*ಪೊಲೀಸರನ್ನೇ ತಳ್ಳಿ ಎಸ್ಕೇಪ್ ಆದ ಕಳ್ಳರು: ಬಂದೂಕು ಇದ್ದರೂ ದರೋಡೆಕೋರರನ್ನು ಹಿಡಿಯದ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಕಳ್ಳರು, ದರೋಡೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಗಳ್ಳರು ರಾಜಾರೋಷವಾಗಿ ಪೊಲೀಸರನ್ನೇ ತಳ್ಳಿ ಎಸ್ಕೇಪ್ ಆದರೂ ಪೊಲೀಸರು ಅವರನ್ನು ಹಿಡಿಯಲಾಗದೇ ನಿಂತ ಸ್ಥಿತಿ ನಿಪ್ಪಾಣಿಯಲ್ಲಿ ನಡೆದಿದೆ.
ನಿಪ್ಪಾಣಿ ನಗರದ ಮಾನೆ ಪ್ಲಾಟ್ ಬಳಿ ನಿನ್ನೆ ತಡರಾತ್ರಿ ಕಳ್ಳರ ಗ್ಯಾಂಗ್ ಗಸ್ತು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ಅವರನ್ನು ತಳ್ಳಿ ಪರಾರಿಯಾಗಿದೆ. ಪೊಲೀಸರ ಕೈಯಲ್ಲಿ ಬಂದೂಕುಗಳಿದ್ದರೂ ಕಳ್ಳನ್ನು ಹಿಡಿಯಲಾಗದ್ದನ್ನು ಕಂಡು ಸಾರ್ವಜನಿಕರು ಪೊಲಿಸರ ವೈಖರಿ ಪ್ರಶ್ನಿಸುವಂತಾಗಿದೆ.
ನಿಪ್ಪಾಣಿಯಲ್ಲಿ ಮೂವರು ಕಳ್ಳರ ಗ್ಯಾಂಗ್ ಮನೆಗಳ್ಳತನಕ್ಕೆ ಯತ್ನಿಸುತ್ತಿತ್ತು. ಈ ವೇಳೆ ಪೊಲೀಸರು ಗಸ್ತು ತಿರುತ್ತಿರುವುದನ್ನು ಕಂಡು ಕಳ್ಳರು ಅಲ್ಲಿಯೇ ಅಡಗಿ ಕುಳಿತಿದ್ದಾರೆ. ಯಾರೋ ಇದ್ದಂತೆ ಅನುಮಾನಗೊಂಡ ಪೊಲೀಸರು ಮತ್ತೆ ಅದೇ ಮಾರ್ಗದಲ್ಲಿ ವಾಪಸ್ ಬಂದಿದ್ದಾರೆ. ಈ ವೇಳೆ ಕಳ್ಳರು, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಅವರನ್ನು ನೂಕಿ ಎಸ್ಕೇಪ್ ಆಗಿದ್ದಾರೆ.
ಪೊಲೀಸರ ಕೈಯಲ್ಲಿ ಬಂದೂಕು ಇದ್ದರೂ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಕಳ್ಳರ ಕಾಲಿಗೆ ಗುಂಡೇಟು ಹೊಡೆದು ಹಿಡಿದಿಲ್ಲ. ಈ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಎದುರಿಗೆ ಸಿಕ್ಕಿಬಿದ್ದ ಕಳ್ಳರನ್ನೂ ಹಿಡಿಯಲಾಗದೇ ಇರುವ ಪೊಲೀಸರನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




