*ಆಡಿ ಕಾರು ಅಡ್ಡಾದಿಡ್ಡಿ ಚಾಲನೆ: ಬೆಳಗಾವಿ ಮೂಲದ ಯುವಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿಯೋರ್ವ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಪರಿಣಾಮ ನಡೆದ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನ 27ನೇ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ. ಡಿಸೆಂಬರ್ 22ರಂದು ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವೇಗವಾಗಿ ಬಂದ ಆಡಿ ಕಾರು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಬೈಲಹೊಂಗಲ ಮೂಲದ ಸಂತೋಷ್(26) ನಿಧನಹೊಂದಿದ್ದಾನೆ.
ಅಪಘಾತದ ರಭಸಕ್ಕೆ ರಸ್ತೆ ಬದಿ ನಿಂತಿದ್ದ ಕಾರುಗಳಿಗೂ ಡ್ಯಾಮೇಜ್ ಆಗಿದೆ. ಮೃತ ಯುವಕ ಬೆಂಗಳೂರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಕಾರು ಚಾಲಕ ಅಬ್ದುಲ್ ರೆಹಮಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪಾದಚಾರಿಗೆ ಕಾರು ಡಿಕ್ಕಿಯಾಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕ ಮದ್ಯ ಸೇವಿಸಿದ್ದ ಹಿನ್ನೆಲೆ ರಕ್ತದ ಮಾದರಿಯನ್ನು ಪರೀಕ್ಷೆಗೆ ರವಾನೆ ಮಾಡಲಾಗಿದೆ.




