*BREAKING: ಬೆಳಗಾವಿಯಲ್ಲಿ ಘೋರ ದುರಂತ: ಕಿತ್ತೂರು ಚನ್ನಮ್ಮ ಮೃಗಾಯಲದಲ್ಲಿ 28 ಕೃಷ್ಣಮೃಗಗಳು ನಿಗೂಢ ಸಾವು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೆಳಗಾವಿಯ ಹೊರವಲಯದಲ್ಲಿರುವ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣ ಮೃಗಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ಮೃಗಾಲಯದಲ್ಲಿ 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು ಒಂದೇ ದಿನ 20 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿವೆ. ಮೃಗಾಲಯದ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಪ್ರಾಥಮಿಕ ವರದಿ ಪ್ರಕಾರ ಬ್ಯಾಕ್ಟಿರಿಯಲ್ ಇನ್ ಫೆಕ್ಷನ್ ನಿಂದ ಕೃಷ್ಣ ಮೃಗಗಳು ಸಾವನ್ನಪ್ಪಿವೆ ಎಂದು ಡಿಎಫ್ ಒ ತಿಳಿಸಿದ್ದಾರೆ.
ಜಿಂಕೆಗಳು ಅಸಹಜವಾಗಿ ಮೃತಪಟ್ಟಿರುವ ಬಗ್ಗೆ ತೀವ್ರ ವ್ಯಾಕುಲ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತನಿಖೆಗೆ ಆದೇಶ ನೀಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಈ ಕೃಷ್ಣಮೃಗಗಳು ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಮೃಗಾಲಯದ ಬೇರೆ ಯಾವುದೇ ಪ್ರಾಣಿಗೆ ಸೋಂಕು ತಗುಲದಂತೆ ಎಲ್ಲ ಮುಂಜಾಗರೂತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಈ ಕೃಷ್ಣಮೃಗಗಳು ಕಲುಷಿತ ನೀರು, ಆಹಾರ ಸೇವಿಸಿ ಕಾಯಿಲೆಗೆ ತುತ್ತಾಗಿ ಮೃತಪಟ್ಟಿವೆಯೇ ಅಥವಾ ಬೆಕ್ಕು ಇತ್ಯಾದಿ ಸಾಕು ಪ್ರಾಣಿಗಳಿಂದ ಈ ಕಾಯಿಲೆ ಹರಡಿದೆಯೇ ಎಂಬ ಬಗ್ಗೆ ಒಂದು ತಜ್ಞರ ಸಮಿತಿ ರಚಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.



