ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಹಲಸಿ ಗ್ರಾಮದಲ್ಲಿರುವ ಕದಂಬರ ಕಾಲದ, ಸಾವಿರಾರು ವರ್ಷಗಳಷ್ಟು ಪುರಾತನವಾದ ಭೂ-ವರಾಹ ನರಸಿಂಹ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಕಳ್ಳತನ ಯತ್ನ ನಡೆದಿದ್ದು, ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ.
ಭಾರತೀಯ ಪ್ರಾಚೀನ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ನರಸಿಂಹ ದೇವಸ್ಥಾನದ ಮುಖ್ಯ
ಬಾಗಿಲು ಒಡೆದು ಒಳ ಪ್ರವೇಶಿಸಿರುವ ಕಳ್ಳರು ದೇವಸ್ಥಾನದ ನರಸಿಂಹ ದೇವರ ಮುಂದಿನ
ಹುಂಡಿಯನ್ನು ಒಡೆಯುವ ವಿಫಲ ಯತ್ನ ನಡೆಸಿದ್ದಾರೆ. ದೇವಸ್ಥಾನದ ಗರ್ಭಗುಡಿಯನ್ನು
ಪ್ರವೇಶಿಸಿ ಆಭರಣಗಳು, ಬೆಲೆಬಾಳುವ ವಸ್ತುಗಳು ಮತ್ತು ಪುರಾತನ ಕಾಲದ ವಸ್ತುಗಳಿಗಾಗಿ
ಶೋಧ ನಡೆಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಅರವಿಂದ ಪಾಟೀಲ,
ಕೂಡಲೇ ದೇವಸ್ಥಾನದ ಕಳ್ಳತನಕ್ಕೆ ಯತ್ನಿಸಿದವರನ್ನು ಪತ್ತೆ ಹಚ್ಚಬೇಕು ಮತ್ತು
ಸಾವಿರಾರು ವರ್ಷಗಳ ಕಾಲ ಪುರಾತನವಾದ ದೇವಸ್ಥಾನಕ್ಕೆ ಬಿಗಿ ಭದ್ರತೆ ಹಾಗೂ ಸಿಸಿ
ಕಾಮೆರಾ ಕಣ್ಗಾವಲು ಅಳವಡಿಸಬೇಕು ಎಂದು ಪುರಾತತ್ವ ಇಲಾಖೆಯನ್ನು ಆಗ್ರಹಿಸಿದರು.
ದೇವಸ್ಥಾನದಲ್ಲಿ ಕಳ್ಳತನವಾದ ಸುದ್ದಿ ಹರಡುತ್ತಲೇ ದೇವಸ್ಥಾನದ ಸುತ್ತ ಸೇರಿದ
ಸಾರ್ವಜನಿಕರು ಕೇವಲ ಗ್ರಾಮವಷ್ಟೇ ಅಲ್ಲದೇ ಇಡೀ ಬೆಳಗಾವಿ ಜಿಲ್ಲೆಯ ಪ್ರಮುಖ ಧಾರ್ಮಿಕ
ಕೇಂದ್ರದಲ್ಲಿ ಕಳ್ಳತನ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಪುರಾತತ್ವ ಇಲಾಖೆ
ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳದ ಪಂಚನಾಮೆ ನಡೆಸಿದ ಬಳಿಕ ಮುಂದಿನ ಆದೇಶದವರೆಗೆ ದೇವಸ್ಥಾನವನ್ನು ಮುಚ್ಚಲಾಗುವುದು. ತನಿಖೆಯ ಸಂದರ್ಭದಲ್ಲಿ ಎರಡೂ ಇಲಾಖೆಗಳ ಜೊತೆ ಸಹಕರಿಸುವಂತೆ ಅಧಿಕಾರಿಗಳು ಸ್ಥಳೀಯರಿಗೆ ಮತ್ತು ಹಲಸಿ ಗ್ರಾಮಸ್ಥರಿಗೆ ಹೇಳಿದರು.
ಘಟನಾ ಸ್ಥಳಕ್ಕೆ ಬೆಳಗಾವಿಯ ಶ್ವಾನದಳ, ಬೆರಳಚ್ಚು ತಜ್ಞರ ತಂಡ ತೆರಳಿ ಮಾಹಿತಿ ಸಂಗ್ರಹಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ದೇವಸ್ಥಾನದಲ್ಲಿ ಕಳ್ಳತನದ ಪ್ರಯತ್ನ ಮಾತ್ರ ನಡೆದಿದೆ. ಆದರೆ ದೇವಸ್ಥಾನದಿಂದ ಯಾವುದೇ ಬೆಲೆಬಾಳುವ ವಸ್ತು ಅಥವಾ ನಗ-ನಾಣ್ಯ ಕಳ್ಳತನವಾದ ವರದಿಯಾಗಿಲ್ಲ.
ಧಾರವಾಡದ ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಾತತ್ವ ಇಲಾಖೆ ನೀಡಿದ ದೂರಿನನ್ವಯ ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತನಿಖೆಯ ನೇತೃತ್ವ ವಹಿಸಿದ್ದ ಬೈಲಹೊಂಗಲ ಉಪ ವಿಭಾಗದ ಎಸಿಪಿ ಪ್ರದೀಪ ಗುಂಟೆ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ