ಬೀದಿ ಬೀದಿಯಲ್ಲಿ ನಿಮಗೆ ಕಲ್ಲು ಹೊಡೀತಾರೆ ಹುಷಾರ್ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಕೊರೋನಾ ವಿಷಯದಲ್ಲಿ ಮತ್ತು ಪ್ಯಾಕೇಜ್ ಘೋಷಣೆಯಲ್ಲಿ ಸಂಪೂರ್ಣವಾಗಿ ಎಡವಿದ್ದು, ಇದೇ ರೀತಿ ಮುಂದುವರಿದರೆ ಜನ ಬೀದಿ ಬೀದಿಯಲ್ಲಿ ನಿಮಗೆ ಕಲ್ಲು ಹೊಡೆಯುವ ಪರಿಸ್ಥಿತಿ ಬರಲಿದೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಡಬಲ್ ಎಂಜಿನ್ ಸರಕಾರ ಎಂದು ಹೇಳಿಕೊಂಡು ಬಂದ ಬಿಜೆಪಿಗೆ ಡಬಲ್ ಎಂಜಿನ್ ಅರ್ಥ ಏನು ಎಂದು ಕೇಳಬೇಕಾಗಿದೆ. ಆತ್ಮ ನಿರ್ಭರದ ಬಗ್ಗೆ ಮಾತನಾಡುತ್ತಿದ್ದವರು ಈಗ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಗಂಗಾನದಿ ಸ್ವಚ್ಛ ಮಾಡ್ತೀವಿ ಎಂದರು, ಈಗ ನೋಡಿದರೆ ಅಲ್ಲಿ ಎಷ್ಟೊಂದು ಹೆಣ ತೇಲ್ತಾ ಇದೆ. ಎಲ್ಲಿದೆ ಇವರ ಧರ್ಮ, ಎಲ್ಲಿದೆ ಇವರ ಸಂಸ್ಕೃತಿ, ನಾಚಿಕೆ ಆಗ್ತಾ ಇದೆ ಎಂದು ಕಿಡಿ ಕಾರಿದರು.
25 ಸಂಸದರು ಏನು ಮಾಡುತ್ತಿದ್ದಾರೆ? ಚಂಡಮಾರುತ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಗೆ ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಿಸಿದರು. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ಆರಂಭದಿಂದಲೂ ನಮಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಪ್ರವಾಹದಲ್ಲೂ ಹಣ ಕೊಟ್ಟಿಲ್ಲ, ಕೊರನಾದಲ್ಲಿ ಹಣವಿರಲಿ, ಆಕ್ಸಿಜನ್ ಕೂಡ ಕೊಟ್ಟಿಲ್ಲ. ಎಲ್ಲದಕ್ಕೂ ಹೈಕೋರ್ಟ್ ಹೇಳಬೇಕಾಗಿದೆ. ಹೈಕೋರ್ಟ್ ಛೀಮಾರಿ ಹಾಕಿದ ಮೇಲೆ ಆಕ್ಸಿಜನ್ ಬರುತ್ತಿದೆ ಇದೆಂತಹ ಡಬಲ್ ಎಂಜಿನ್ ಸರಕಾರ ಎಂದು ಹೆಬ್ಬಾಳಕರ್ ಪ್ರಶ್ನಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರೂಪ್ಪ ಅವರ ಬಗ್ಗೆ ನನಗೆ ಬಹಳ ಗೌರವವಿತ್ತು. ಆದರೆ ಅವರ ಆಡಳಿತ ವೈಖರಿ ನೋಡಿದರೆ ಬೇಸರವಾಗುತ್ತಿದೆ. ಎಷ್ಟು ಜನ ಆರೋಗ್ಯ ಮಂತ್ರಿಗಳಿದ್ದಾರೆ? ಆಕ್ಸಿಜನ್ ಗೊಬ್ಬ ಮಂತ್ರಿ, ಇಂಜಕ್ಷನ್ ಗೊಬ್ಬ ಮಂತ್ರಿ, ಬೆಡ್ ಗೊಬ್ಬ ಮಂತ್ರಿ, ಯಾವುದಕ್ಕೆ ಯಾರನ್ನು ಕೇಳಬೇಕು. ಕೇವಲ ಪ್ರಧಾನಿಯನ್ನು ಮೆಚ್ಚಿಸಲು ಸೋಂಕಿತರ ಸಂಖ್ಯೆ ಕಡಿಮೆ ತೋರಿಸುತ್ತಿದ್ದಾರೆ. ಟೆಸ್ಟಿಂಗ್ ಕಡಿಮೆ ಮಾಡಿ ಸೋಂಕಿತರ ಸಂಖ್ಯೆ ಇಳಿಮುಖವಾದಂತೆ ತೋರಿಸುತ್ತಿದ್ದಾರೆ. ಮೊದಲು 2 ರಿಂದ 2.5 ಲಕ್ಷ ಟೆಸ್ಟ್ ನಡೆಸಲಾಗುತ್ತಿತ್ತು. ಈಗ 75 -80 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ತಕ್ಷಣ ಮನೆ ಮನೆಗೆ ಹೋಗಿ ಟೆಸ್ಟಿಂಗ್ ಮಾಡಬೇಕಾಗಿದೆ. ಇಲ್ಲವಾದಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ. ಹಳ್ಳಿಗಳಲ್ಲಿ ಪ್ರತಿ ಮನೆ ಮನೆಗೆ ಕೊರೋನಾ ವ್ಯಾಪಿಸಿದೆ ಎಂದು ಅವರು ಎಚ್ಚರಿಸಿದರು.
ಬೆಳಿಗಾವಿ ಸರಕಾರಿ ಆಸ್ಪತ್ರೆಗೆ ಒಂದು ದಿನ ಕಾಲ್ ಮಾಡಿದಾಗ ಡಾಕ್ಟರ್ ಒಬ್ಬರು ಇಂದು 13 ಜನ ಸತ್ತಿದ್ದಾರೆ. ಒಬ್ಬೊಬ್ಬರದಾಗಿ ಹೆಣವನ್ನು ಕಳಿಸುತ್ತಿದ್ದೇವೆ ಎಂದಿದ್ದರು. ಅದೇ ದಿನ ಸರಕಾರ ಬಿಡುಗಡೆ ಮಾಡಿರುವ ಲೆಕ್ಕದಲ್ಲಿ 3 ಜನ ಸತ್ತಿದ್ದಾರೆ ಎಂದು ತೋರಿಸಲಾಗಿತ್ತು. ಎಲ್ಲವನ್ನು ಮುಚ್ಚಿಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಿತ್ಯ ಸಾಯುವವರ ಲೆಕ್ಕ ಬರುತ್ತಿದೆ. ಆದರೆ ಇಲ್ಲಿ ನೀಡುವ ಲೆಕ್ಕಕ್ಕೂ ಅದಕ್ಕೂ ತಾಳೆಯೇ ಆಗುತ್ತಿಲ್ಲ. ಲೆಕ್ಕ ಮುಚ್ಚಿಟ್ಟು ಏನು ಮಾಡುವವರಿದ್ದಾರೆ ಇವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವ್ಯಾಕ್ಸಿನೇಶನ್ ಲೆಕ್ಕ ಕೊಡಿ ಎಂದು ಜಿಲ್ಲಾಧಿಕಾರಿಗೆ ಕೇಳಿದ್ದೆ. ಈವರೆಗೂ ಲೆಕ್ಕ ಕೊಟ್ಟಿಲ್ಲ. ಬಿಜೆಪಿ ಶಾಸಕರಿರುವಲ್ಲಿ ಹೆಚ್ಚಿನ ವ್ಯಾಕ್ಸಿನೇಶನ್ ಮಾಡಲಾಗುತ್ತಿದೆ. ಕಾಂಗ್ರೆಸ್ ಶಾಸಕರಿರುವಲ್ಲಿ ಕಡಿಮೆ ಮಾಡಲಾಗುತ್ತಿದೆ. ಇದರಲ್ಲೂ ಪಕ್ಷಪಾತ ಮಾಡಲಾಗುತ್ತಿದೆ. ಆನ್ ಲೈನ್ ರಜಿಸ್ಟ್ರೇಶನ್ ಮಾಡಬೇಕು ಎನ್ನುತ್ತಾರೆ, ಹಳ್ಳಿಗಾಡಿನ ಮಹಿಳೆಯರು ಹೇಗೆ ರಜಿಸ್ಟ್ರೇಶನ್ ಮಾಡಲು ಸಾಧ್ಯ? ಮನೆ ಮನಗೆ ಹೋಗಿ ವ್ಯಾಕ್ಸಿನೇಶನ್ ಕೊಡುವ ಮೂಲಕ ಹಾದಿ ಬೀದಿಯಲ್ಲಿ ಸಾಯುವುದನ್ನು ತಪ್ಪಿಸಿ. ಕಾಂಗ್ರೆಸ್ ನಿಂದ 100 ಕೋಟಿ ರೂ. ಕೊಡ್ತೇವೆ ಎಂದು ಪತ್ರ ಬರೆದು 8 ದಿನ ಆದರೂ ಉತ್ತರವಿಲ್ಲ. ನಾವು ವಿರೋಧ ಪಕ್ಷವಾಗಿ ಎಲ್ಲ ರೀತಿಯ ಸಹಕಾರ ಕೊಡುತ್ತ ಬಂದಿದ್ದೇವೆ. ಆದರೆ ಎಲ್ಲವನ್ನೂ ಹೇಗೆ ಸಹಿಸಿಕೊಳ್ಳಲು ಸಾಧ್ಯ? ಎಂದು ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನಿಸಿದರು.
ಮುಂಗಾರು ಬರುತ್ತಿದೆ. ಆದರೆ ಯಾವುದೇ ಸಿದ್ಧೆತೆ ಇಲ್ಲ. ಕೃಷಿ ಅಧಿಕಾರಿಗಳನ್ನು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಬೀಜವಿಲ್ಲ, ಗೊಬ್ಬರವಿಲ್ಲ. ಯಾರಿಗೂ ಜವಾಬ್ದಾರಿಯೇ ಇಲ್ಲ. ಕೇವಲ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದರೆ ಏನು ಪ್ರಯೋಜನ? ರೈತರಿಗೆ ಸುಧಾರಿಸಿಕೊಳ್ಳಲು ಕನಿಷ್ಠ 2 ವರ್ಷ ಕಾಲಾವಕಾಶ ಕೊಡಿ. 10 ಲಕ್ಷ ರೂ. ಶೂನ್ಯ ಬಡ್ಡಿ ದರದ ಸಾಲಕೊಡಿ ಎಂದು ಆಗ್ರಹಿಸಿದರು.
ನಿನ್ನೆ ಮುಖ್ಯಮಂತ್ರಿಗಳು 1250 ಕೋಟಿ ರೂ. ಪ್ಯಾಕೇಜ್ ಘೋಷಿಸಿದರು. ಆದರೆ ಇದರಲ್ಲಿ ನೇಕಾರರನ್ನು ಸೇರಿಸಿಲ್ಲ. ಹಲವು ವರ್ಗಗಳನ್ನು ಸೇರಿಸಿಲ್ಲ. ಕಳೆದ ವರ್ಷ ನೇಕಾರರಿಂದ ಬಟ್ಟೆ ಖರೀದಿಸುವುದಾಗಿ ಹೇಳಿದ್ದರೂ ಏನನ್ನೂ ಮಾಡಿಲ್ಲ. ಕಾರ್ಮಿಕ ಕಲ್ಯಾಣ ನಿಧಿಯನ್ನು ಬಳಸಿ ಈ ವರ್ಷ ಪ್ಯಾಕೇಜ್ ಘೋಷಿಸಲಾಗಿದೆ. ಇದು ನಿಜವಾಗಿ 450 ಕೋಟಿ ರೂ. ಪ್ಯಾಕೇಜ್. ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ನ 10 ಲಕ್ಷ ಫಲಾನುಭವಿಗಳ ಪೈಕಿ ಕೇವಲ ಒಂದು ಲಕ್ಷ ಜನರಿಗೆ ಹಣ ತಲುಪಿದೆ. ಉಳಿದವುಗಳ ಲೆಕ್ಕ ಕೊಡುತ್ತಿಲ್ಲ. ದೇವರು ಇವರಿಗೆ ಸದ್ಬುದ್ದಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಜೊತೆಗೆ ಜನರು ಬಿಜೆಪಿ ಸರಕಾರ ನಿಮ್ಮನ್ನು ರಕ್ಷಿಸುವುದಿಲ್ಲ. ಅವರನ್ನು ನಂಬಿಕೊಂಡು ಅಮೂಲ್ಯ ಜೀವಕಳೆದುಕೊಳ್ಳಬೇಡಿ. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ ಎಂದು ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ಮಂತ್ರಿಗಳಿದ್ದರೂ ಉಸ್ತುವಾರಿ ಸಚಿವಸ್ಥಾನ ನಿಭಾಯಿಸುವ ಸಾಮರ್ಥ್ಯವಿಲ್ಲವೆ? ಅವರ್ಯಾರೂ ಅವರ ಕ್ಷೇತ್ರದಿಂದ ಹೊರಗೆ ಬರುತ್ತಿಲ್ಲ. ಇಷ್ಟು ದೊಡ್ಡ ಜಿಲ್ಲೆಗೆ ಫ್ಲೈಯಿಂಗ್ ಉಸ್ತುವಾರಿ ಸಚಿವರನ್ನು ಕೊಟ್ಟಿದ್ದಾರೆ. ಅವರು ಇಲ್ಲಿಗೆ ಬಂದು ವಾಪಸ್ ಬಾಗಲಕೋಟೆಗೆ ಹಾರಿಹೋಗುತ್ತಾರೆ. ಏನು ಹೇಳಿ ಏನು ಪ್ರಯೋಜನ. ಕಳೆದಬಾರಿ ಪ್ರವಾಹದಲ್ಲಿ ಆದ ಹಾನಿಗೆ ಲೋಕೋಪಯೋಗಿ ಇಲಾಖೆಯಿಂದ ಹಣ ಕೇಳಿದರೆ ಗೋವಿಂದ ಕಾರಜೋಳ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಇಂತವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಲಾಕ್ಡೌನ್ ನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜೊತೆಗೆ ಜನರಿಗೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರಕೊಡದೆ ಲಾಕ್ಡೌನ್ ಮಾಡಿದರೆ ಜನ ಏನು ಮಾಡಬೇಕು ಎಂದು ಪ್ರಶ್ನಿಸಿದ ಹೆಬ್ಬಾಳಕರ್, ಗ್ರಾಮ ಪಂಚಾಯಿತಿಯ ಮೂಲಕ ತಕ್ಷಣ ಪರಿಹಾರ ಹಂಚುವ ಕೆಲಸವನ್ನು ಮಾಡಬೇಕು. ಸುಮ್ಮನೆ ಕಣ್ಣೊರೆಸುವ ತಂತ್ರಮಾಡದೆ ಸಮರ್ಪಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ರಮೇಶ ಉಟಗಿ ಇದ್ದರು.
ಜನತೆಯ ಸೇವೆಗಾಗಿ 2 ಅಂಬುಲೆನ್ಸ್ ಅರ್ಪಿಸಿದ ಲಕ್ಷ್ಮಿ ಹೆಬ್ಬಾಳಕರ್
ಬೀದಿ ಬೀದಿಯಲ್ಲಿ ಹೆಣ ಸುಡುವಂತಾಗಿದೆ, ಎಲ್ಲಿ ಬಂತು ಇವರ ಅಚ್ಛೇದಿನ್? : ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ