ಆಯುಧ ಪೂಜೆ ಎಂದರೆ ಚಾಕು, ಕತ್ತರಿ ಪೂಜೆಯಲ್ಲ ಹೊಡೆದಾಟದ ಶಸ್ತ್ರಾಸ್ತ್ರ ಪೂಜಿಸುವುದು; ವಿಹೆಚ್ ಪಿ ಮುಖಂಡ ಗೋಪಾಲ್ ನಾಗರಕಟ್ಟೆ
ಪ್ರಗತಿವಾಹಿನಿ ಸುದ್ದಿ;ಬೆಳಗಾವಿ: ಶಸ್ತ್ರಾಸ್ತ್ರ ಪೂಜೆ ಎಂದರೆ ಚಿಕ್ಕಪುಟ್ಟ ಚಾಕು, ಕತ್ತರಿಗಳನ್ನು ಪೂಜಿಸುವುದಲ್ಲ. ಹೊಡೆದಾಟ ಮಾಡಲು ಬಳಸುವ ಶಸ್ತ್ರಗಳನ್ನು ಪೂಜೆ ಮಾಡುವುದು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ನಾಗರಕಟ್ಟೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಗೋಪಾಲ ನಾಗರಕಟ್ಟೆ, ಆಯುಧ ಪೂಜೆ ಎಂದರೆ ಚಾಕು, ಕತ್ತರಿ ಪೂಜೆ ಮಾಡುವುದಲ್ಲ, ಹೊಡೆದಾಟಕ್ಕೆ ಬಳಸುವ ಶಸ್ತ್ರಗಳನ್ನು ಪೂಜೆ ಮಾಡುವುದು. ಅಂತಹ ಶಸ್ತ್ರಗಳನ್ನು ಅಭ್ಯಾಸ ಮಾಡಿ ಹಿಂದೂಗಳು ಪರಾಕ್ರಮ ಪ್ರದರ್ಶಿಸಬೇಕು ಎಂದು ತಿಳಿಸಿದ್ದಾರೆ.
ಇಂದು ಪ್ರತಿಯೊಬ್ಬ ಹಿಂದೂ ಶಸ್ತ್ರಗಳನ್ನು ಬಳಸಲು ಕಲಿಯಬೇಕಿದೆ. ಶಸ್ತ್ರಗಳನ್ನು ಬಳಸಲು ಕಲಿಯುವುದು ಎಂದರೆ ನಾವು ರಾವಣ, ಸದ್ದಾಂ ಹುಸೇನ್ ತರಹ ಆಗಬೇಕಿಲ್ಲ. ರಾಮ, ಶಿವಾಜಿಯ ಹಾಗೆ ಸದ್ಗುಣ ಸಂಪನ್ನರಾಗಿರುವ ಪರಾಕ್ರಮಿಗಳಾಗಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಆ ಮೂಲಕ ಹಿಂದೂಗಳು ಸಮಾಜದ ಉನ್ನತಿಗೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಹಿಂದೂ ಸಮಾಜದಲ್ಲಿ ಪರಾಕ್ರಮವನ್ನು ಜಾಗೃತಗೊಳಿಸಬೇಕು. ಸರ್ಕಾರ, ಪೊಲೀಸರು, ಸೈನಿಕರಿಂದ ಮಾತ್ರ ಹಿಂದೂ ಧರ್ಮ ರಕ್ಷಣೆ ಸಾಧ್ಯವಿಲ್ಲ. ಪ್ರತಿಯೊಬ್ಬ ಹಿಂದುವೂ ಪರಾಕ್ರಮ ಪ್ರದರ್ಶನಕ್ಕೆ ಸಿದ್ಧರಾಗಬೇಕು ಎಂದು ಅಭಿಪ್ರಾಯಪಟ್ಟರು.
ನಾವು ಬೇರೆಯವರ ಮುಂದೆ ಹೋಗಿ ಪರಾಕ್ರಮ ತೋರಿಸಬೇಕಿಲ್ಲ. ಹಿಂದೂಗಳ ವಿಚಾರಕ್ಕೆ ಬಂದರೆ ಸರಿಯಾದ ಉತ್ತರವನ್ನು ಕೊಡಬೇಕು. ಪರಾಕ್ರಮದಿಂದಾಗಿಯೇ ಹಿಂದೂ ಸಂಸ್ಕೃತಿ ಉಳಿಸಬೇಕಿದೆ. ಭಾರತೀಯ ಸಂಸ್ಕೃತಿ, ಧರ್ಮ ಉಳಿಸಲು ಪರಾಕ್ರಮ ಜಾಗೃತವಾಗಬೇಕು. ಈ ಕಾರಣಕ್ಕೆ ಪ್ರತಿ ಮನೆಯಲ್ಲಿ ಪರಾಕ್ರಮದ ಆರಾಧನೆ ನಡೆಯಬೇಕು ಎಂದರು.
ಕೆಲ ವರ್ಷಗಳ ಕಾಲ ಶಾಂತಿ ಶಾಂತಿ ಎಂದು ಕೆಲವರು ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪರಾಕ್ರಮ ತೋರಿಸುವುದು ಅನಿವಾರ್ಯವಾಗಿದೆ. ಯಾರಿಗೆ ಪರಾಕ್ರಮ ತೋರಲು ಧೈರ್ಯ ಇಲ್ಲವೋ ಅವರು ಛತ್ರಪತಿ ಶಿವಾಜಿ ಭಾವಚಿತ್ರ ಹಾಕಲು ಅನರ್ಹರು ಎಂದು ಕಿಡಿಕಾರಿದರು.
ಹಿಂದೂ ಕಾರ್ಯಕರ್ತರು ಪೊಲೀಸ್ ಕೇಸ್ ಗಳಿಗೆ ಹೆದರಬಾರದು. ಕನ್ನಯ್ಯಲಾಲ್ ಹತ್ಯೆಯಾದಾಗ, ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆದಾಗ ಬಜರಂಗದಳ ಯುವಕರು ಸುಮ್ಮನಾಗಿದ್ದು ದುರ್ದೈವ. ಬಜರಂಗದಳ ಯುವಕರಿಗೆ ಬಿಸಿ ರಕ್ತ ಇಲ್ಲವೇ? ಬಜರಂಗದಳ ಕಾರ್ಯಕರ್ತರು ಬೀದಿಗೆ ಇಳಿದಿದ್ದರೆ ಮುಂದಿನ 50 ವರ್ಷಗಳ ಕಾಲ ನೂಪುರ್ ಶರ್ಮಾರಂತವರ ವಿರುದ್ಧ ವಿರೋಧ ವ್ಯಕ್ತವಾಗುತ್ತಿರಲಿಲ್ಲ ಎಂದು ಗೋಪಾಲ್ ನಾಗರಕಟ್ಟೆ ತಿಳಿಸಿದ್ದಾರೆ.
ಮೈಸೂರು ದಸರಾ ಮಹೋತ್ಸವ: ಐತಿಹಾಸಿಕ ಜಂಬೂ ಸವಾರಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ