Kannada NewsKarnataka NewsLatestPolitics

*ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಗೆ ಎಕ್ಸ್ ಪ್ರೆಷನ್ ಆಫ್ ಇ-ಟ್ರಸ್ಟ್ ಮೂಲಕ ಜಾಗತಿಕ ಟೆಂಡರ್: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜತೆ ಚರ್ಚೆ ಮಾಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಈಗಾಗಲೇ ಬಬಿಎಂಪಿ ಹಾಗೂ ಬಿಡಿಎ ಮೂಲಕ ಎಕ್ಸ್ ಪ್ರೆಷನ್ ಆಫ್ ಇ-ಟ್ರಸ್ಟ್ ಮೂಲಕ ಜಾಗತಿಕ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸಲ್ಲಿಕೆಗೆ ಆಗಸ್ಟ್ 8 ಕೊನೇ ದಿನವಾಗಿದೆ” ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಿನ್ನೆ ಭೇಟಿ ಮಾಡಿ ಚರ್ಚಿಸಿದ್ದೇನೆ. ಬೆಂಗಳೂರಿನಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಈ ರಸ್ತೆಗಳ ಮೂಲಕ ಬೆಂಗಳೂರಿಗೆ ಹೆಚ್ಚಿನ ವಾಹನಗಳು ಆಗಮಿಸಿ ಸಂಚಾರ ದಟ್ಟಣೆಗೆ ಕಾರಣವಾಗಿವೆ. ಈ ಸಂಚಾರ ದಟ್ಟಣೆ ನಿವಾರಣೆಗೆ ಕೇಂದ್ರ ಹೆದ್ದಾರಿ ಪ್ರಾಧಿಕಾರದ ಮೂಲಕ ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವರ ಜತೆ ಚರ್ಚಿಸಿದ್ದೇನೆ ಎಂದರು.

ನಮ್ಮ ವಿಚಾರಕ್ಕೆ ನಿತಿನ್ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅವರು ತಮ್ಮ ಸಲಹೆಯನ್ನೂ ನೀಡಿದ್ದಾರೆ. ಸುರಂಗ ರಸ್ತೆ, ಫ್ಲೈ ಓವರ್ ಅಥವಾ ಇತರೆ ಮಾದರಿ ಯೋಜನೆ ಜಾರಿ ಮಾಡಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ತಿಳಿಸಿದ್ದಾರೆ.

ಈಗಾಗಲೇ ಜುಲೈ 14 ರಂದ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿಯಿಂದ ಎಕ್ಸ್ ಪ್ರೆಷನ್ ಆಫ್ ಇ-ಟ್ರಸ್ಟ್ ಮೂಲಕ ಜಾಗತಿಕ ಟೆಂಡರ್ ಕರೆದಿದ್ದೇವೆ. ಆಗಸ್ಟ್ 8 ರಂದು ಕೊನೇ ದಿನವಾಗಿದೆ.

ಸಂಚಾರ ದಟ್ಟಣೆ ನಿಯಂತ್ರಣ ಮಾಡಿ ಬೆಂಗಳೂರಿನ ಚಿತ್ರಣ ಬದಲಿಸಬೇಕಿದೆ. ದೆಹಲಿ, ಮುಂಬೈ ನಗರಗಳಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿದ್ದರೂ, ಬೆಂಗಳೂರನ್ನು ಜಾಗತಿಕ ನಗರ ಎಂದು ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಕೇವಲ ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಮಾತ್ರ ಹೆಚ್ಚಾಗಿ ಮಾತನಾಡುತ್ತಾರೆ. ಸಂಚಾರ ದಟ್ಟಣೆ ನಿವಾರಣೆಗೆ ಕಾರ್ಯಕ್ರಮ ರೂಪಿಸಲು ನಾವು ಸಜ್ಜಾಗುತ್ತಿದ್ದು, ಈಗಾಗಲೇ ಚೀನಾ, ಸಿಂಗಾಪುರ, ಇಸ್ರೇಲ್ ಸೇರಿದಂತೆ ಹತ್ತಾರು ಕಂಪನಿಗಳು ಬಂದು ತಮ್ಮ ವಿಚಾರ ತಿಳಿಸಿವೆ. ಈ ಕಂಪನಿಗಳಿಗೆ ಈಗಾಗಲೇ ಎಕ್ಸ್ ಪ್ರೆಷನ್ ಆಫ್ ಇ-ಟ್ರಸ್ಟ್ ಮೂಲಕ ಕರೆಯಲಾಗಿರುವ ಟೆಂಡರ್ ನಲ್ಲಿ ಭಾಗವಹಿಸಿ, ಇಡೀ ಯೋಜನೆ ಹೇಗೆ ಜಾರಿ ಮಾಡಬಹುದು ಎಂದು ವಿವರಿಸುವಂತೆ ತಿಳಿಸಿದ್ದೇವೆ.”

ಆದಷ್ಟು ಬೇಗ ನೀರು ಹಂಚಿಕೆ ವಿವಾದ ಸಮಸ್ಯೆ ಬಗೆಹರಿಸಲು ಪ್ರಯತ್ನ:

ನೀರು ಹಂಚಿಕೆ ವಿವಾದ ಸಂಬಂಧ ಕಾನೂನು ತಜ್ಞರ ಜತೆ ಸಭೆ ಮಾಡಲಾಗಿದೆ. ಈವರೆಗೂ ನಾವು ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಮಹದಾಯಿ, ಕಾವೇರಿ, ಕೃಷ್ಣಾ ನದಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆ ವಿಚಾರವಾಗಿ ಮಾಹಿತಿ ಪಡೆದಿದ್ದೇನೆ. ಉಳಿದ ವಿಚಾರವನ್ನು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಉಳಿದ ನಿರ್ದೇಶನ ನೀಡಲಾಗುವುದು. ನಮಗೆ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ. ಆದಷ್ಟು ಬೇಗ ಎಲ್ಲಾ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ.

ಬಿಡಿಎ ಪ್ರಕರಣಗಳ ಕುರಿತು ವಕೀಲರಿಂದ ಮಾಹಿತಿ:

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ವಕೀಲರ ಜತೆಗೂ ಚರ್ಚೆ ಮಾಡಿ, ಎಷ್ಟು ಪ್ರಕರಣಗಳು ಬಾಕಿ ಉಳಿದಿವೆ, ಎಷ್ಟು ಪ್ರಕರಣ ದಾಖಲಾಗಿತ್ತು, ಎಷ್ಟು ಗೆಲ್ಲಲಾಗಿದೆ, ಎಷ್ಟು ಸೋತಿದ್ದೇವೆ ಎಂಬ ಮಾಹಿತಿ ಕೇಳಿದ್ದೇನೆ. ಇಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಬಹಳ ಮುಖ್ಯ. ಸರ್ಕಾರದ ಆಡಳಿತ ಯಂತ್ರ ಬಲಿಷ್ಠವಾಗಿರುವಂತೆ ನೋಡಿಕೊಳ್ಳುತ್ತೇವೆ. ಸದ್ಯ 350 ಪ್ರಕರಣ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಈ ವಿಚಾರವಾಗಿ ಮಾಹಿತಿ ಪಡೆದು, ಅವರ ಕಾರ್ಯವೈಖರಿ ನೋಡಿ ತೀರ್ಮಾನ ಮಾಡುತ್ತೇವೆ.

2019-2023ರ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಯಾವ ಕಾರಣಕ್ಕೆ ವರದಿ ಕೇಳಿದ್ದೀರಿ ಎಂಬ ಪ್ರಶ್ನೆಗೆ, “ಬಿಬಿಎಂಪಿ ಕಾಮಗಾರಿಗಳ ಅಕ್ರಮದ ಬಗ್ಗೆ ಕೆಂಪಣ್ಣ ಅವರು ಪತ್ರ ಬರೆದಿದ್ದರು. ಸದನದ ಒಳಗೆ ಬಿಜೆಪಿ ಶಾಸಕರು ಅನೇಕ ಹೇಳಿಕೆ ನೀಡಿದ್ದರು. ಲೋಕಾಯುಕ್ತ ಸಂಸ್ಥೆ ಕೂಡ ಕೆಲವು ಕಾಮಗಾರಿ ವಿಚಾರವಾಗಿ ತನ್ನದೇ ಆದ ವರದಿ ನೀಡಿದೆ. ಹೀಗಾಗಿ ಬಿಬಿಎಂಪಿ ಕಾಮಗಾರಿಗಳಲ್ಲಿ ನೈಜತೆ ಪರಿಶೀಲನೆ ಮಾಡಿ ಹಣ ಬಿಡುಗಡೆ ಮಾಡಬೇಕು ಎಂಬ ಸಲಹೆ ಬಂದಿವೆ. ಈ ಬಗ್ಗೆ ತನಿಖೆ ಮಾಡುವಂತೆ ಬಿಜೆಪಿ ಶಾಸಕರೇ ಸಲಹೆ ನೀಡಿದ್ದಾರೆ. ಅವರ ಸಲಹೆ ಗಮನದಲ್ಲಿಟ್ಟುಕೊಂಡು ವಾಸ್ತವಾಂಶ ಅರಿಯಲು ವರದಿ ಕೇಳಿದ್ದೇನೆ. ಅನೇಕರು ವರ್ಷಾನುಗಟ್ಟಲೆಯಿಂದ ಬಿಲ್ ಗಾಗಿ ಕಾಯುತ್ತಿದ್ದಾರೆ. ಯಾರು ಕೆಲಸ ಕೊಟ್ಟಿದ್ದಾರೆ? ಯಾವ ಕೆಲಸ ಆಗಿದೆ, ಅದರ ಗುಣಮಟ್ಟ ಏನಿದೆ? ಎಂದು ಪರಿಶೀಲನೆ ಆಗಬೇಕು. ಈ ವರದಿ ಬಂದ ನಂತರ ವಿವರವಾಗಿ ಮಾತನಾಡುತ್ತೇನೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button