Film & EntertainmentKannada NewsKarnataka NewsLatest

*ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮಹಾಕವಿ’ ಸಿನಿಮಾ ಹಾಲಿವುಡ್ ಗೋಲ್ಡನ್ ಎಜ್ ಚಿತ್ರೋತ್ಸವಕ್ಕೆ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಬೆಳಗಾವಿಯ ನಿರ್ಮಾಪಕ ಪ್ರಭು ಯತ್ನಟ್ಟಿಯವರ ಪಿ.ಆರ್. ಅಸೋಸಿಯೇಟ್ಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಕನ್ನಡ ಚಿತ್ರ ‘ಮಹಾಕವಿ’ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ.

ಈ ಚಿತ್ರವು ಹಾಲಿವುಡ್ ಗೋಲ್ಡನ್ ಎಜ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನ ಸ್ಪರ್ಧಾ ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಈ ಸ್ಪರ್ಧೆಯಲ್ಲಿ ಈಗಾಗಲೇ ಚಿತ್ರವು ಸೆಮಿಫೈನಲ್ ಹಂತಕ್ಕೂ ತಲುಪಿದೆ ಎಂದು ದಿನಾಂಕ 06-07-2026 ರಂದು ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪ್ರಕಟಿಸಿದ್ದಾರೆ.

ಪಂಪನ ಕಾವ್ಯ ಆಧಾರಿತ ಚಿತ್ರ
ಹತ್ತನೇ ಶತಮಾನದ ಕನ್ನಡದ ಆದಿಕವಿ ಪಂಪ ರಚಿಸಿದ ಕಾವ್ಯಗಳನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. ಕವಿಯ ಆಶಯಗಳನ್ನು ಅಭಿವ್ಯಕ್ತಿಸುವ ಈ ಚಿತ್ರದಲ್ಲಿ ಪಂಪನು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲು ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಲ್ಲದೆ ಪರ್ಯಾಯ ಪರಿಕಲ್ಪನೆಯನ್ನು ನೀಡಿದ ಚರಿತ್ರಾರ್ಹ ಸಂಗತಿಯೂ ಇದೆ. ರಾಜಪ್ರಭುತ್ವದ ಆಶ್ರಯದಲ್ಲಿದ್ದೂ ತನ್ನ ಸೃಜನಶೀಲ ಸ್ವಾತಂತ್ರ್ಯವನ್ನು ಬಿಟ್ಟುಕೊಡದ ಅಭಿವ್ಯಕ್ತಿ ವಿಧಾನವನ್ನು ಮೊಟ್ಟಮೊದಲಿಗೆ ನೀಡಿದ ಕೀರ್ತಿಯೂ ಪಂಪನಿಗೆ ಸಲ್ಲುತ್ತದೆ. ಪ್ರಭುತ್ವದ ಎದುರು ಪ್ರತಿನಾಯಕತ್ವದ ಪರಿಕಲ್ಪನೆಗೂ ಕಾರಣವಾದ ಪಂಪನ ಈ ಎಲ್ಲಾ ಆಶಯಗಳನ್ನು ‘ಮಹಾಕವಿ’ ಪ್ರತಿನಿಧಿಸುತ್ತದೆ.

Home add -Advt

ತಾರಾಗಣ ಮತ್ತು ತಂತ್ರಜ್ಞರು
ಪಂಪ ಕವಿಯ ಪಾತ್ರದಲ್ಲಿ ಬಹುಭಾಷಾ ಕಲಾವಿದ ಕಿಶೋರ್ ನಟಿಸಿದ್ದಾರೆ. ತಾರಾಗಣದಲ್ಲಿ ಸುಂದರ್ ರಾಜ್, ಅನುಪಮ್, ಕುಮಾರ್ ಗೋವಿಂದ್, ಪ್ರಮೀಳಾ ಜೋಷಾಯ್, ಶೀಲಾ, ಆಕಾಂಕ್ಷಾ ಬರಗೂರು, ಸುಂದರ್ ರಾಜ್ ಅರಸು, ಹನುಮಂತೇಗೌಡ, ರಾಘವ್, ರಾಜಪ್ಪ ದಳವಾಯಿ, ಶಾಂತರಾಜ್, ಬಾಲಕೃಷ್ಣ ಬರಗೂರು, ಚಲಪತಿ ಮುಂತಾದವರು ಇದ್ದಾರೆ.

ಸುರೇಶ್ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆ, ಹೊಸ್ನೆ ಮೂರ್ತಿ ಕಲಾ ವಿನ್ಯಾಸವಿರುವ ಈ ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪನವರೇ ಚಿತ್ರಕಥೆ, ಸಂಭಾಷಣೆ, ಗೀತರಚನೆಯೊಂದಿಗೆ ನಿರ್ದೇಶನ ಮಾಡಿದ್ದಾರೆ.

Related Articles

Back to top button