*ಬೆಳಗಾವಿಯ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನ್ಯಕೋಮಿನ ಯುವಕ-ಯುವತಿ ಎಂದು ತಪ್ಪಾಗಿ ಭಾವಿಸಿ ಸಹೋದರ -ಸಹೋದರಿ ಮೇಲೆಯೇ ದಾಳಿ ನಡೆಸಿರುವುದು ಬಯಲಾಗಿದೆ.
ಪ್ರೇಮಿಗಳೆಂದು ತಿಳಿದು ಸಹೋದರ ಹಾಗೂ ಸಹೋದರಿ ಮೇಲೆ ಯುವಕರ ಗುಂಪು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬೆಳಗಾವಿಯ ಕೋಟೆಕೆರೆ ಆವರಣದಲ್ಲಿ ನಡೆದಿತ್ತು.
ಬೆಳಗಾವಿ ತಾಲೂಕಿನ 24 ವರ್ಷದ ಯುವತಿ, 21 ವರ್ಷದ ಯುವಕ ಯುವನಿಧಿ ಅರ್ಜಿ ಸಲ್ಲಿಸಲು ಬಂದಿದ್ದರು. ಯುವತಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದಳು. ಯುವಕ ಹಣೆಗೆ ತಿಲಕ ಹಚ್ಚಿದ್ದ. ಇವರನ್ನು ಕಂಡು ಇಬ್ಬರೂ ಹಿಂದು ಯುವಕ-ಮುಸ್ಲಿಂ ಯುವತಿ ಎಂದು ತಪ್ಪಾಗಿ ಭಾವಿಸಿ 16 ಜನರ ಗ್ಯಾಂಗ್ ಯುವಕ- ಯುವತಿಯನ್ನು ಹಿಡಿದು ಥಳಿಸಿತ್ತು.
ಇಬ್ಬರನ್ನೂ ಎಳೆದೊಯ್ದು ಸಮೀಪದಲ್ಲಿದ್ದ ಕಟ್ಟಡದ ಕೊಠಡಿಯಲ್ಲಿ ಕೂಡಿ ಹಾಕಿ 2-3 ಗಂಟೆ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಯುವತಿ ತನ್ನ ಮೊಬೈಲ್ ನಿಂದ ಕುಟುಂಬದವರಿಗೆ ಕರೆ ಮಾಡಿದ್ದಳು. ಕುಟುಂಬದವರು ಅವರಿಬ್ಬರೂ ಅಕ್ಕ-ತಮ್ಮ ಎಂದು ಹೇಳಿದರೂ ಬಿಡದ ಗ್ಯಾಂಗ್ ಮೊಬೈಲ್ ಕಸಿದುಕೊಂಡು ಸ್ವಿಚ್ಡ್ ಆಫ್ ಮಾಡಿ ಇನ್ನಷ್ಟು ಹಿಂಸೆ ನೀಡಿದ್ದರು.
ತಕ್ಷಣ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮೊಬೈಲ್ ಲೊಕೇಷನ್ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನು ರಕ್ಷಿಸಿದ್ದಾರೆ. 16 ಜನರಲ್ಲಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ, ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಯುವತಿ ತಾಯಿ ಹಿಂದೂವಾಗಿದ್ದು ಪತಿ ಮುಸ್ಲೀಂ ಆಗಿದ್ದಾರೆ ಎನ್ನಲಾಗಿದೆ. ಇಬ್ಬರು ಪ್ರೀತಿಸಿ ವಿವಾಹವಾಗಿದ್ದಾರೆ. ಯುವತಿ ತನ್ನ ಚಿಕ್ಕಮ್ಮನ ಮಗನ ಜೊತೆ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದಿದ್ದಳು. ಈ ವೇಳೆ ಯುವಕರ ಗ್ಯಾಂಗ್ ಇಬ್ಬರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಬೆಳಗಾವಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ