Kannada NewsLatest

ಕರ್ನಾಟಕವನ್ನೆ ಬಂದ್ ಮಾಡಿ ಹೋರಾಟ ನಡೆಸುತ್ತೇವೆ; ಪ್ರವೀಣ್ ಶೆಟ್ಟಿ ಎಚ್ಚರಿಕೆ…!

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆ ಪುಂಡಾಟದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಂಇಎಸ್ ಪುಂಡಾಟ ಖಂಡಿಸಿ ಕರವೆ ಕಾರ್ಯಕರ್ತರು ಸುವರ್ಣ ವಿಧಾನಸೌಧ ಚಲೋ ಪ್ರತಿಭಟನೆ ನಡೆಸುತ್ತಿದ್ದು, ಸುವರಣ ಸೌಧಕ್ಕೆ ಮುತ್ತಿಗೆ ಹಾಕಲು ಆಗಮಿಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ನಾಕಾಬಂದಿ ಹಾಕಿ ತಡೆದಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ಕರವೇ ಪ್ರವೀಣ್ ಶೆಟ್ಟಿ ನಡುವೆ ವಾಗ್ವಾದ ನಡೆದಿದೆ. ಎಂಇಎಸ್ ಪುಂಡರು ಪೊಲೀಸ್ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ನಾವು ಸರ್ಕಾರ ಹಾಗೂ ಪೊಲೀಸರ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಮನವೊಲಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಪ್ರವೀಣ್ ಶೆಟ್ಟಿ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಮಾತನಾಡಿದ ಪ್ರವೀಣ್ ಶೆಟ್ಟಿ, ರಾಜ್ಯ ಸರ್ಕಾರ, ಪೊಲೀಸರಿಗೆ ಬೆಂಬಲವಾಗಿ ಬಂದ ನಮ್ಮನ್ನು ಪೊಲೀಸರು ತಡೆದು ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ. ಎಂಇಎಸ್ ಪುಂಡರು ಪೊಲೀಸರ ವಾಹನಕ್ಕೂ ಬೆಂಕಿ ಹಚ್ಚಿದ್ದಾರೆ ಆದರೂ ಸರ್ಕಾರ, ಶಾಸಕರು, ಸಚಿವರು ಕಣ್ಮುಚ್ಚಿ ಕುಳಿತಿದ್ದಾರೆ. ಇವರ ಪರ ಹೋರಾಟಕ್ಕೆಂದು ನಾವು ಬಂದರೆ ನಮ್ಮನ್ನು ವಶಕ್ಕೆ ಪಡೆಯಲಾಗುತ್ತಿದೆ ಇದು ಖಂಡನೀಯ. ಇಡೀ ಕರ್ನಾಟಕವನ್ನೇ ಬಂದ್ ಮಾಡಿ ಹೋರಾಟ ನಡೆಸುತ್ತೇವೆ. ಬುಧವಾರ ಎಲ್ಲಾ ಸಂಘಟನೆಗಳು ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಘೋಷಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಎಂಇಎಸ್ ವಿರುದ್ಧ ಕರವೇ ಆಕ್ರೋಶ; ಸುವರ್ಣ ಸೌಧ ಚಲೋ ಆರಂಭಿಸಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button