*ಮೇ 8 ರಿಂದ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದ ರಜತೋತ್ಸವ ಸಮಾರಂಭ*

ಪ್ರಗತಿವಾಹಿನಿ ಸುದ್ದಿ: ಸ್ವಾಮಿ ವಿವೇಕಾನಂದರ ಪಾದಸ್ಪರ್ಶದಿಂದ ಪುನೀತವಾದ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮವು, ಜನಕಲ್ಯಾಣ ಹಾಗೂ ಆಧ್ಯಾತ್ಮಿಕ ಸೇವೆಯಲ್ಲಿ ೨೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸ್ವಾಮಿ ವಿವೇಕಾನಂದರು ಒಬ್ಬ ಪರಿವ್ರಾಜಕ ಸನ್ಯಾಸಿಯಾಗಿ ಭಾರತವನ್ನು ಪರ್ಯಟನೆ ಮಾಡುತ್ತ ೧೮೯೨ರ ಅಕ್ಟೋಬರ್ ೧೬ರಂದು ಬೆಳಗಾವಿಗೆ ಆಗಮಿಸಿ, ಅಕ್ಟೋಬರ್ ೨೭ರವರೆಗೆ ಒಟ್ಟು ಹನ್ನೆರಡು ದಿನಗಳ ಕಾಲ ಇಲ್ಲಿ ನೆಲೆಸಿ ಈ ನಾಡನ್ನು ಪಾವನಗೊಳಿಸಿದರು. ಅವರು ತಮ್ಮ ಭೇಟಿಯ ಮೊದಲ ಮೂರು ದಿನಗಳ ಕಾಲ ಶ್ರೀಯುತ ಸದಾಶಿವ ಬಾಲಕೃಷ್ಣ ಭಾಟೆಯವರ ಮನೆಯಲ್ಲಿ ತಂಗಿದ್ದರು. ಇಂದು ಈ ಮನೆಯು ‘ಸ್ವಾಮಿ ವಿವೇಕಾನಂದ ಸ್ಮಾರಕ’ ಎಂಬ ಐತಿಹಾಸಿಕ ಸ್ಥಳವಾಗಿ ನಿರ್ಮಾಣಗೊಂಡಿದ್ದು, ಇಲ್ಲಿ ಸ್ವಾಮೀಜಿಯವರು ಉಪಯೋಗಿಸಿದ ಮಂಚ, ಕೋಲು ಮತ್ತು ಕನ್ನಡಿಯನ್ನು ಸಂರಕ್ಷಿಸಿಡಲಾಗಿದೆ. ಸ್ವಾಮಿ ವಿವೇಕಾನಂದರ ಕುರಿತಾದ ವಿಶೇಷ ಚಿತ್ರಕಲಾ ಪ್ರದರ್ಶನದ ವ್ಯವಸ್ಥೆ ಇದೆ. ತದನಂತರ, ಸ್ವಾಮೀಜಿಯವರು ಅಂದಿನ ಅರಣ್ಯಾಧಿಕಾರಿಗಳಾದ ಶ್ರೀಯುತ ಹರಿಪದ ಮಿತ್ರ ಅವರ ವಿನಂತಿಯ ಮೇರೆಗೆ ಬೆಳಗಾವಿಯ ಕಿಲ್ಲಾದಲ್ಲಿರುವ (ಕೋಟೆ) ಅವರ ಮನೆಯಲ್ಲಿ ಮುಂದಿನ ಒಂಬತ್ತು ದಿನಗಳ ಕಾಲ ತಂಗಿದ್ದರು.
ಸ್ವಾಮೀಜಿಯವರು ತಂಗಿದ್ದ ಇದೇ ಮನೆಯನ್ನು ೨೦೦೦ದ ಜೂನ್ ತಿಂಗಳಲ್ಲಿ ಕರ್ನಾಟಕ ಸರಕಾರವು ‘ರಾಮಕೃಷ್ಣ ಮಿಷನ್’ಗೆ ಹಸ್ತಾಂತರಿಸಿತು. ಆ ಬಳಿಕ ಪರಮಪೂಜ್ಯ ಸ್ವಾಮಿ ಪುರುಷೋತ್ತಮಾನಂದಜಿ ಮಹಾರಾಜ್ ಅವರ ಸಮರ್ಥ ನೇತೃತ್ವದಲ್ಲಿ ೨೦೦೪ರ ಜನವರಿ ೨೩ರಂದು ಇಲ್ಲಿ ಶ್ರೀರಾಮಕೃಷ್ಣ ಪರಮಹಂಸರ ‘ವಿಶ್ವಭಾವೈಕ್ಯ ಮಂದಿರ’ ಉದ್ಘಾಟನೆಗೊಂಡಿತು.
ಈ ಐತಿಹಾಸಿಕ ಸ್ಥಳದಲ್ಲಿ ಸ್ವಾಮೀಜಿಯವರು ಬೆಳಗಾವಿಗೆ ಭೇಟಿ ನೀಡಿದಾಗ ತೆಗೆದ ಭಾವಚಿತ್ರಕ್ಕೆ ಅನುಗುಣವಾಗಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮುಂದೆ ೨೦೧೧ರಲ್ಲಿ ಪೂಜ್ಯ ಸ್ವಾಮಿ ರಾಘವೇಶಾನಂದಜಿ ಮಹಾರಾಜ್ ಅವರ ನೇತೃತ್ವದಲ್ಲಿ ಸಮ್ಮೇಳನಗಳು ಮತ್ತು ಮೌಲ್ಯಾಧಾರಿತ ಕಾರ್ಯಕ್ರಮಗಳನ್ನು ನಡೆಸಲು ಮೂರು ಮಹಡಿಗಳ ಕಟ್ಟಡ ಹಾಗೂ ಸಭಾಂಗಣವನ್ನು ಉದ್ಘಾಟಿಸಲಾಯಿತು. ಇಂತಹ ಪವಿತ್ರ ತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶ್ರಮವು ಸತತ ಕಾಲು ಶತಮಾನಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಉಚಿತ ನೇತ್ರ ಚಿಕಿತ್ಸಾಲಯ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ, ಬಾಲಕ-ಬಾಲಿಕಾ ಮತ್ತು ಯುವಕ ಸಂಘಗಳ ಮೂಲಕ ಯುವಜನತೆಯಲ್ಲಿ ವ್ಯಕ್ತಿತ್ವ ವಿಕಸನ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಹಾಗೂ ನಿರ್ಗತಿಕ ಕುಟುಂಬಗಳಿಗೆ ಸಹಾಯ ಮಾಡುವಂತಹ ಹತ್ತು-ಹಲವು ಸೇವಾಕಾರ್ಯಗಳನ್ನು ಆಶ್ರಮವು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ಈ ಸುದೀರ್ಘ ೨೫ ವರ್ಷಗಳ ಅರ್ಥಪೂರ್ಣ ಸೇವೆಯ ಸ್ಮರಣಾರ್ಥವಾಗಿ, ಬೆಳಗಾವಿ ಕೋಟೆ ಆವರಣದಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ೨೦೨೬ರ ಮೇ ೮, ೯ ಮತ್ತು ೧೦ ರಂದು ರಜತೋತ್ಸವದ ಸಮಾರೋಪ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ.

ಈ ಮೂರು ದಿನಗಳ ಕಾಲ ನಡೆಯುವ ಸಂಭ್ರಮಾಚರಣೆಯಲ್ಲಿ ಕಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಠ ಮತ್ತು ಮಿಷನ್ನ ಉಪಾಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅವರು ಉಪಸ್ಥಿತರಿದ್ದು, ತಮ್ಮ ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನವನ್ನು ದಯಪಾಲಿಸಲಿದ್ದಾರೆ. ಭಗವನ್ನಾಮ ಸಂಕೀರ್ತನೆ, ಶ್ರೀರಾಮಕೃಷ್ಣ ಹೋಮ, ವಿಶೇಷ ಆಧ್ಯಾತ್ಮಿಕ ಉಪನ್ಯಾಸಗಳು, ಕಿರು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿ ದಿನ ಸಂಜೆ ಸುಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮದ ಮೊದಲ ದಿನವಾದ ಮೇ ೮ ಶುಕ್ರವಾರದಂದು ‘ಶ್ರೀರಾಮಕೃಷ್ಣ ಮನನಂ’ ಎಂಬ ವಿಷಯದ ಮೇಲೆ ಭವ್ಯ ಕಾರ್ಯಕ್ರಮಗಳು ನಡೆಯಲಿವೆ. ಬೆಳಗಿನ ಅವಧಿಯಲ್ಲಿ ನಾಡಿನ ಹಿರಿಯ ಸ್ವಾಮೀಜಿಗಳಿಂದ ಶ್ರೀರಾಮಕೃಷ್ಣರ ಅವತಾರದ ವೈಶಿಷ್ಟ್ಯಗಳ ಕುರಿತು ಉಪನ್ಯಾಸಗಳಿರಲಿವೆ. ಮಧ್ಯಾಹ್ನ ಡಾ. ಎಸ್. ಪಿ. ಗುರುದಾಸ್ ಅವರಿಂದ ಭಗವಾನ್ ಶ್ರೀರಾಮಕೃಷ್ಣರ ಕುರಿತು ‘ಹರಿಕಥೆ’ ಹಾಗೂ ಆನಂತರ ‘ಶ್ರೀರಾಮಕೃಷ್ಣ ಮತ್ತು ಅವರ ಭಕ್ತರು’ ಎಂಬ ವಿಷಯದ ಮೇಲೆ ಪ್ರವಚನಗಳಿರುತ್ತವೆ. ಸಂಜೆ ೬:೪೫ಕ್ಕೆ ಖ್ಯಾತ ಗಾಯಕಿ ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ‘ಶರಣ-ದಾಸ-ವಾಣಿ’ ಎಂಬ ವಿಶೇಷ ಸಂಗೀತ ಸುಧೆ ಹರಿಯಲಿದೆ.
ಮೇ ೯ ಶನಿವಾರದಂದು ಎರಡನೇ ದಿನದ ಕಾರ್ಯಕ್ರಮಗಳು ‘ಶ್ರೀ ಶಾರದಾದೇವಿ ಮನನಂ’ ಎಂಬ ಶೀರ್ಷಿಕೆಯಡಿ ಜರುಗಲಿವೆ. ಬೆಳಿಗ್ಗೆ ಶಾರದಾಮಾತೆಯವರ ವಿಶಿಷ್ಟತೆಯ ಕುರಿತು ಹಿರಿಯ ಸನ್ಯಾಸಿಗಳಿಂದ ಉಪನ್ಯಾಸಗಳು ಹಾಗೂ ಪರಮಪೂಜ್ಯ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅವರಿಂದ ಆಶೀರ್ವಚನ ಇರಲಿದೆ. ಮಧ್ಯಾಹ್ನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ನಿನಾದ್ ಅಶೋಕ್ ಹಾಗೂ ನೃತ್ಯ ಅಲಂಕಾರ ರೋಹಿತ್ ಮಾನೆ ಅವರಿಂದ ‘ಶಿವನೃತ್ಯಾರ್ಪಣಮ್’ ಪ್ರಸ್ತುತಗೊಳ್ಳಲಿದ್ದು, ತದನಂತರ ‘ನನ್ನ ತಾಯಿ, ಶ್ರೀ ಶಾರದಾದೇವಿ’ ಎಂಬ ವಿಷಯದ ಮೇಲೆ ಪ್ರವಚನಗಳು ನಡೆಯಲಿವೆ. ಸಂಜೆಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಪಂಡಿತ್ ರಘುನಂದನ್ ಪಣಸೀಕರ್ ಅವರಿಂದ ‘ಭಜನಸಂಧ್ಯಾ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಮಾರೋಪದ ಕಡೆಯ ದಿನವಾದ ಮೇ ೧೦ ಭಾನುವಾರದಂದು ಬೆಳಿಗ್ಗೆ ಭಜನೆ, ಶ್ರೀರಾಮಕೃಷ್ಣ ಹೋಮ ಹಾಗೂ ವೇದಘೋಷಗಳು ನಡೆಯಲಿವೆ. ಆನಂತರ ಜರುಗುವ ‘ಸಾರ್ವಜನಿಕ ಸಭೆ’ಯಲ್ಲಿ ಹಿರಿಯ ಸ್ವಾಮೀಜಿಗಳು ಸ್ವಾಮಿ ವಿವೇಕಾನಂದರ ಸಂದೇಶಗಳ ಕುರಿತು ಮಾತನಾಡಲಿದ್ದು, ಪರಮಪೂಜ್ಯ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅವರು ಆಶೀರ್ವಚನ ನೀಡಲಿದ್ದಾರೆ. ಮಧ್ಯಾಹ್ನ ಡಾ. ದತ್ತಾತ್ರೇಯ ಎಲ್. ವೇಲಂಕರ್ ಮತ್ತು ಡಾ. ಎಚ್. ಎನ್. ಮುರಳೀಧರ ಅವರಿಂದ ‘ವಿವೇಕ-ಗಾನ-ಚಿಂತನ’ ಎಂಬ ವಿವೇಕಾನಂದರ ಕವನಗಳನ್ನು ಆಧರಿಸಿದ ಗಾಯನ ಕಾರ್ಯಕ್ರಮ, ತದನಂತರ ವಿವೇಕಾನಂದರ ಮಾರ್ಗದರ್ಶನದ ಕುರಿತು ಉಪನ್ಯಾಸಗಳಿರಲಿವೆ. ಅಂತಿಮವಾಗಿ ಸಂಜೆ ೬:೪೫ಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ಪಂಡಿತ್ ಪೂರ್ಬಯಾನ್ ಚಟರ್ಜಿ ಅವರಿಂದ ಆಕರ್ಷಕ ‘ಸಿತಾರ್ ವಾದನ’ ಜರುಗಲಿದೆ.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳಿಗೆ ನೋಂದಣಿ ಆಧಾರದ ಮೇಲೆ ವಸತಿ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಜ್ಞಾನ ಮತ್ತು ಭಕ್ತಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಆಶ್ರಮದ ಕಾರ್ಯದರ್ಶಿಗಳಾದ ಸ್ವಾಮಿ ಆತ್ಮಪ್ರಾಣಾನಂದ ಅವರು ಹೃತೂರ್ವಕವಾಗಿ ಆಹ್ವಾನಿಸಿದ್ದಾರೆ.




