
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣ ಬಯಲಿಗೆಳೆದ ಖಾನಾಪುರದ ಬಿಜೆಪಿ ಮುಖಂಡ ಜಯಂತ ತಿನೈಕರ್ ಮೇಲೆ ಹಲ್ಲೆಯಾಗಿದೆ.
ಆರ್.ಟಿ.ಐ ಕಾರ್ಯಕರ್ತರೂ ಆಗಿರುವ ಜಯಂತ ತಿಣೈಕರ್ ಅವರ ಮೇಲೆ ಶುಕ್ರವಾರ ಸಂಜೆ ಅಪರಿಚಿತ ಯುವಕರ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದ ಘಟನೆ ಬೆಳಗಾವಿ- ಖಾನಾಪುರ ಹೆದ್ದಾರಿಯ ಝಾಡ ಶಹಾಪುರ ಗ್ರಾಮದ ಬಳಿ ಸಂಭವಿಸಿದೆ.
ತಾವು ಶುಕ್ರವಾರ ಸಂಜೆ ಕಾರಿನಲ್ಲಿ ಬೆಳಗಾವಿಯಿಂದ ಖಾನಾಪುರದತ್ತ ಪ್ರಯಾಣಿಸುವಾಗ ತಮ್ಮ ಕಾರನ್ನು ಬೈಕುಗಳಲ್ಲಿ ಬೆನ್ನಟ್ಟಿದ ಐದಾರು ಯುವಕರ ತಂಡ ಝಾಡ ಶಹಾಪುರ ಬಳಿ ಕಾರು ನಿಲ್ಲಿಸಿ ಹಲ್ಲೆ ನಡೆಸಿ ಪರಾರಿಯಾಗಿದೆ. ಹಲ್ಲೆಯಿಂದ ತಮ್ಮ ಕೈ-ಕಾಲುಗಳಿಗೆ ತೀವ್ರವಾದ ಗಾಯ ಹಾಗೂ ರಕ್ತಸ್ರಾವವಾಗಿದೆ ಎಂದು ತಿಣೈಕರ್ ಬೆಳಗಾವಿ ಗ್ರಾಮೀಣ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತಿಣೈಕರ್ ಅವರು ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೇಲಗಿ ಪ್ರಕರಣವನ್ನು ಬೆಳಕಿಗೆ ತರುವಲ್ಲಿ ಶ್ರಮಿಸಿದ್ದರು. ಜೊತೆಗೆ ಕಳೆದ ಕೆಲ ವರ್ಷಗಳಿಂದ ಅನ್ಯಾಯದ ವಿರುದ್ಧದ ವಿವಿಧ ಹೋರಾಟಗಳಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ