Kannada NewsLatest

ಮಹಾದಾನಿ ಲಿಂಗರಾಜರ ಹೆಸರು ಇತಿಹಾಸದಲ್ಲಿ ಅಮರ: ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶತಮಾನದ ದಂತಕತೆ ಮಹಾದಾನಿ ಸಿರಸಂಗಿ ಲಿಂಗರಾಜರು ಈ ನಾಡು ಕಂಡ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು. ಶಿಕ್ಷಣಕ್ಕಾಗಿ ತಮ್ಮ ಸಮಸ್ತ ಸಂಪತ್ತನ್ನು ದಾನಮಾಡಿದ ವಿರಳಾತೀ ವಿರಳರು. ಇಂಥ ಪ್ರಾತಃಸ್ಮರಣೀಯರ ಹೆಸರನ್ನು ಬೆಳಗಾವಿ ಜಿಲ್ಲಾ ಆಡಳಿತ ಹಾಗೂ ಮಹಾನಗರ ಪಾಲಿಕೆ ಕಾಲೇಜು ರಸ್ತೆಗೆ ನಾಮಕರಣ ಮಾಡಿರುವುದು ಔಚಿತ್ಯಪೂರ್ಣವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.

ಬೆಳಗಾವಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕಾಲೇಜು ರಸ್ತೆಗೆ ‘ತ್ಯಾಗವೀರ ಸಿರಸಂಗಿ ಲಿಂಗರಾಜ ಕಾಲೇಜು ರಸ್ತೆ’ ಮರುನಾಮಕರಣ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಇಂದಿನ ಯುವ ಜನತೆಗೆ ಮಹಾದಾನಿ ಲಿಂಗರಾಜರ ಜೀವನಗಾಥೆಯನ್ನು ಮನವರಿಕೆ ಮಾಡಬೇಕಾಗಿದೆ. ಈ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಚಿರಚರಾಸ್ಥಿಯನ್ನು ದಾಸೋಹ ಮಾಡಿದರು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಮೆ.ಜಾಕ್ಸನ್ ಅವರಿಗೆ ಮೃತ್ಯುಪತ್ರವನ್ನು ನೀಡುವ ಮೂಲಕ ಸಮಾಜದಲ್ಲಿ ಹೊಸ ಇತಿಹಾಸವನ್ನು ರಚಿಸಿದರು. ಅವರು ಅಂದು ಸ್ಥಾಪಿಸಿ ಸಿರಸಂಗಿ ನವಲಗುಂದ ಟ್ರಸ್ಟ್ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು ನೀಡಿತು. ಲಿಂಗರಾಜರ ಶಿಷ್ಯವೇತನದಿಂದ ಸಮಾಜದಲ್ಲಿ ಮಹಾನ್‌ ವ್ಯಕ್ತಿಗಳಾಗಿ ಹೊರಹೊಮ್ಮಿದರು. ಅಂತೆಯೆ ಸಮಸ್ತ ನಾಡು ಅವರ ದಾನವನ್ನು ಇಂದಿಗೂ ಸ್ಮರಿಸುತ್ತಿದೆ. ಲಿಂಗರಾಜರ ಹೆಸರನ್ನು ಕಾಲೇಜು ರಸ್ತೆಗೆ ಇಡಬೇಕೆಂಬುದು ಬೆಳಗಾವಿ ಜನತೆಯ ಬಹುದಿನಗಳ ಕನಸಾಗಿತ್ತು. ಜನರೂಢಿಯಲ್ಲಿ ಪದಬಳಕೆ ಇದ್ದರೂ ಆಡಳಿತಾತ್ಮಕವಾಗಿ, ಕಚೇರಿಯ ಕಾಗದ ಪತ್ರವ್ಯವಹಾರಗಳಲ್ಲಿ ಕಾಲೇಜು ರಸ್ತೆ ಎಂದು ಮಾತ್ರ ಬಳಕೆಯಲ್ಲಿತ್ತು. ಈಗ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧೀಕೃತವಾಗಿ ಲಿಂಗರಾಜ ಹೆಸರನ್ನು ನಾಮಕರಣ ಮಾಡಿರುವುದು ಸಂತೋಷ ಹಾಗೂ ಹೆಮ್ಮೆಯನ್ನು ತಂದಿದೆ ಎಂದು ಹೇಳಿದರು.

ಲಿಂಗರಾಜ ಕಾಲೇಜು ರಸ್ತೆಯ ಫಲಕವನ್ನು ಅನಾವರಣಗೊಳಿಸಿದ ಸಂಸದೆ ಶ್ರೀಮತಿ ಮಂಗಲಾ ಸುರೇಶ ಅಂಗಡಿಯವರು ಮಾತನಾಡಿ ತ್ಯಾಗವೀರ ಸಿರಸಂಗಿ ಲಿಂಗರಾಜರ ಹೆಸರು ಅಧೀಕೃತವಾಗಿ ನಾಮಕರಣಗೊಂಡಿರುವುದು ಲಿಂಗರಾಜರಿಗೆ ನಾವು ಸಲ್ಲಿಸುತ್ತಿರುವ ಗೌರವದ ಪ್ರತೀಕವಾಗಿದೆ. ಅವರ ಆದರ್ಶ ನಡೆ ನಮ್ಮ ಪಥವಾಗಲಿ, ಡಾ.ಕೋರೆಯವರ ಪರಿಶ್ರಮದ ಫಲವಾಗಿ ಕಾಲೇಜು ರಸ್ತೆಗೆ ಒಬ್ಬ ಮಹಾನ್ ದಾನಿಯ ಹೆಸರು ನಾಮಕರಣಗೊಂಡಿರುವುದು ಅಭಿಮಾನದ ಸಂಗತಿ ಎಂದರು.

ಶಾಸಕರಾದ ಅನಿಲ ಬೆನಕೆಯವರು ಮಾತನಾಡಿ ಲಿಂಗರಾಜರಂಥ ಮಹಾದಾನಿಗಳು ಇತಿಹಾಸದ ಪುಟಗಳಲ್ಲಿ ಅಮರರಾಗಿ ಉಳಿದಿದ್ದಾರೆ. ಇಂತಹ ಪುಣ್ಯಪುರುಷರು ಯುಗಕ್ಕೆ ಒಬ್ಬರು. ಅವರ ಹೆಸರಿನ ನಾಮಕರಣ ಸಮಾಜಕ್ಕೆ ಒಂದು ಸಂದೇಶವನ್ನು ನೀಡಿದೆ. ಬೆಳಗಾವಿಯ ಪ್ರತಿಷ್ಠಿತ ರಸ್ತೆಗೆ ಲಿಂಗರಾಜರ ಹೆಸರು ನಾಮಕರಣಗೊಂಡಿರುವುದು ಸಂದರ್ಭೋಚಿತವೆಂದರು.

ಜಿಲ್ಲಾಧಿಕಾರಿಗಳಾದ ಡಾ.ಎಂ.ಜಿ.ಹಿರೇಮಠ ಅವರು ಮಾತನಾಡಿ ಲಿಂಗರಾಜರ ಹೆಸರು ನಮ್ಮ ನಾಡಿನಲ್ಲಿ ಚಿರಸ್ಥಾಯಿಯಾಗಿದೆ. ಅವರ ಹೆಸರನ್ನು ಅಧೀಕೃತವಾಗಿ ನಾಮಕರಣಗೊಳಿಸಬೇಕೆಂದು ಡಾ.ಪ್ರಭಾಕರ ಕೋರೆಯವರು ಪತ್ರ ಬರೆದು ಮೌಖಿಕವಾಗಿ ತಿಳಿಸಿದಾಗ, ಸರ್ಕಾರದ ನಿಯಮದಂತೆ ಸಾರ್ವಜನಿಕರು ಬೆಂಬಲಿಸಿದರು. ಅಂತಹ ಮಹಾದಾನಿ ನಮ್ಮ ಯುವಜನತೆಗೆ ಆದರ್ಶದ ದೀಪವಾಗಿದ್ದಾರೆ, ಅವರು ಸ್ಥಾಪಿಸಿದ ನವಲಗುಂದ ಎಜ್ಯುಕೇಶನ್ ಟ್ರಸ್ಟ್ ನಲ್ಲಿ 13 ಕೋಟಿ ರೂ.ಗಳಿದ್ದು ಇಂದಿಗೂ ವಿದ್ಯಾರ್ಥಿಗಳಿಗೆ ಕ್ರಮವಾಗಿ ಶಿಷ್ಯವೇತನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ, ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಗಾಳಿಯವರು, ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಬಿ.ಜಿ.ದೇಸಾಯಿ, ಆಜೀವ ಸದಸ್ಯರು, ಸಿಬ್ಬಂದಿವರ್ಗದವರು ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಿಎಂ ಪರಿಹಾರ ನಿಧಿಯಿಂದ 7.15 ಲಕ್ಷ ರೂ. ಮಂಜೂರು ಮಾಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button