ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ರಾಜ್ಯದಲ್ಲಿ ಮುಕ್ತಾಯವಾಗಿದ್ದು, 2ನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಲಂಚ, ಕರ್ತವ್ಯಕ್ಕೆ ಅಡ್ಡಿ, ಹಸ್ತಕ್ಷೇಪ ಹಿನ್ನೆಲೆಯಲ್ಲಿ ಡಾ.ಕೆ.ಸುಧಾಕರ್ ವಿರುದ್ಧ ಎಸ್.ಎಸ್. ಟಿ ಅಧಿಕಾರಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ನಡೆದಿದ್ದ ಐಟಿ ದಾಳಿ ವೇಳೆ ಡಾ.ಕೆ.ಸುಧಾಕರ್ ಆಪ್ತ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾದಾವರ ಗೋವಿಂದಪ್ಪ ನಿವಾಸದ ಮೇಲೆಯೂ ದಾಳಿ ನಡೆದಿತ್ತು. ಈ ವೇಳೆ 4.82 ಕೋಟಿ ಹಣ ಸಿಕ್ಕಿತ್ತು. ಈ ವೇಳೆ ಡಾ. ಕೆ.ಸುಧಾಕರ್, ಬೆಂಗಳೂರು ಉತ್ತರ ತಾಲೂಕಿನ ಚುನಾವಣಾ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಕರೆ ಮಾಡಿ ಗೋವಿಂದಪ್ಪ ಅವರಿಗೆ ಸಹಾಯ ಮಾಡಿ, ಹಣ ಬಿಟ್ಟುಬಿಡಿ ಎಂದು ಹೇಳಿದ್ದರು. ಅಲ್ಲದೇ ಗೋವಿಂದಪ್ಪ ಕೂಡ ಮುನೀಶ್ ಮೌದ್ಗಿಲ್ ಗೆ ವಾಟ್ಸಾಪ್ ಸಂದೇಶ ರವಾನಿಸಿ ತಮಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ವಿಚಾರವನ್ನು ಸಾಕ್ಷಿ ಸಮೇತ ಮುನೀಶ್ ಮೌದ್ಗಿಲ್ ಆದಾಯ ತೆರಿಗೆ ಇಲಾಖೆ ನೀಡಿದ್ದರು.
ಇದೀಗ ಎಸ್.ಎಸ್ ಟಿ ತಂಡದ ಮುಖ್ಯಸ್ಥ ದಶರಥ ಮಾದನಾಯಕನಹಳ್ಳಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಡಾ.ಕೆ.ಸುಧಾಕರ್ ವಿರುದ್ಧ ಪ್ರಭಾವ, ಲಂಚ, ಭ್ರಷ್ಟಾಚಾರ ಪ್ರಯತ್ನ, ಕರ್ತವ್ಯಕ್ಕೆ ಅಡ್ಡಿ ಹಾಗೂ ಹಸ್ತಕ್ಷೇಪ ಮಾಡಿದ್ದಾಗಿ ಆರ್ ಪಿ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ