ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆ ಆರೋಗ್ಯ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಗೋಲ್ ಮಾಲ್ ನಡೆದ ಆರೋಪ ಕೇಳಿಬಂದಿದೆ. ಕಮ್ಯೂನಿಟಿ ಹೆಲ್ತ್ ಆಫಿಸರ್ಸ್ ಹುದ್ದೆಗಳ ನೇಮಕಾತಿ ವೇಳೆ ವಂಚನೆ ನಡೆದಿರುವ ಆರೋಪವಿದೆ.
ಬೆಳಗಾವಿ ಜಿಲ್ಲೆಯಲ್ಲಿ 476 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 1600 ಅಭ್ಯರ್ಥಿಗಳು ಪರೀಕ್ಷೆ ಬರೆದು 1267 ಮಂದಿ ಪಾಸ್ ಆಗಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದಾಖಲೆ ಪರಿಶೀಲನೆ ನಡೆಸಿದ್ದ ಸದರಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಒಂದು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದ್ದರು. ಆದರೆ ಬಳಿಕ ಹಣದಾಸೆಗಾಗಿ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆರೋಗ್ಯ ಇಲಾಖೆಯಲ್ಲಿನ ಗೋಲ್ ಮಾಲ್ ಖಂಡಿಸಿ ಡಿಹೆಚ್ ಒ ಕಚೇರಿ ಎದುರು ಇತರ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಖಲೆ ಪರಿಶೀಲನೆ ವೇಳೆಯೂ ಪಾಸ್ ಆದವರನ್ನು ಕೈಬಿಡಲಾಗಿದ್ದು, ಸಿಹೆಚ್ ಒ ಗಳ ಪಟ್ಟಿಯಲ್ಲಿಯೂ ಕೆಲವರದ್ದು ಎರಡೆರಡು ಬಾರಿ ಹೆಸರು ನಮೂದಾಗಿದೆ ಎಂದು ಹೇಳಲಾಗುತ್ತಿದೆ.
476 ಹುದ್ದೆಗಳಿಗೆ ನಡೆದಿರುವ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಾನೂನುಬಾಹಿರವಾಗಿ ನಡೆದಿದ್ದು, ಆಯ್ಕೆ ಪಟ್ಟಿಯನ್ನು ವಾಪಸ್ ಪಡೆಯದಿದ್ರೆ ಹೋರಾಟ ಮಾಡುವುದಾಗಿ ಅಭ್ಯರ್ಥಿಗಳು ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ