ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯ ರಾಜಕಾರಣದಲ್ಲಿ ನಿರಂತರ ಸದ್ದು ಮಾಡುತ್ತ ಬಂದಿರುವ ಗೋಕಾಕದ ಜಾರಕಿಹೊಳಿ ಕುಟುಂಬ ಈಗ ಮತ್ತೊಂದು ಹೊಸ ಮೆಟ್ಟಿಲೇರಲು ಸಿದ್ಧವಾಗುತ್ತಿದೆ.
ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬ ರಾಜ್ಯರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಹೆಜ್ಜೆ ಇಡುತ್ತಿದೆ. ಮಾಜಿ ಸಚಿವ, ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇದೀಗ ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕಿಳಿಯುವ ಮೂಲಕ ಜಾರಕಿಹೊಳಿ ಕುಟುಂಬದಿಂದ ಮೊಟ್ಟ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಕಣಕ್ಕೆ ಎಂಟ್ರಿ ನೀಡಲಿದ್ದಾರೆ.
ಬೆಳಗಾವಿ ಮತ್ತು ಕರ್ನಾಟಕದ ರಾಜಕಾರಣದಲ್ಲಿ ಕಳೆದ 2 ದಶಕದಿಂದ ಜಾರಕಿಹೊಳಿ ಕುಟುಂಬ ಕಡೆಗಣಿಸಲು ಸಾಧ್ಯವಿಲ್ಲದಂತೆ ಬೆಳೆದು ನಿಂತಿದೆ. ಕುಟುಂಬದ ಹಿರಿಯಣ್ಣ ರಮೇಶ ಜಾರಕಿಹೊಳಿ ಗೋಕಾಕ ಕ್ಷೇತ್ರದಲ್ಲಿ, ಬಾಲಚಂದ್ರ ಜಾರಕಿಹೊಳಿ ಅರಬಾವಿ ಕ್ಷೇತ್ರದಲ್ಲಿ, ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಿ ಸತತವಾಗಿ ಗೆಲ್ಲುತ್ತ ಬಂದಿದ್ದಾರೆ. ಮೂವರೂ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ. ಯಾವುದೇ ಪಕ್ಷದ ಆಡಳಿತವಿರಲಿ ಕುಟುಂಬದಿಂದ ಒಬ್ಬರು ಸಚಿವಸಂಪುಟದಲ್ಲಿ ಖಾಯಂ ಸ್ಥಾನ ಹೊಂದಿರುತ್ತಿದ್ದಾರೆ.
ಲಖನ್ ಜಾರಕಿಹೊಳಿ ಮತ್ತು ಭೀಮಶಿ ಜಾರಕಿಹೊಳಿ ಒಂದೊಂದು ಬಾರಿ ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸಿದ್ದರಾದರೂ ತಮ್ಮದೇ ಸಹೋದರರ ಎದುರು ಸೋಲನುಭವಿಸಿದ್ದಾರೆ. ಆದರೆ ಕುಟುಂಬ ಕ್ಷೇತ್ರವನ್ನು ಕಳೆದುಕೊಂಡಿಲ್ಲ.
ಸತೀಶ್ ಜಾರಕಿಹೊಳಿ ವಿಧಾನಪರಿಷತ್ ಸದಸ್ಯರಾಗಿ ಎಂಟ್ರಿ ನೀಡಿ ನಂತರದಲ್ಲಿ ಯಮಕನಮರಡಿ ಕ್ಷೇತ್ರವನ್ನು ಆಯ್ದುಕೊಂಡರು. ಕುಟುಂಬದ ಸಹೋದರರಲ್ಲಿ ಬೇರೆಲ್ಲರಿಗಿಂತ ಭಿನ್ನವಾಗಿ ಹೆಜ್ಜೆ ಹಾಕುತ್ತ ಬಂದಿರುವ ಸತೀಶ್ ಇದೀಗ ಬೆಳಗಾವಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ.
2004ಕ್ಕಿಂತ ಮೊದಲು ಕಾಂಗ್ರೆಸ್ ಹಿಡಿತದಲ್ಲಿದ್ದ ಬೆಳಗಾವಿ ಕ್ಷೇತ್ರವನ್ನು ಮರಳಿ ಪಕ್ಷಕ್ಕೆ ತರುವ ಸವಾಲಿನೊಂದಿಗೆ ಅವರು ಸ್ಪರ್ಧಿಸುತ್ತಿದ್ದಾರೆ. ಕಳೆದ 4 ಬಾರಿಗೆ ಹೋಲಿಸಿದರೆ ಹಲವು ಕಾರಣಗಳಿಗಾಗಿ ಈ ಬಾರಿ ಕ್ಷೇತ್ರ ಕಾಂಗ್ರೆಸ್ ಗೆ ಹತ್ತಿರವಾಗಿದೆ.
ಬೆಲೆ ಏರಿಕೆ ನಿಯಂತ್ರಣದಲ್ಲಿ ವಿಫಲವಾಗಿರುವುದು, ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿರುವುದು, ಪಕ್ಷದೊಳಗಿನ ಭಿನ್ನಮತ, ಮೂಲ ಬಿಜೆಪಿಗರ ಕಡೆಗಣನೆ, ಬೆಳಗಾವಿ ಸುವರ್ಣ ವಿಧಾನಸೌಧವನ್ನು ಭೂತಬಂಗಲೆಯಾಗಿಸಿರುವುದು… ಹೀಗೆ ಹತ್ತು ಹಲವು ಕಾರಣಗಳಿಗಾಗಿ ಜನ ಬಿಜೆಪಿಯಿಂದ ದೂರವಾದರೆ ಆಶ್ಚರ್ಯವಿಲ್ಲ.
ಸತೀಶ್ ಜಾರಕಿಹೊಳಿ ರಾಷ್ಟ್ರ ರಾಜಕಾರಣಕ್ಕೆ ಹೊಗಲು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಮೊದಲ ಬಾರಿಗೆ ಕಟುಂಬದಿಂದ ರಾಷ್ಟ್ರ ರಾಜಕಾರಣದತ್ತ ಮುಖಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಯಾರೇ ನಿಂತರೂ ಬಿಜೆಪಿಗೆ ಸುಲಿದ ಬಾಳೆ ಹಣ್ಣಿನಂತೆ ಎನ್ನುವ ಸ್ಥಿತಿ ಈಗಂತೂ ಇಲ್ಲ. ಅಭ್ಯರ್ಥಿ ಪ್ರಬಲವಾಗಿದ್ದರೆ ಮಾತ್ರ ಎಲ್ಲ ದೌರ್ಬಲ್ಯಗಳನ್ನೂ ಮೆಟ್ಟಿ ನಿಲ್ಲಬಹುದು, ಗೆಲ್ಲಬಹುದು. ಇಲ್ಲವಾದಲ್ಲಿ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತೆಕ್ಕೆಗೆ ಸೇರಿಸಬಹುದು. ಹಾಗಾದಲ್ಲಿ ಜಾರಕಿಹೊಳಿ ರಾಷ್ಟ್ರ ರಾಜಕಾರಣಕ್ಕೆ ಸುಲಭವಾಗಿ ಎಂಟ್ರಿ ಕೊಡಲಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಸಹೋದರರಾಗಿರುವ ಮಾಜಿ ಮಂತ್ರಿ ರಮೇಶ ಜಾರಕಿಹೊಳಿ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಬಿಜೆಪಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಪ್ರಚಾರ ಕಣಕ್ಕೆ ಇಳಿಯಲಿದ್ದಾರೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ.
ಬಾಲಚಂದ್ರ ಜಾರಕಿಹೊಳಿ ಕ್ಷೇತ್ರಕ್ಕೆ ಬಾರದೆಯೂ ಅವರ ಕ್ಷೇತ್ರದ ಓಟ್ ಬ್ಯಾಂಕ್ ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದಾರೆ. 2009ರ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದ ಬಿಜೆಪಿ ಚುನಾವಣೆ ಉಸ್ತುವಾರಿ ಹೊತ್ತು, ಯಾವುದೇ ಅಲೆ ಇಲ್ಲದಿದ್ದರೂ ತಂತ್ರಗಾರಿಕೆಯಿಂದಲೇ ಸುರೇಶ ಅಂಗಡಿಯವರನ್ನು ಗೆಲ್ಲಿಸಿದ್ದು ಇದೇ ಬಾಲಚಂದ್ರ ಜಾರಕಿಹೊಳಿ. ಈ ಬಾರಿ ಒಂದು ಕಡೆ ಪಕ್ಷ, ಇನ್ನೊಂದು ಕಡೆ ಸಹೋದರ ನಿಂತರೆ ಅವರು ಯಾವ ರೀತಿಯಲ್ಲಿ ನಿಭಾಯಿಸಲಿದ್ದಾರೆ ಕಾದು ನೋಡಬೇಕಿದೆ.
ಸೋಮವಾರದ ಹೊತ್ತಿಗೆ ಅಭ್ಯರ್ಥಿಗಳ ಘೋಷಣೆಯಾಗಬಹುದು. ಅಲ್ಲಿಗೆ ಕಣ ಚಿತ್ರಣ ಸ್ಪಷ್ಟವಾಗಲಿದೆ. ಹಲವು ಕಾರಣಗಳಿಗಾಗಿ ಈ ಬಾರಿ ಬೆಳಗಾವಿ ಲೋಕಸಭಾ ಉಪಚುನಾವಣೆ ಕುತೂಹಲದ ಮೂಟೆಯಾಗಿದೆ.
ಸತೀಶ್ ಜಾರಕಿಹೊಳಿ ಭಾನುವಾರ ದೆಹಲಿಗೆ
ಉತ್ತರ ಕರ್ನಾಟಕದಲ್ಲಿ ಪ್ರಬಲ ತಂಡ ಸನ್ನದ್ಧ
ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ: ಸತೀಶ್ ಜಾರಕಿಹೊಳಿ
ಬೆಳಗಾವಿ ಅಭ್ಯರ್ಥಿ ಆಯ್ಕೆ: 2 ನೇ ಸುತ್ತಿನ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಹೆಸರು
ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಅಂತಿಮ: ಅಧಿಕೃತ ಘೋಷಣೆಯಷ್ಟೆ ಬಾಕಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ