
ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿರುವ ಸಣ್ಣ ಮಕ್ಕಳ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಪೋಷಕರ ಒಂದು ಕ್ಷಣದ ನಿರ್ಲಕ್ಷ್ಯವೂ ಮಕ್ಕಳ ಜೀವಕ್ಕೆ ಅಪಾಯ ತರಬಹುದು. ಇದಕ್ಕೆ ಸಾಕ್ಷಿಯೆಂಬಂತೆ ಉತ್ತರ ಪ್ರದೇಶದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಮನೆಯಲ್ಲಿ ಇಟ್ಟಿದ್ದ ಕೆಮ್ಮಿನ ಸಿರಪ್ನ ಇಡೀ ಬಾಟಲಿಯನ್ನು ಕುಡಿದ ನಾಲ್ಕು ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಮನೆಯಲ್ಲಿದ್ದ ಕೆಮ್ಮಿನ ಸಿರಪ್ ಬಾಟಲಿಯೊಂದಿಗೆ ಆಟವಾಡುತ್ತಿದ್ದ ಬಾಲಕಿ, ಪೋಷಕರ ಗಮನ ಬೇರೆಡೆ ಇದ್ದಾಗ ಅದರಲ್ಲಿದ್ದ ಸಂಪೂರ್ಣ ಸಿರಪ್ ಕುಡಿದಿದ್ದಾಳೆ. ಕೆಲ ಸಮಯದ ಬಳಿಕ ಅತಿಯಾದ ತೂಕಡಿಕೆ ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರ ತೀವ್ರ ಪ್ರಯತ್ನದ ನಡುವೆಯೂ ಬಾಲಕಿಯ ಜೀವ ಉಳಿಸಲು ಸಾಧ್ಯವಾಗಿಲ್ಲ.
ನವೆಂಬರ್ 5ರಂದು ನಡೆಯಬೇಕಿದ್ದ ನಾಮಕರಣ ಸಮಾರಂಭದಲ್ಲಿ ಭಾಗವಹಿಸಲು ಬಾಲಕಿ ತನ್ನ ತಾಯಿ ರೆಹಾನಾ ಮತ್ತು ಅಜ್ಜಿ ಶಬೀನಾ ಬೇಗಂ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದಳು. ಕುಟುಂಬದ 70 ವರ್ಷದ ಸಂಬಂಧಿಕರೊಬ್ಬರು ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದರು. ಬುಧವಾರ ಸಂಜೆ ಕೆಮ್ಮಿನ ಸಿರಪ್ ಸೇವಿಸಿ ಬಾಟಲಿಯನ್ನು ತಮ್ಮ ಕೋಣೆಯಲ್ಲೇ ಬಿಟ್ಟಿದ್ದರು.
ಮರುದಿನ ಆಟವಾಡುತ್ತಿದ್ದ ಬಾಲಕಿಗೆ ಆ ಬಾಟಲಿ ಸಿಕ್ಕಿದೆ. ಸಿರಪ್ನ ಸಿಹಿ ರುಚಿ ಇಷ್ಟವಾದ ಕಾರಣ ಅದನ್ನು ಕುಡಿಯುತ್ತಾ ಇಡೀ ಬಾಟಲಿಯನ್ನು ಖಾಲಿ ಮಾಡಿದ್ದಾಳೆ. ಸ್ವಲ್ಪ ಸಮಯದಲ್ಲೇ ಆಕೆಯ ಆರೋಗ್ಯ ಹದಗೆಟ್ಟಿದ್ದು, ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಈ ಘಟನೆ ಮತ್ತೆ ಪೋಷಕರಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಕೆಮ್ಮಿನ ಸಿರಪ್ ಸೇರಿದಂತೆ ಯಾವುದೇ ಔಷಧಿಗಳನ್ನು ಮಕ್ಕಳ ಕೈಗೆಟುಕದ ಎತ್ತರದ ಮತ್ತು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಸಿಹಿ ರುಚಿಯಿದೆ ಎಂಬ ಕಾರಣಕ್ಕೆ ಔಷಧಿಗಳನ್ನು ಸಾಮಾನ್ಯ ಆಹಾರ ಅಥವಾ ಪಾನೀಯಗಳಂತೆ ಮಕ್ಕಳು ಭಾವಿಸುವ ಸಾಧ್ಯತೆ ಇದೆ.
ವೈದ್ಯರ ಸಲಹೆ ಮತ್ತು ನಿಗದಿತ ಪ್ರಮಾಣವಿಲ್ಲದೆ ಮಕ್ಕಳಿಗೆ ಯಾವುದೇ ಸಿರಪ್ ಅಥವಾ ಮಾತ್ರೆಗಳನ್ನು ನೀಡಬಾರದು. ಔಷಧಿ ಸೇವಿಸಿದ ಬಳಿಕ ಮಗು ಅಸ್ವಸ್ಥಗೊಂಡರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.


