ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ತನಿಖೆ ಯಿಂದ ಎಲ್ಲಾ ಆಯಾಮಗಳು ಗೊತ್ತಾಗುತ್ತವೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಿಡಿಯಿಂದ ನನ್ನ ಮಾನಹಾನಿ ಆಗಿದೆ. ಇದರಲ್ಲಿ ಷಡ್ಯಂತ್ರ ಇದೆ. ಇದರ ಹಿಂದೆ ಕೆಲವರು ಇದ್ದಾರೆ. ಆದ್ದರಿಂದ ತನಿಖೆ ಮಾಡಿ ಎಂದು ರಮೇಶ ಜಾರಕಿಹೊಳಿ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ತನಿಖಾ ತಂಡ ರಚಿಸಲಾಗಿದೆ.
ಕಳೆದ ಒಂದು ವಾರದ ಬೆಳವಣಿಗೆಗಳನ್ನು ಎಸ್ ಐ ಟಿ ಗಮನ ಹರಿಸುತ್ತಿದೆ. ಎಸ್ ಐ ಟಿ ಗೆ ಸರ್ವ ಸ್ವತಂತ್ರವನ್ನು ನಾವು ಕೊಡಬೇಕಾಗುತ್ತದೆ. ರಾಜ್ಯದ ಜನತೆಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಆದ್ದರಿಂದ ಶೀಘ್ರದಲ್ಲಿ ವರದಿ ನೀಡುವಂತೆ ಎಸ್ ಐ ಟಿಗೆ ಸೂಚಿಸಲಾಗಿದೆ. ತನಿಖೆ ನಂತರ ಅಗತ್ಯ ಎನಿಸಿದರೆ ಎಸ್ ಐ ಟಿ , ಎಫ್ ಐ ಆರ್ ದಾಖಲಿಸಿಕೊಳ್ಳಲಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಇದು ಫೇಕ್ ಆಗಿದ್ದರೆ, ಫೇಕ್ ಸಿಡಿ ಮಾಡಿದವರು ಯಾರು? ಇದರ ಹಿನ್ನೆಲೆ ಯಾರು? ಎಲ್ಲಿ ಆಗಿದೆ ಎಂಬುದರ ಬಗ್ಗೆ ತನಿಖೆ ಆಗಬೇಕು. ಒಟ್ಟಾರೆ ತನಿಖೆಯಿಂದ ಎಲ್ಲಾ ಆಯಾಮಗಳು ಗೊತ್ತಾಗುತ್ತವೆ ಎಂದು ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ