
ವಿಸ್ಮಯಕಾರಿ ದೃಶ್ಯ ಕಂಡು ಪುನೀತರಾದ ಭಕ್ತರು
ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಆಚರಿಸುತ್ತಿರುವ ಮೊದಲ ಶ್ರೀರಾಮನವಮಿ ಇಂದು. 500 ವರ್ಷಗಳ ನಿರಂತರ ಕಾಯುವಿಕೆಯ ಬಳಿಕ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿದ್ದು, ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇದೀಗ ಮೊದಲ ರಾಮನವಮಿ ಆಚರಿಸಲಾಗುತ್ತಿದೆ.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಬಳಿಕ ರಾಮ ಜನ್ಮಭೂಮಿಯಲ್ಲಿ ನಡೆಯುತ್ತಿರುವ ರಾಮನವಮಿಗಾಗಿ ಲಕ್ಷಾಂತರ ಭಕ್ತರು ಅಯೋಧ್ಯೆ ರಾಮ ಮಂದಿರಕ್ಕೆ ಹರಿದು ಬಂದಿದ್ದಾರೆ. ರಾಮ ಮಂದಿರ ನಿರ್ಮಾಣ ಬಳಿಕ ಆಚರಿಸಲಾಗುತ್ತಿರುವ ಮೊದಲ ರಾಮನವಮಿ ರಾಮಮಂದಿರದಲ್ಲಿ ಕೌತುಕಕ್ಕೆ ಸಾಕ್ಷಿಯಾಯಿತು.
ಈ ಶುಭ ಸಂದರ್ಭದಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೂರ್ಯ ದೇವರು ರಾಮ ಮಂದಿರದ ಗರ್ಭಗುಡಿಯ ಮೇಲ್ಭಾಗದಿಂದ ತನ್ನ ಕಿರಣಗಳ ಮೂಲಕ ಪ್ರವೇಶಿ ಬಾಲರಾಮನ ಮೂರ್ತಿಯ ಹಣೆಗೆ ಸೂರ್ಯ ತಿಲಕವಿಟ್ಟಿದ್ದಾರೆ. ಈ ವಿಸ್ಮಯಕಾರಿ ದೃಶ್ಯಕ್ಕೆ ನೆರೆದಿದ್ದ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಸೂರ್ಯನ ಕಿರಣಗಳು ಸುಮಾರು 5 ನಿಮಿಷಗಳ ಕಾಲ ಬಾಲರಾಮನ ಹಣೆಯ ಮೇಲೆ ಸ್ಪರ್ಶಿಸಿವೆ. ಅತ್ಯದ್ಭುತ ದೃಶ್ಯ ಕೋಟ್ಯಂತರ ಭಾರತೀಯರನ್ನು ಮೂಕವಿಸ್ಮಿತರನ್ನಾಗಿಸಿದೆ. ಈ ವೇಳೆ ವೇದಮಂತ್ರಗಳ ಘೋಷ, ಶಂಖನಾದ, ಮಂಗಳಾರತಿ ಮೂಲಕ ಬಾಲರಾಮ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ