*ಸರ್ಕಾರ ತನ್ನ ವೈಫಲ್ಯ ಮುಚ್ಚಲು ಪೊಲೀಸ್ ಅಧಿಕಾರಿಗಳ ವಜಾ ಮಾಡುತ್ತಿದೆ: ಯತ್ನಾಳ ಆರೋಪ*
ಪ್ರಗತಿವಾಹಿನಿ ಸುದ್ದಿ: ಅಧಿಕಾರಿಗಳನ್ನು ವಜಾಗೊಳಿಸುವ ಮೂಲಕ ಸರ್ಕಾರ ತನ್ನ ವೈಫಲ್ಯವನ್ನು ಪೊಲೀಸ್ ಅಧಿಕಾರಿಗಳ ಮೇಲೆ ತೀರಿಸಿಕೊಳ್ಳುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಹತ್ಯೆಗೆ ಒಳಗಾದ ಅಂಜಲಿ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ ಅವರು ಸರ್ಕಾರದ ವೈಫಲ್ಯವನ್ನು ಮರೆಮಾಚುವ ಉದ್ದೇಶದಿಂದ ತರಾತುರಿಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದೇ ಅಂಜಲಿ ಕೊಲೆಗೆ ಕಾರಣ. ಹುಬ್ಬಳ್ಳಿ-ಧಾರವಾಡದಲ್ಲಿ ರಾಜಾರೋಷವಾಗಿ ನಡೆಯುತ್ತಿರೋ ಗಾಂಜಾ ಡ್ರಗ್ಸ್ ಹಾವಳಿಯಿಂದಲೇ ಈ ರೀತಿಯಾಗಿದೆ ಎಂದು ಹರಿಹಾಯ್ದರು.
ರಾಜಕೀಯ ಒತ್ತಡದಿಂದಾಗಿ ಪೊಲೀಸರು ಇಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಗಾಂಜಾ, ಅಫೀಮು ರಾಜಾರೋಶವಾಗಿ ಮಾರಾಟವಾಗುತ್ತಿದೆ. ಸರ್ಕಾರಕ್ಕೆ ಕೇವಲ ಕಠಿಣ ಕ್ರಮ ಅನ್ನೋದು ಒಂದು ಡೈಲಾಗ್ ಆಗಿಬಿಟ್ಟಿದೆ. ಗೃಹ ಸಚಿವರಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ ಬೇರೆ ಇಲಾಖೆ ಅಧಿಕಾರ ವಹಿಸಿಕೊಳ್ಳಲಿ ಎಂದು ಕಿಡಿಕಾರಿದರು.
ಒಬ್ಬ ದಲಿತ ಸಚಿವರಾಗಿರೋದ್ರಿಂದ ಗೃಹ ಸಚಿವರನ್ನ ತುಳಿಯುತ್ತಿದ್ದಾರೆ. ಒಲ್ಲದ ಮನಸ್ಸಿನಿಂದ ಸಚಿವರು ಗೃಹ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತವಾದ ಪರಿಹಾರ ನೀಡಬೇಕು. ಇದಿಗ ಮೃತರ ಕುಟುಂಬಕ್ಕೆ ರಕ್ಷಣೆ ನೀಡೋದು ಬಿಟ್ಟು ಆರೋಪಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದರು
ರಾಜ್ಯದಲ್ಲಿ ನಡೆದಿರೋ ಅರಾಜಕತೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಾಗುತ್ತದೆ. ನಮಗೆ ಸಿದ್ಧರಾಮಯ್ಯ ಅವರದ್ದೂ ಭಯ ಇಲ್ಲ ಡಿಕೆಶಿ ಬಗ್ಗೆಯೂ ಭಯ ಇಲ್ಲ. ಸರ್ಕಾರದ ವೈಫಲ್ಯದ ಬಗ್ಗೆ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಹತ್ಯೆಗಳ ಕುರಿತು ಗೃಹಸಚಿವರ ಆರೋಪ ವಿಚಾರವಾಗಿ ಮಾತನಾಡಿ, ನಮ್ಮ ಆಡಳಿತಾವಧಿಯಲ್ಲಿ ಎನ್ ಕೌಂಟರ್ ಗಳಾಗಿದ್ದರೆ ಇಂದು ಈ ರೀತಿ ಕೃತ್ಯಗಳಾಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧವೇ ಯತ್ನಾಳ ಅಸಮಾಧಾನವನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಈ ಹಿಂದೆ ಬಸವರಾಜ ಬೊಮ್ಮಾಯಿ ಹಾಗೂ ಅರಗ ಜ್ಞಾನೇಂದ್ರ ಮಾಡಿದ ತಪ್ಪಿನಿಂದಾಗಿ ಜನ ಬುದ್ದಿ ಕಲಿಸಿದ್ದಾರೆ. ಈಗಾಗಲೇ ನಮ್ಮ ಪಕ್ಷಕ್ಕೂ ಜನ ಸರಿಯಾದ ಬುದ್ದಿ ಕಲಿಸಿದ್ದಾರೆ ಎಂದರು.
ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ನಡೆದಾಗಲೇ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿರಲಿಲ್ಲ. ರಾಜ್ಯದಲ್ಲಿ ಗ್ಯಾರಂಟಿ ಜಾರಿಯಾದ ನಂತರ ಎಂಎಲ್‌ಎ ಹಾಗೂ ಜಿಲ್ಲಾ ಉಸ್ತುವಾರಿಗಳಿಗೆ ಉತ್ಪನ್ನ ಕಡಿಮೆಯಾಗಿದೆ. ಪೊಲೀಸ್ ಅಧಿಕಾರಿಗಳಿಂದ ಕೋಟಿ ಕೋಟಿ ಹಣ ವಸೂಲಿ ಮಾಡುತ್ತಾರೆ. ಪೊಲೀಸರ ವರ್ಗಾವಣೆ ಮಾಡಿ ದುಡ್ಡು ತಿನ್ನೋದೇ ಶಾಸಕರ ಕೆಲಸವಾಗಿದೆ ಎಂದು ಗಂಭೀರವಾಗಿ ಆರೋಪ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ