Kannada NewsNationalPolitics

*ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್*

ಪ್ರಗತಿವಾಹಿನಿ ಸುದ್ದಿ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಅವರು ಶೀಘ್ರದಲ್ಲೇ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ದೆಹಲಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಸಭೆಯ ಅಧ್ಯಕ್ಷರಾದ ಸಿ.ಪಿ. ರಾಧಾಕೃಷ್ಣನ್ ಅವರು ನಿತೀಶ್ ಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. 

ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಹಾರದ ಉಪಮುಖ್ಯಮಂತ್ರಿಗಳಾದ ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಯಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜೆಡಿಯು ಪಕ್ಷದ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಈ ಸಂದರ್ಭದಲ್ಲಿ ಕಂಡುಬಂದರು.

Home add -Advt

ತಮ್ಮ ಮುಂದಿನ ನಡೆಯ ಬಗ್ಗೆ ಈಗಾಗಲೇ ಸುಳಿವು ನೀಡಿದ್ದ ನಿತೀಶ್ ಕುಮಾರ್, ಬಿಹಾರದ ಅಭಿವೃದ್ಧಿಗಾಗಿ ತಾವು ಸಾಕಷ್ಟು ಕೆಲಸ ಮಾಡಿದ್ದು ಇನ್ನು ಮುಂದೆ ಕೇಂದ್ರ ರಾಜಕಾರಣದಲ್ಲಿ ಸಕ್ರಿಯರಾಗಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ. ನಾನು ಬಿಹಾರದಲ್ಲಿ ಮಾಡಬೇಕಾದ ಕೆಲಸಗಳನ್ನು ಪೂರ್ಣಗೊಳಿಸಿದ್ದೇನೆ, ಈಗ ದೆಹಲಿಯಲ್ಲಿದ್ದು ಕೆಲಸ ಮಾಡಬೇಕೆಂದು ಅನ್ನಿಸುತ್ತಿದೆ. ಇನ್ನೊಂದು ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಅವರು ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಿತೀಶ್ ಕುಮಾರ್ ಅವರ ಈ ನಿರ್ಧಾರದಿಂದ ಬಿಹಾರಕ್ಕೆ ಹೊಸ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಎನ್‌ಡಿಎ ಮೈತ್ರಿಕೂಟವು ಏಪ್ರಿಲ್ 14 ರಂದು ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬಿಹಾರದ ಸುದೀರ್ಘ ಕಾಲದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಿತೀಶ್ ಕುಮಾರ್, 1985 ರಿಂದ ಶಾಸಕರಾಗಿ, ಕೇಂದ್ರ ಸಚಿವರಾಗಿ ಮತ್ತು ನಂತರ ಮುಖ್ಯಮಂತ್ರಿಯಾಗಿ ರಾಜ್ಯದ ರಾಜಕಾರಣದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಈಗ ಅವರು ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿರುವುದು ಕುತೂಹಲ ಮೂಡಿಸಿದೆ.

Related Articles

Back to top button