Kannada NewsKarnataka NewsLatest
*ಡ್ರಂಕ್ ಆಂಡ್ ಡ್ರೈವ್ ತಪಾಸಣೆ ವೇಳೆ ತನ್ನದೇ ಬೈಕ್ ಗೆ ಬೆಂಕಿ ಹಚ್ಚಿ ಎಸ್ಕೇಪ್ ಆದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷದ ಸಂಭ್ರರಮಾಚರಣೆ ವೇಳೆ ಕಂಠಪೂರ್ತಿ ಕುಡಿದು ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದಿದ್ದಕ್ಕೆ ಪೊಲೀಸರ ಎದುರೇ ಗಲಾಟೆ ಮಾಡಿ, ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕವಿಕಾ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ತಡರಾತ್ರಿ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ಪೊಲೀಸರ ಜೊತೆ ಬೈಕ್ ಸವಾರನೊಬ್ಬ ಕಿರಿಕ್ ಮಾಡಿದ್ದಲ್ಲದೇ, ಬ್ರೀತ್ ಅನಲೈಸರ್ ಪರೀಕ್ಷೆಗೆ ನಿರಾಕರಿಸಿದ್ದಾನೆ. ಪೊಲೀಸರಿಗೆ ಬೆದರಿಕೆ ಹಾಕಿ ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ನಿಮ್ಮ ಬಳಿ ಕುಡಿದು ಸಿಕ್ಕಿ ಹಾಕಿಕೊಳ್ಳುವುದಕ್ಕಿಂತ ಬೈಕ್ ಗೆ ಬೆಂಕಿ ಹಚ್ಚುವುದೇ ಲೇಸು ಎಂದು ಕುಡಿದ ಮತ್ತಿನಲ್ಲಿ ಬೈಕ್ ಗೆ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ. ಬೈಕ್ ಸವಾರನನ್ನು ಬಿಟಿಎಂ ಲೇಔಟ್ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಸದ್ಯ ಬೈಕ್ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

