ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಕಿತ್ತೂರು ರಾಣಿ ಚನ್ನಮ್ಮ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಹಾನಗಲ್: ಕಿತ್ತೂರು ರಾಣಿ ಚನ್ನಮ್ಮ ನನ್ನ ಆದರ್ಶ, ನನ್ನ ದೈವ, ನನ್ನ ಜೀವನದ ಸ್ಫೂರ್ತಿ. ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಚೆನ್ನಮ್ಮ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಭಾನುವಾರ ಹಾನಗಲ್ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣಗೋಳಿಸಿ ಅವರು ಮಾತನಾಡುತ್ತಿದ್ದರು.
ಕಿತ್ತೂರು ಚೆನ್ನಮ್ಮ ತನ್ನ ಹೋರಾಟಗಳಿಂದಾಗಿಯೇ ಈ ಸಮಾಜದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾಳೆ. ಇಂತಹ ಮಹಾನ್ ಸಾಧಕರ ಪುತ್ಥಳಿ ಅನಾವರಣದ ಮೂಲಕ ಮುಂದಿನ ಪೀಳಿಗೆಗೆ ಅವರ ಆದರ್ಶವನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದೀರಿ. ಇದಕ್ಕಾಗಿ ನಾನು ನಿಮ್ಮೆಲ್ಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಸಾಂವಸಗಿಯ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಬರಲೇಬೇಕೆಂದು ಶಾಸಕ ಶ್ರೀನಿವಾಸ ಮಾನೆ ಅವರು, ಬಸವಜಯ ಮೃತ್ಯುಂಜಯ ಸ್ವಾಮಿಗಳು ಬಹಳ ಪ್ರೀತಿಯಿಂದ ಒತ್ತಾಯಿಸಿದರು. ನಾನು ನಿನ್ನೆ ಉಡುಪಿಯಲ್ಲಿದ್ದೆ. ಅಲ್ಲಿಂದ ಬೆಂಗಳೂರಿಗೆ ಬಂದು ಇಂದು ಬೆಳಗ್ಗೆ ಅಲ್ಲಿಂದ ಹೊರಟು ಬಂದಿದ್ದೇನೆ. ನಿಮ್ಮ ಊರು ಸಣ್ಣದಾದರೂ ನಿಮ್ಮ ಅಭಿಮಾನ ದೊಡ್ಡದು ಎಂದು ಸಚಿವರು ಹೇಳಿದರು.
ನಾನು ಎಲ್ಲೇ ಹೋದರೂ, ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಕಿತ್ತೂರು ರಾಣಿ ಚನ್ನಮ್ಮನನ್ನು ಸ್ಮರಿಸದೇ ಇರುವ ಉದಾಹರಣೆಯೇ ಇಲ್ಲ. ನಾವು ಚಿಕ್ಕವರಿದ್ದಾಗಿನಿಂದಲೂ ಚನ್ನಮ್ಮನ ಯಶೋಗಾಥೆಯನ್ನು, ಅವಳ ಹೋರಾಟದ ಕಥೆಗಳನ್ನು, ಅವಳ ಶೌರ್ಯವನ್ನು ಕೇಳುತ್ತಲೇ ಬೆಳೆದವರು. ಹಾಗಾಗಿ ನನಗೆ ಚನ್ನಮ್ಮ ಹೆಸರೇ ಸ್ಫೂರ್ತಿ, ಚನ್ನಮ್ಮನೇ ನನಗೆ ಆದರ್ಶ ಎಂದು ಹೇಳಿದರು.
ಚನ್ನಮ್ಮನ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ನಾನು ಸದಾ ಪ್ರಯತ್ನಿಸುತ್ತಿರುತ್ತೇನೆ. ಹೋರಾಟ ಮನೋಭಾವವನ್ನು ಬೆಳೆಸಿಕೊಂಡಿದ್ದೇನೆ. ಚನ್ನಮ್ಮಳಂತೆ ಸಾಕಷ್ಟು ಅವಮಾನಗಳನ್ನು ಎದುರಿಸಿ, ಎಂತಹ ಕಷ್ಟ ಬಂದರೂ ಛಲ ಬಿಡದೆ ಹೋರಾಟಗಳನ್ನು ಮಾಡುತ್ತಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಯಾರು ಸಮಾಜಕ್ಕಾಗಿ ಕೆಲಸ ಮಾಡುತ್ತಾರೋ ಅಂತವರು ಮಹಾತ್ಮರಾಗಿ, ನಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಯಾರು ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಾರೋ ಅವರನ್ನು ಬಹುಬೇಗ ಮರೆಯುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಮ್ಮ ಸರಕಾರ ಮಹಿಳೆಯರ ಸ್ವಾಭಿಮಾನ ಎತ್ತಿ ಹಿಡಿಯಬೇಕೆಂದು, ಮಹಿಳೆಯರನ್ನು ಸಬಲೀಕರಣದತ್ತ ಕೊಂಡೊಯ್ಯಬೇಕೆಂದು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಗೃಹಲಕ್ಷ್ಮೀ, ಶಕ್ತಿ ಮತ್ತಿತರ ಯೋಜನೆಗಳು ಮಹಿಳೆಯರಲ್ಲಿ ಬಲ ತುಂಬಿವೆ. ಇನ್ನು ಮುಂದೆ ಸಹ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಶಂಬುಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಂಸದ ಮಂಜುನಾಥ ಕೊಣ್ಣೂರು, ಮಾಜಿ ಶಾಸಕರಾದ ಶಿವರಾಜ ಸಜ್ಜನರ್, ಅರುಣ ಕುಮಾರ ಪೂಜಾರ್, ವಿರೂಪಾಕ್ಷಪ್ಪ ಬಳ್ಳಾರಿ, ಜಗದೀಶ ಬೆಣ್ಣಿ, ಮಹಾದೇವ ಭಾಸ್ಕರ್, ವಿಜಯ ಕುಮಾರ ದೊಡ್ಮನಿ, ಫಕ್ಕೀರೇಶ ಮಾವಿನಮರದ, ರಾಜಣ್ಣ ಹಲಸೂರು, ಬಸನಗೌಡ ಪಾಟೀಲ, ಎಂ.ಬಿ.ಪೂಜಾರಿ, ಠಾಕನಗೌಡ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ