ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ : ಅಯ್ಯಪ್ಪಸ್ವಾಮಿ ಆಚರಣೆಯಲ್ಲಿ ಯೋಗದ ಪರಿಕಲ್ಪನೆಯಿದ್ದು, ಬ್ರಹ್ಮಚರ್ಯದ ಆದರ್ಶವಿದೆ. ತಾಂತ್ರಿಕ ಪರಿಕಲ್ಪನೆಗಳಿವೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಸಂಗನಕೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ಅಯ್ಯಪ್ಪಸ್ವಾಮಿ ಸೇವಾ ಸಮೀತಿ ಹಮ್ಮಿಕೊಂಡಿದ್ದ ಅಯ್ಯಪ್ಪಸ್ವಾಮಿಯ ಮಹಾಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಯ್ಯಪ್ಪಸ್ವಾಮಿಯ ಮಾಲೆಯನ್ನು ಧರಿಸಿ ೪೮ ದಿನಗಳವರೆಗೆ ಕಠಿಣ ವೃತ ಕೈಗೊಂಡು, ಶಬರಿಮಲೈ ಅಯ್ಯಪ್ಪ ದೇವಸ್ಥಾನದ ೧೮ ಮೆಟ್ಟಿಲು ಏರಿ ದರ್ಶನ ಪಡೆಯುವರು. ಇದು ಅತ್ಯಂತ ಕಠಿಣ ವೃತವಾಗಿದೆ. ಇದರಿಂದ ಭಾರತೀಯ ಪ್ರಾಚೀನ ಕಾಲದ ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿರುವುದರಿಂದ ಧಾರ್ಮಿಕ ವಾತಾವರಣ ಹರಡುತ್ತಿದೆ.
ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ತೇಲಂಗಾಣ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರು ಮಾಲಾಧಾರಿಯಾಗುತ್ತಿರುವುದು ಅಯ್ಯಪ್ಪಸ್ವಾಮಿ ದೇವರಲ್ಲಿ ಇಟ್ಟಿರುವ ಭಕ್ತಿ ಶೃದ್ಧೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಭಾರತ ದೇಶದ ಇತಿಹಾಸ, ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಎಲ್ಲ ಧರ್ಮಿಯರು ಸಹೋದರಂತೆ ಜೀವನ ಸಾಗಿಸುತ್ತಿರುವುದು ವಿವಿಧತೆಯಲ್ಲಿ ಏಕತೆ ಬಿಂಬಿಸುತ್ತದೆ. ನಮ್ಮ ದೇಶದ ಧಾರ್ಮಿಕ ವಾತಾವರಣ ಬೇರೆ ಯಾವ ದೇಶಗಳಲ್ಲೂ ಸಿಗುವುದಿಲ್ಲವೆಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಮುತ್ತೆಪ್ಪ ಕುಳ್ಳೂರ, ಕುಮಾರ ಮಾಳೇದವರ, ಯುವ ಮುಖಂಡ ಬಸವರಾಜ ಮಾಳೇದವರ, ಭೀಮಶಿ ಮಾಳೇದವರ, ಸುರೇಶ ಮಾಳ್ಯಾಗೋಳ, ನಾರಾಯಣ ಉಪ್ಪಾರಟ್ಟಿ, ಸಿದ್ರಾಮ ಚಿಕ್ಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ