
ಪ್ರಗತಿವಾಹಿನಿ ಸುದ್ದಿ: ಸದನದಲ್ಲಿ ಸದಸ್ಯರ ವರ್ತನೆಗಳಿಂದ ನೊಂದು ರಾಜೀನಾಮೆ ನೀಡುವುದಾಗಿ ಹೇಳಿದ್ದ ಸಭಾ ಪತಿ ಬಸವರಾಜ್ ಹೊರಟ್ಟಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಇತ್ತೀಚೆಗೆ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಕಲಾಪದ ವೇಳೆ ಸದಸ್ಯರ ನಡೆಯಿಂದ ಬೇಸರಗೊಂಡಿದ್ದ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಅವರ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ಬೆಳವಣಿಗೆಗಳ ಬಳಿಕ ತಮ್ಮ ರಾಜೀನಾಮೆ ವಿಚಾರದಿಂದ ಹಿಂದೆ ಸರಿದಿದ್ದಾಗಿ ತಿಳಿಸಿದ್ದಾರೆ.
ಸಭಾ ಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೆ. ಆದರೆ ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ರಾಜೀನಾಮೆ ಕೊಡಬೇಡಿ. ಎಲ್ಲರೂ ಕುಳಿತು ಮಾತನಾಡೋಣ ಎಂದು ಹೇಳಿದರು. ಅನ್ ಸೈನ್ಡ್ ರಾಜೀನಾಮೆ ಪತ್ರವೂ ವೈರಲ್ ಆಗಿತ್ತು. ಬೆಂಗಳೂರಿನಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಎಲ್ಲರೂ ರಾಜೀನಾಮೆ ನೀಡಬೇಡಿ ಎನ್ನುತ್ತಿದ್ದಾರೆ. ಹಾಗಾಗಿ ನಿರ್ಧಾರ ಅಲ್ಲಿಗೆ ಕೈಬಿಟ್ಟಿದ್ದು, ರಾಜೀನಾಮೆಯಿಂದ ಹಿಂದೆ ಸರಿದಿದ್ದೇನೆ ಎಂದರು.