*ರೈತರು ಮಾತನಾಡಲು ದೆಹಲಿಗೆ ಬರಬೇಕಂತೆ!* *ರೈತರೇ ದೆಹಲಿಗೆ ಹೋಗಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾದರೆ ಜನಪ್ರತಿನಿಧಿಗಳು ಏಕೆ ಬೇಕು ಎನ್ನುವುದು ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುವ ಬದಲು ದೆಹಲಿಗೆ ಬಂದು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನೇರವಾಗಿ ಚರ್ಚೆ ನಡೆಸುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕರ್ನಾಟಕದ ರೈತರಿಗೆ ಆಹ್ವಾನ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಕರ್ನಾಟಕದ ಕಬ್ಬು ಬೆಳೆಗಾರರು ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ತಮ್ಮ X ಖಾತೆಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಜೋಶಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ರೈತ ಮುಖಂಡರನ್ನು ದೆಹಲಿಗೆ ಆಹ್ವಾನಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಒಂದೇ ವೇದಿಕೆಯಲ್ಲಿ ಕೂರಿಸಿ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲಾಗುವುದು. ರೈತರ ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ.
FRP ಮತ್ತೆ ಹೆಚ್ಚಳದ ಭರವಸೆ
ಕೇಂದ್ರ ಸರ್ಕಾರ ಪ್ರತಿವರ್ಷ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಹೆಚ್ಚಿಸುತ್ತಿದೆ ಎಂದು ಜೋಶಿ ಹೇಳಿದ್ದಾರೆ. ಮೇ ತಿಂಗಳಲ್ಲಷ್ಟೇ ಕಬ್ಬಿನ FRP ಅನ್ನು ₹365ಕ್ಕೆ ಹೆಚ್ಚಿಸಲಾಗಿದ್ದು, ಈ ಬಾರಿಯೂ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಬ್ಬಿನ FRP ನಿಗದಿ ಮಾಡುವಾಗ ಬೆಲೆ ನಿಗದಿ ಸಮಿತಿ ಹಾಗೂ ರಾಜ್ಯದ ಕಬ್ಬು ಆಯುಕ್ತರ ವರದಿ ಮತ್ತು ಶಿಫಾರಸುಗಳನ್ನು ಪರಿಗಣಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
‘ರಸ್ತೆಯಲ್ಲಿ ಪ್ರತಿಭಟನೆ ಬೇಡ, ಮಾತುಕತೆಗೆ ಬನ್ನಿ’
2026ರ ಫೆಬ್ರವರಿಯಲ್ಲಿ ರೈತ ಮುಖಂಡರು ತಮ್ಮನ್ನು ಭೇಟಿಯಾಗಿ ಕಬ್ಬಿನ FRP ಹೆಚ್ಚಳಕ್ಕೆ ಮನವಿ ಮಾಡಿದ್ದರು. ಬಳಿಕ ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ FRP ಹೆಚ್ಚಳ ಮಾಡಿದೆ ಎಂದು ಜೋಶಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸುವ ಬದಲು ನೇರವಾಗಿ ದೆಹಲಿಗೆ ಬಂದು ಸರ್ಕಾರದೊಂದಿಗೆ ಚರ್ಚೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ರೈತರ ಹಿತಾಸಕ್ತಿ ಕಾಪಾಡುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಜೋಶಿ ಹೇಳಿದ್ದಾರೆ.
ಜನರು ತಮ್ಮ ಪ್ರತಿನಿಧಿಯಾಗಿ ಸಮಸ್ಯೆ ಪರಿಹರಿಸಲು ಇವರನ್ನು ದೆಹಲಿಗೆ ಕಳುಹಿಸಿದರೆ, ಮಾತುಕತೆಗೆ ದೆಹಲಿಗೇ ಬರುವಂತೆ ರೈತರನ್ನು ಆಹ್ವಾನಿಸಿರುವುದು ವಿಪರ್ಯಾಸವೇ ಸರಿ. ರೈತರಿದ್ದಲ್ಲಿಗೆ ಬಂದು ಮಾತನಾಡುವ ಬದಲು ತಾವಿದ್ದಲ್ಲೇ ರೈತರನ್ನು ಕರೆಯುತ್ತಿದ್ದಾರೆ. ರೈತರೇ ದೆಹಲಿಗೆ ಹೋಗಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾದರೆ ಜನಪ್ರತಿನಿಧಿಗಳು ಏಕೆ ಬೇಕು ಎನ್ನುವುದು ರೈತರ ಪ್ರಶ್ನೆ.
ಜನಪ್ರತಿನಿಧಿಗಳು ರೈತರೊಂದಿಗೆ ಮಾತನಾಡಿ, ಹೋಗಿ ಅಧಿಕಾರಿಗಳ ಮೂಲಕ ಆದೇಶ ಮಾಡಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳನ್ನು ರೈತರಿದ್ದಲ್ಲಿಗೇ ಕಳುಹಿಸಬೇಕು. ಅದನ್ನು ಬಿಟ್ಟು ರೈತರೇ ದೆಹಲಿಗೆ ಬಿನ್ನಿ, ಅಧಿಕಾರಿಗಳನ್ನು ಭೇಟಿ ಮಾಡಿಸುತ್ತೇನೆ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಗೇ ಅವಮಾನ. ಇನ್ನು ಪ್ರಧಾನಿಗಳನ್ನು ಭೇಟಿ ಮಾಡಿಸುತ್ತೇನೆ ಎಂದಿದ್ದರೆ ಅದನ್ನು ಒಪ್ಪಬಹುದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




