಚರಿಸಿದ್ದಾರೆ. ತಮ್ಮ ಹೇಳಿಕೆಯನ್ನು ಮತ್ತಷ್ಟು ಚರ್ಚೆ ಅಥವಾ ಊಹಾಪೋಹಗಳಿಗೆ ಆಹ್ವಾನವೆಂದು ಪರಿಗಣಿಸದೆ, ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅವರು ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button