Belagavi NewsBelgaum NewsCrimeKannada NewsKarnataka NewsNational

*ಆಟೋ ಚಾಲಕನ ಕೊಲೆ: ಮೂವರು ಸ್ನೇಹಿತರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ನೇಹಿತನ ಕೊಲೆ ಮಾಡಿ ತಾವೇ ಖುದ್ದು ಪೊಲೀಸ್ ಠಾಣೆಗೆ ದೂರು ನೀಡಿದ ಆರೋಪಿಗಳ ನಾಟಕ ಬಯಲಾಗಿದ್ದು, ಮೂವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಆಟೋ ಚಾಲಕನ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ನಡೆದ ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮಂಗಸೂಳಿ ಗ್ರಾಮದ ನಿವಾಸಿ ಅಶೋಕ ವಡ್ಡರ (27) ಕೊಲೆಯಾದ ದುರ್ದೈವಿ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಶಿವಾ ವಡ್ಡರ್, ಸಾಗರ ವಡ್ಡರ್ ಹಾಗೂ ವಿನೋದ ವಡ್ಡರ್ ಎಂದು ಗುರುತಿಸಲಾಗಿದೆ. 

ಆಟೋ ರಿಕ್ಷಾಗೆ ನಂಬರ್ ಹಾಕಿಸುವ ವಿಚಾರದಲ್ಲಿ ಮೃತ ಅಶೋಕ ಹಾಗೂ ಆರೋಪಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ, ಆರೋಪಿಗಳು ಅಶೋಕನ ತಲೆಗೆ ಬಲವಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವ ಅಶೋಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

Home add -Advt

ಕೊಲೆ ಮಾಡಿದ ಬಳಿಕ ತಪ್ಪಿಸಿಕೊಳ್ಳಲು ಆರೋಪಿಗಳು ಸಿನಿಮೀಯ ರೀತಿಯಲ್ಲಿ ಸಂಚು ರೂಪಿಸಿದ್ದರು. ಗ್ರಾಮದಲ್ಲಿ ಕೇವಲ ಸಣ್ಣ ಗಲಾಟೆ ನಡೆದಿದೆ ಎಂದು ಬಿಂಬಿಸಲು ನಾಟಕವಾಡಿದ್ದ ಅವರು, ತಾವೇ ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. 

ಆದರೆ ವಿಚಾರಣೆ ವೇಳೆ ಕಾಗವಾಡ ಪೊಲೀಸರು ತಮ್ಮದೇ ಶೈಲಿಯಲ್ಲಿ ಕಠಿಣ ವಿಚಾರಣೆ ನಡೆಸಿದಾಗ, ಆರೋಪಿಗಳು ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಆಟೋ ನಂಬರ್ ವಿಚಾರದ ದ್ವೇಷದಿಂದ ನಾವೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಬಂಧಿತ ಮೂವರನ್ನು ನ್ಯಾಯಾಂಗ ಬಂಧನದಡಿ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.

Related Articles

Back to top button