Kannada NewsLatest

*ಬೆಳಗಾವಿ: ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಂದಿನಿಂದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಆರಂಭವಾಗಿದ್ದು, ಬೆಳಗಾವಿಯ ವೀರಸೌಧದ ಬಳಿ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ ದೊರೆತಿದೆ.

ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯ ವೀರಸೌಧದ ಬಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಸ್ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೋಳಿ ಸೇರಿದಂತೆ ಕಾಂಗ್ರೆಸ್ ನಾಯಕರು ಬಸ್ ಯಾತ್ರೆಗೆ ಚಾಲನೆ ನೀಡಿದರು.

ಬೆಳಗಾವಿಯಿಂದ ಚಿಕ್ಕೋಡಿಗೆ ಬಸ್ ಯಾತ್ರೆಯ ಮೂಲಕ ಕಾಂಗ್ರೆಸ್ ನಾಯಕರು ತೆರಳಲಿದ್ದು, ಮಧ್ಯಾಹ್ನ 12 ಗಂತೆಗೆ ಚಿಕ್ಕೋಡಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯದ ಬದಲಾವಣೆಗೆ ಇಂದು ನಾಂದಿ ಹಾಡಿದ್ದೇವೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬಸ್‌ಯಾತ್ರೆಗೆ ಚಾಲನೆ ದೊರೆತಿದೆ. ಮಹಾತ್ಮ ಗಾಂಧೀಜಿಯವರು ಬ್ರಿಟಿಷ್‌ರನ್ನು ಓಡಿಸಲು ಈ ನಾಡಿನಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಹೋರಾಡಿದ್ರು. ಅದಾದ ಮೇಲೆ ಪ್ರಜಾಪ್ರಭುತ್ವ ಬಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ.

ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಸರ್ಕಾರ ನಮ್ಮ ರಾಜ್ಯಕ್ಕೆ ದೊಡ್ಡ ಕಳಂಕ ತಂದಿದೆ. ಆ ಕಳಂಕ ನಿರ್ಮೂಲನೆ ಮಾಡಲು ಪ್ರಜೆಗಳ ಧ್ವನಿ ತಿಳಿಸಲು ಹೊರಟಿದ್ದೇವೆ. ಐತಿಹಾಸಿಕವಾದ ಈ ಭೂಮಿಯಿಂದ ಪ್ರಜಾಧ್ವನಿ ಗ್ಯಾರಂಟಿ ಯಾತ್ರೆ ಆರಂಭ. ಈ ತಿಂಗಳು ಜಿಲ್ಲಾ ಕೇಂದ್ರಗಳನ್ನ ಮುಗಿಸಿ ಬಳಿಕ ಕ್ಷೇತ್ರವಾರು ಸಂಚಾರ ಆರಂಭಿಸುತ್ತೇವೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸಂಚಾರ ಮಾಡ್ತೀವಿ. ಆಯಾ ಭಾಗಕ್ಕೆ ಹೋದಾಗ ಆಯಾ ನಾಯಕರು ಬರ್ತಾರೆ. 20 ಜಿಲ್ಲೆಗಳಲ್ಲಿ ನಾನು ಸಿದ್ದರಾಮಯ್ಯ ಹೆಚ್.ಕೆ.ಪಾಟೀಲ್ ಸೇರಿ ಹಿರಿಯ ನಾಯಕರು ಸಂಚರಿಸುತ್ತೇವೆ ಎಂದು ಹೇಳಿದರು.

ಹೊಸಬರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರವಾಗಿ, ಖಂಡಿತ ಹೊಸಬರಿಗೆ ಅವಕಾಶ ಕೊಡ್ತೇವೆ. ನವ ಕರ್ನಾಟಕಕ್ಕೆ ಕಾಂಗ್ರೆಸ್ ಸಂಕಲ್ಪ ಮಾಡುತ್ತಿದೆ. ಪಂಚಮಸಾಲಿ ಮೀಸಲಾತಿ ಬಗ್ಗೆ ಕೂಡಲಸಂಗಮ ಸ್ವಾಮೀಜಿ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ತುಪ್ಪವನ್ನು ತಲೆ ಮೇಲೆ ಇಟ್ಟಿದ್ದಾರೆ ಎಂದು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ ಎಲ್ಲಾ ವರ್ಗಗಳನ್ನು ಬಿಜೆಪಿಯವರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಗುಡುಗಿದರು.

ಐತಿಹಾಸಿಕವಾದ ಬೆಳಗಾವಿ ಸ್ಥಳಕ್ಕೆ ಭೇಟಿ ಮಾಡಿ ಕರ್ನಾಟಕ ಜನತೆಯ ನೋವು, ಅವರ ಅಭಿಪ್ರಾಯವನ್ನು ಜನರ ಮುಂದೆ ಇಡುವ ಕಾರ್ಯಕ್ರಮ ಪ್ರಜಾ ಧ್ವನಿಯ ಯಾತ್ರೆ. ಮಹಾತ್ಮ ಗಾಂಧಿಯವರ 1924ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಟ ಮಾಡಲು ಬೆಳಗಾವಿಯ ವೀರಸೌಧದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಿ ನಾಯಕತ್ವ ವಹಿಸಿ ಬ್ರಿಟಿಷರನ್ನು ಭಾರತದಿಂದ ಓಡಿಸಲು ರೂಪರೇಷೆ ಹಾಕಿದ್ದರು. ಅದೇ ರೀತಿ ನಾವು ರಾಜ್ಯ ಬಿಜೆಪಿ ಸರಕಾರವನ್ನು ಜನರೇ ಕಿತ್ತು ಹಾಕಬೇಕೆಂದು ವೀರಸೌಧದ ಗಾಂಧಿ ಬಾವಿಯಿಂದ ನೀರು ತೆಗೆದು ಹೆಣ್ಣು ಮಕ್ಕಳು ಕಾಯ್ದಕೊಂಡಿದ್ದಾರೆ. ಇಲ್ಲಿಂದ ನೀರು ಹಾಕಿ ರಾಜ್ಯವನ್ನು ತೊಳೆಯುವ ಕೆಲಸ ಮಾಡುತ್ತೇವೆ ಎಂದರು.

ರಾಜ್ಯ ಬಿಜೆಪಿಯ ಭ್ರಷ್ಟಾಚಾರ ಸರಕಾರ, ಬಿ ರಿಪೋರ್ಟ್ ಸರಕಾರಕ್ಕೆ ಮುಕ್ತಿಕೊಟ್ಟು ಬಲಿಷ್ಟ ಸರಕಾರ ಮಾಡಬೇಕು. ಜನರಿಗೆ ಭರವಸೆ ನೀಡಬೇಕೆಂಬ ಉದ್ದೇಶದಿಂದ ಪ್ರಜಾ ಧ್ವನಿ ಯಾತ್ರೆ ಮಾಡಲಾಗುತ್ತಿದೆ ಎಂದರು.

ಇಡೀ ನಮ್ಮ ದೇಶಕ್ಕೆ ಮಾದರಿಯಾದ ಸರಕಾರ ಇತ್ತು. ಯುವಕರಿಗೆ ಉದ್ಯೋಗ ಸೃಷ್ಟಿ ನೀಡುವ ಸರಕಾರ ಇತ್ತು. ಈಗ ಅದು ಮಾಯವಾಗಿದೆ. ಬಿಜೆಪಿ ಮೂರುವರೆ ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿರುವುದು ಜನರಿಗೆ ಒಂದು ಶಾಪವಾಗಿ ಪರಿಣಮಿಸಿದೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ತನಿಖೆ ನಡೆಯುವಾಗಲೇ ಬಿ ರಿಪೋರ್ಟ್ ಹಾಕಿದ್ದಾರೆ ಎಲ್ಲಿದೆ ನ್ಯಾಯ ಎಂದು ಪ್ರಶ್ನಿಸಿದರು.

ಬೆಳಗಾವಿಯಲ್ಲಿ ನೆರೆ ಬಂದಾಗ ಯಾವ ಮಂತ್ರಿ ಬಂದಿದ್ದರು. ಬೆಳಗಾವಿಗೆ ಸಾಕಷ್ಟು ಕೊಡುಗೆ ನೀಡಿದ್ದ ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಕೊರೊನಾದಿಂದ ಮೃತಪಟ್ಟ ಸಂದರ್ಭದಲ್ಲಿ ಅವರ ದೇಹ ತಂದು ಕೊಡಲು ಆಗಲಿಲ್ಲ ಸರಕಾರಕ್ಕೆ ಎಂದು ಹರಿಹಾಯ್ದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ, ಮಾಜಿ ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಬಸವರಾಜ ರಾಯರೆಡ್ಡಿ, ಪಿ.ಟಿ.ಪರಮೇಶ್ವರ ನಾಯಕ, ಆರ್. ವಿ.ದೇಶಪಾಂಡೆ ವಿನಯ ಕುಲಕರ್ಣಿ, ಡಿ.ಬಿ.ಇನಾಮದಾರ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ಕೌಜಲಗಿ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

*ತೀರ್ಥಹಳ್ಳಿಯಲ್ಲಿ NIA ಅಧಿಕಾರಿಗಳ ದಿಢೀರ್ ದಾಳಿ*

https://pragati.taskdun.com/nia-raidshivamoggatirthahalli/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button