ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹತ್ತು ದಿನಗಳ ಕಾಲ ತರಬೇತಿ ಪಡೆದು ಇಲ್ಲಿಂದ ತೆರಳುವ ಪೊಲೀಸ್ ಕಾನ್ಸ್ಟೇಬಲ್ ಮತ್ತು ಸೈನಿಕ ಹುದ್ದೆ ಆಕಾಂಕ್ಷಿಗಳು ಸ್ವಾರ್ಥಿಗಳಾಗಬೇಡಿ. ಇಲ್ಲಿಗೆ ನಿಮ್ಮ ನೆರೆಹೊರೆಯ ಬಡವ, ದೀನ, ದಲಿತ, ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ಕಳಿಸಿ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಹೇಳಿದರು.
ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ದೇವದಾಸಿಯರ ಮಕ್ಕಳು, ಹಿಂದುಳಿದ ವರ್ಗ, ದಲಿತ ಮತ್ತು ದಮನಿತ ವಿದ್ಯಾರ್ಥಿಗಳಿಗೆ ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ 10 ದಿನಗಳ ಕಾಲ ನಡೆದ ಪೊಲೀಸ್ ಕಾನ್ಸ್ಟೇಬಲ್ ಮತ್ತು ಸೈನಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಅವರು, ನಿಮಗಿಂತ ಕಷ್ಟದಲ್ಲಿರುವವರನ್ನು, ಅವಕಾಶ ವಂಚಿತರನ್ನು ನಮ್ಮ ತರಬೇತಿ ಕೇಂದ್ರಕ್ಕೆ ಕಳಿಸಿ. ಅವರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ನೀವು ಇಲ್ಲಿ 10 ದಿನಗಳ ಕಾಲ ಕಲಿತ ವಿಷಯಗಳನ್ನು ಹಂಚಿಕೊಳ್ಳಿ ಎಂದರು.
ಅಲ್ಲದೇ, ಅವಕಾಶ ಸಿಗದಂತಹ ವ್ಯಕ್ತಿಗಳನ್ನು ಗುರುತಿಸಲು ನೀವು ನಮಗೆ ನೆರವಾಗಿ. ಏಕೆಂದರೆ, ರಾಯಚೂರು, ವಿಜಯಪುರ, ಬಳ್ಳಾರಿ, ವಿಜಯನಗರ ಮೊದಲಾದ ಕಡೆ ಇರುವ ಪರಿಸ್ಥಿತಿ ನಮ್ಮಂತವರಿಗೆ ಗೊತ್ತಿರುವುದಿಲ್ಲ. ನೀವು ನಿಮ್ಮ ಸ್ಥಳೀಯ ಪರಿಸರದಲ್ಲಿ ತರಬೇತಿ ಅಗತ್ಯ ಇರುವವರನ್ನು ಗುರುತಿಸಿ ಇಲ್ಲಿಗೆ ತರಬೇತಿಗೆ ಕಳುಹಿಸಿ ಎಂದರು.
ಈಗಾಗಲೇ ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಉದ್ಯಮಶೀಲತಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಮುಂದೆ ಐಎಎಸ್, ಕೆಎಎಸ್, ಹೋಟೆಲ್ ಮ್ಯಾನೇಜ್ ಮೆಂಟ್, ಗಗನಸಖಿಯರಿಗೆ ತರಬೇತಿ ನೀಡುವ ಉದ್ದೇಶವಿದೆ ಎಂದರು.
ಅಲ್ಲದೇ, ಸತೀಶ್ ಜಾರಕಿಹೊಳಿಯವರು ದೂರದೃಷ್ಟಿಯಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಆದಷ್ಟು ಶೀಘ್ರದಲ್ಲಿ ತರಬೇತಿ ನೀಡಬೇಕು ಎಂಬ ಉದ್ದೇಶದಿಂದ ಮೂರು ಸ್ಥಳಗಳಲ್ಲಿ ನೂತನವಾಗಿ ತರಬೇತಿ ಶಿಬಿರಗಳನ್ನು ತೆರೆಯಲಿದ್ದಾರೆ. ಇದೇ ಜೂನ್ ವೇಳೆಗೆ ಒಂದು ತರಬೇತಿ ಕೇಂದ್ರ ಉದ್ಘಾಟನೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ನಿವೃತ್ತ ಪ್ರಾಂಶುಪಾಲ ಡಾ.ಎಚ್.ಆರ್.ಸ್ವಾಮಿ, ಓದುವುದನ್ನು ಬಲ್ಲವರು ಒಮ್ಮೆ ಓದಿದರೆ, ಓದಿನ ಹಿನ್ನೆಲೆ ಇಲ್ಲದ ನಿಮ್ಮಂತವರು ನಾಲ್ಕು ಪಟ್ಟು ಹೆಚ್ಚು ಶ್ರಮ ಹಾಕಬೇಕು. ಆದ್ದರಿಂದ ನೀವು ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ಪುಸ್ತಕಗಳನ್ನು ಓದಿ. ಸಾಧ್ಯವಾದರೆ ನಿಮ್ಮ ಸುತ್ತಮುತ್ತ ಇರುವ ವಿದ್ಯಾರ್ಥಿಗಳಿಗೆ ಅದೇ ವಿಷಯವನ್ನು ಬೋಧಿಸಿ. ಆಗ ವಿಷಯ ನಿಮ್ಮ ಮೆದುಳಿನಲ್ಲಿ ದಾಖಲಾಗುತ್ತದೆ. ಮೆದುಳಿನಲ್ಲಿ ತುಂಬಿಕೊಂಡಿದ್ದರೆ ನೀವು ವಿಷಯವನ್ನು ಹಂಚಬಹುದು. ಆದ್ದರಿಂದ ಪರಿಶ್ರಮ ಪಟ್ಟು ಕಲಿಯಿರಿ ಎಂದರು.
ಅಶೋಕ ಯಾವ ದೇಶದ ವಿರುದ್ಧ ಯುದ್ಧ ಮಾಡಿದ ಎಂಬ ಪ್ರಶ್ನೆಗೆ ನಿಮಗೆಲ್ಲ ಉತ್ತರ ಗೊತ್ತಿರಬಹುದು. ಆದರೆ, ಆ ದೇಶದ ರಾಜನ ಹೆಸರೇನು ಎಂದು ಕೇಳಿದರೆ ನಿಮಗೆ ಯಾರಿಗೂ ಉತ್ತರ ಗೊತ್ತಿರುವುದಿಲ್ಲ. ಇಂತಹ ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುತ್ತಾರೆ. ಆದ್ದರಿಂದ ನೀವು ಇಲ್ಲಿ ನಿಮಗೆ ಕೊಟ್ಟಿರುವ ಸ್ಪರ್ಧಾತ್ಮಕ ಪರೀಕ್ಷೆಯ ಕೈಪಿಡಿಗಳನ್ನು ನಿರಂತರವಾಗಿ ಓದಿಕೊಳ್ಳಿ. ಜೊತೆಗೆ ಇಲ್ಲಿ ತರಬೇತಿ ಅವಧಿಯಲ್ಲಿ ನೀವು ಮಾಡಿಕೊಂಡಿರುವ ಟಿಪ್ಪಣಿಗಳನ್ನು ಅಭ್ಯಾಸ ಮಾಡಿ, ಯಶಸ್ಸನ್ನು ಗಳಿಸಿ ಎಂದರು.
ವೈಜ್ಞಾನಿಕ ಮನೋಭಾವನೆಯನ್ನು ಎಲ್ಲರೂ ಮೂಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಆಧುನಿಕ ಕಾಲದಲ್ಲಿ ಮನುಷ್ಯರು ಎಲ್ಲ ರೀತಿಯಲ್ಲೂ ಬದಲಾಗಿದ್ದಾರೆ. ಆದರೆ ವೈಜ್ಞಾನಿಕ ವಿಷಯದಲ್ಲಿ ಬದಲಾವಣೆಯಾಗಿಲ್ಲ. ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಘಟನೆಗಳನ್ನು ನೋಡಿಯಾದರೂ ನಮ್ಮಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ರಾಜ್ಯಶಾಸ್ತ್ರ ಉಪನ್ಯಾಸಕ ಸಂತೋಷ್ ಮೆಳವಂಕಿ, 10 ದಿನಗಳ ಉಚಿತ ತರಬೇತಿಯ ಸದುಪಯೋಗವನ್ನು ನೀವು ಪಡೆದುಕೊಳ್ಳಬೇಕು. ಬೇರೆ ಕೋಚಿಂಗ್ ಸೆಂಟರ್ ಗಳಲ್ಲಿ ಹಣಕೊಟ್ಟರೂ ಇಷ್ಟು ಗುಣಮಟ್ಟದ ತರಬೇತಿ ಸಿಗುವುದಿಲ್ಲ. ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಉಚಿತವಾಗಿ ಕೊಡುತ್ತಿರುವ ತರಬೇತಿಯ ಲಾಭವನ್ನು ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳಿ ಎಂದರು.
ಗಣಿತ, ಮಾನಸಿಕ ಸಾಮರ್ಥ್ಯ ಉಪನ್ಯಾಸಕ ಹನುಮಂತ್ ನಂದಿ ಮಾತಾಡಿ, ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ತಳಸಮುದಾಯದ ವಿದ್ಯಾರ್ಥಿಗಳ ಏಳ್ಗೆಗಾಗಿ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಸದುಪಯೋಗಪಡಿಸಿಕೊಂಡರೆ ನಿಮ್ಮ ಜೀವನದಲ್ಲಿ ನೆಮ್ಮದಿಯಾಗಿರಬಹುದು. ಇಂತಹ ಕೆಲಸವನ್ನು ಮಾಡುತ್ತಿರುವ ಸತೀಶ್ ಜಾರಕಿಹೊಳಿಯವರಿಗೆ ಧನ್ಯವಾದಗಳು ಎಂದರು.
ಸಮಾರೋಪ ಸಮಾರಂಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಬಹುತೇಕ ವಿದ್ಯಾರ್ಥಿಗಳು ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ಆರಂಭದಲ್ಲಿ ಘಟಪ್ರಭಕ್ಕೆ ಬಂದ ಸಮಯದಲ್ಲಿ ಮೊದಲೆರೆಡು ದಿನ ನಮ್ಮ ಮನೆ ನೆನಪಾಗುತ್ತಿತ್ತು. ಆದರೆ, ಅನಂತರ ಮನೆಯನ್ನೇ ಮರೆಸುವಂತೆ ಇಲ್ಲಿನ ಬೋಧಕ, ಬೋಧಕೇತರ ಸಿಬ್ಬಂದಿ ನಮ್ಮನ್ನು ನೋಡಿಕೊಂಡರು ಎಂದರು.
ತರಬೇತಿ ಅವಧಿಯಲ್ಲಿ ಮುಂಜಾನೆ ದೈಹಿಕ ತರಬೇತಿ, ಬೆಳಗ್ಗೆ 9:30ರಿಂದ ಪೊಲೀಸ್ ಕಾನ್ಸ್ಟೇಬಲ್ ಮತ್ತು ಸೈನಿಕ ಪರೀಕ್ಷೆಯ ವಿಷಯಕ್ಕೆ ಸಂಬಂಧಿಸಿದ ತರಗತಿಗಳು, ಸಂಜೆ ನಮ್ಮ ಬದುಕನ್ನೇ ನಿಯಂತ್ರಿಸುವ ವಿಷಯಗಳು, ಮೌಢ್ಯ ವಿರೋಧಿ ಮನಃಸ್ಥಿತಿ, ವೈಚಾರಿಕತೆ ಸೇರಿದಂತೆ ಇನ್ನಿತರ ವಿಷಯಗಳನ್ನು ಅರ್ಥಪೂರ್ಣವಾಗಿ ಹೇಳಿದರು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಇನ್ನೊಬ್ಬ ಶಿಬಿರಾರ್ಥಿ, ಇಲ್ಲಿ ನಮಗೆ ನೀಡಿರುವ ಉಪಾಹಾರ, ಊಟದ ವ್ಯವಸ್ಥೆಯನ್ನು ನಾವು ನಮ್ಮ ಮನೆಗಳಲ್ಲೂ ಕಂಡಿರಲಿಲ್ಲ. ನಮ್ಮ ಮನೆಯಲ್ಲಿ ಕೂಡ ಸಿಗದಂತಹ ಅತ್ಯುತ್ತಮವಾದ ವ್ಯವಸ್ಥೆಯನ್ನು ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಕಲ್ಪಿಸಲಾಗಿದೆ. ಇಂತಹ ಕೆಲಸ ಮಾಡುತ್ತಿರುವ ಸತೀಶ್ ಜಾರಕಿಹೊಳಿಯವರಿಗೆ ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರೂ ಸಾಲದು ಎಂದರು.
ಕಾರ್ಯಕ್ರಮದಲ್ಲಿ ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, 1600 ಮೀಟರ್, 5000 ಮೀಟರ್ ಓಟದಲ್ಲಿ ಜಯಿಸಿದ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹಾಗೂ ಸೈನಿಕ ವಿಷಯದ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀತಿಯನ್ನು ಸಾಕಾರಗೊಳಿಸಿರುವ ಬಜೆಟ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ