*ಗೃಹಲಕ್ಷ್ಮಿ ಹಣಕ್ಕೆ ಬ್ಯಾಂಕ್ಗಳ ಕತ್ತರಿ ಇಲ್ಲ*: *ಸಾಲದ ಕಂತಿಗೆ ಕಡಿತ ಮಾಡದಂತೆ ಡಿಕೆಶಿ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುವ ಮಾಸಿಕ ₹2,000 ಹಣವನ್ನು ಸಾಲದ ಕಂತು ಅಥವಾ ಬಡ್ಡಿಗೆ ಕಡಿತ ಮಾಡದಂತೆ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಲ್ಲಿಸಿದ್ದ ಮನವಿಗೆ ಸಿಎಂ ತಕ್ಷಣ ಸ್ಪಂದಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಬ್ಯಾಂಕ್ ಆಡಳಿತ ಮಂಡಳಿಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ನಿರ್ದೇಶಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 1.24 ಕೋಟಿಗೂ ಅಧಿಕ ಕುಟುಂಬಗಳ ಯಜಮಾನಿಯರ ಖಾತೆಗೆ ₹2,000 ಜಮೆಯಾಗುತ್ತಿದೆ. ಈ ಹಣವನ್ನು ಕುಟುಂಬದ ದಿನನಿತ್ಯದ ಖರ್ಚು, ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಸ್ವಾವಲಂಬನೆಗೆ ಬಳಸಲಾಗುತ್ತಿದೆ.
ಆದರೆ, ಕೆಲವು ವಾಣಿಜ್ಯ ಬ್ಯಾಂಕ್ಗಳು, ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಖಾತೆಗೆ ಜಮೆಯಾದ ತಕ್ಷಣ ಹಳೆಯ ಸಾಲದ ಬಾಕಿ ಅಥವಾ ಬಡ್ಡಿಗೆ ಕಡಿತ ಮಾಡಿಕೊಳ್ಳುತ್ತಿರುವ ದೂರುಗಳು ಕೇಳಿಬಂದಿವೆ. ಫಲಾನುಭವಿಗಳ ಗಮನಕ್ಕೆ ತಾರದೆ ಹಣ ಕಡಿತ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ.
ಈ ಕುರಿತು ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್ಗಳ ಪರಿಶೀಲನಾ ಸಮಿತಿ (DLRC) ಸಭೆಗಳಲ್ಲೂ ಚರ್ಚೆ ನಡೆದಿದೆ. ಗೃಹಲಕ್ಷ್ಮಿ ಹಣವನ್ನು ಯಾವುದೇ ಕಾರಣಕ್ಕೂ ಸಾಲದ ಕಂತು ಅಥವಾ ಬಡ್ಡಿಗೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬ ಸೂಚನೆಯನ್ನು ಜಿಲ್ಲಾಡಳಿತಗಳು ನೀಡಿವೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (SLBC) ಮೂಲಕ ಬ್ಯಾಂಕ್ಗಳಿಗೆ ಕಠಿಣ ಸುತ್ತೋಲೆ ಹೊರಡಿಸುವಂತೆ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ. ಗೃಹಲಕ್ಷ್ಮಿ ಹಣವನ್ನು ಹಳೆಯ ಸಾಲ, ಕೃಷಿಯೇತರ ಸಾಲ ಅಥವಾ ಬಡ್ಡಿಗೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ, ಮಹಿಳೆಯರು ಹಣವನ್ನು ತಮ್ಮ ಅಗತ್ಯಕ್ಕೆ ಬಳಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, ಖಾತೆಗೆ ಹಣ ಬಂದ ತಕ್ಷಣ ಬಲವಂತವಾಗಿ ಸಾಲ ವಸೂಲಿ ಮಾಡುವ ಖಾಸಗಿ ಫೈನಾನ್ಸ್ ಸಂಸ್ಥೆಗಳು ಮತ್ತು ಏಜೆಂಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಅಗತ್ಯವಿದ್ದರೆ ಪ್ರಕರಣ ದಾಖಲಿಸಿ, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಪರವಾನಗಿ ರದ್ದತಿಯಂತಹ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಮಹಿಳೆಯರ ಲಿಖಿತ ಒಪ್ಪಿಗೆಯಿಲ್ಲದೆ ಈಗಾಗಲೇ ಸಾಲದ ಬಾಕಿಗೆ ಕಡಿತ ಮಾಡಿರುವ ಗೃಹಲಕ್ಷ್ಮಿ ಹಣವನ್ನು ಮರುಜಮೆ ಮಾಡಿಸುವಂತೆಯೂ ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇಂತಹ ಪ್ರಕರಣಗಳ ಮೇಲೆ ನಿಗಾ ವಹಿಸಿ, ನಿಯಮಿತ ಪರಿಶೀಲನಾ ಸಭೆಗಳಲ್ಲಿ ವಿಷಯವನ್ನು ಪರಿಶೀಲಿಸುವಂತೆ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




