Cancer Hospital 2
Beereshwara 36
LaxmiTai 5

*ಹೋಮ್ ಮಿನಿಸ್ಟರ್ ಯಾರು ಅನ್ನೋದೇ ಗೊತ್ತಾಗ್ತಾ ಇಲ್ಲ ಎಂದ ಆರ್. ಅಶೋಕ್*

Anvekar 3
GIT add 2024-1

ವಿಧಾನ ಪರಿಷತ್ ಚುನಾವಣೆಯಲ್ಲೂ ಹಣ, ಗಿಫ್ಟ್ ಹಂಚುತ್ತಿದೆ ಕಾಂಗ್ರೆಸ್: ಹೆಚ್.ಡಿ.ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮಾಡಿದಂತೆ ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷ ಹಣ, ಗಿಫ್ಟ್ ಗಳನ್ನು ಹಂಚಿ ಗೆಲುವು ಸಾಧಿಸಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಭಾನುವಾರ ನಡೆದ ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಕುರಿತ ಜೆಡಿಎಸ್ -ಬಿಜೆಪಿ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಅವರು ಮತನಾಡಿದರು.

ಶಿಕ್ಷಕರು, ಪದವೀಧರರು ಮತ ಹಾಕುವ ಈ ಚುನಾವಣೆಯನ್ನು ಕಾಂಗ್ರೆಸ್ ಕಲುಷಿತಗೊಳಿಸುತ್ತಿದೆ. ಹಣ, ಗಿಫ್ಟ್, ಕೂಪನ್ ಹಂಚುವ ಕೆಲಸವನ್ನು ಯಥೇಚ್ಛವಾಗಿ ಮಾಡುತ್ತಿದೆ. ಈಗಾಗಲೇ ಅಧಿಕಾರಿಗಳು ಅನೇಕ ಕಡೆ ದಾಳಿ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಹಂಚುತ್ತಿದ್ದ ಗಿಫ್ಟ್ ಬಾಕ್ಸ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಹಣದ ಆಮಿಷ ಒಡ್ಡಿ ಮತ ಪಡೆಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ವಿದ್ಯಾವಂತರಾದ ಪದವೀಧರರು ತಕ್ಕ ಪಾಠ ಕಲಿಸಬೇಕು. ಎರಡೂ ಪಕ್ಷಗಳ ಕಾರ್ಯಕರ್ತರು ಈ ಷಡ್ಯಂತ್ರಕನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಎರಡು ಪಕ್ಷದ ಕಾರ್ಯಕರ್ತರು ಒಟ್ಟಾಗಿ ಎದುರಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಕರೆ ನೀಡಿದರು.

ಜೆಡಿಎಸ್ -ಬಿಜೆಪಿ ಮೈತ್ರಿ ಐತಿಹಾಸಿಕ. ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೆಗೌಡರ ನೇತೃತ್ವದಲ್ಲಿ ಆಗಿರುವ ಈ ಮೈತ್ರಿಯನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಮುಕ್ತವಾಗಿ ಸ್ವಾಗತಿಸಿದ್ದಾರೆ. ಈ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ಗೆ ಆಗುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು

ಬೆಂಗಳೂರು ಜನರು ಗಮನಿಸಬೇಕು. ಈ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವ ಬಗ್ಗೆ ನಿಗಾ ಇಡಬೇಕು. ಹೋದ ವರ್ಷವೂ ಮಳೆ ಬಂತು, ಮನೆಗಳಿಗೆ ನೀರು ನುಗ್ಗಿತು. ಈ ವರ್ಷವೂ ಮಳೆ ಬಂತು. ಮನೆಗಳಿಗೆ ನೀರು ನುಗ್ಗಿದೆ. ಜನರು ಮನೆ ಖಾಲಿ ಮಾಡಿ ಹೋಟೆಲ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೊನ್ನೆ ಯಾವತ್ತೊ ಬಿಡಿಎ ಕಚೇರಿಯಲ್ಲಿ ಕ್ಲೋಸ್ಡ್ ಡೋರ್ ಮೀಟಿಂಗ್ ಮಾಡಿದ್ದಾರೆ. ಏನಕ್ಕೆ ಆ ಸಭೆ? ಲೂಟಿ ಹೊಡೆಯೋದಕ್ಕಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಬೆಂಗಳೂರು ನಗರದ ಅಭಿವೃದ್ಧಿ ಹಿಮ್ಮುಖವಾಗಿ ಚಲಿಸುತ್ತಿದೆ. ಕಳೆದ ಒಂದು ವರ್ಷದಿಂದ ಒಂದೇ ಒಂದು ಕಾಮಗಾರಿ ಬೆಂಗಳೂರಿನಲ್ಲಿ ಆಗಿಲ್ಲ. ಅಭಿವೃದ್ಧಿ ಕೆಲಸ ನಿಂತು ಹೋಗಿದೆ. ಗ್ಯಾರಂಟಿಗಳ ಮಾತ್ರ ಕಡೆ ಗಮನ ಕೊಟ್ಟು ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದರು.

ಅನ್ನಭಾಗ್ಯ ಅಕ್ಕಿ ಹಣ ಕೊಟ್ಟಿಲ್ಲ

ಗ್ಯಾರಂಟಿಗಳಿಂದ ಜನರನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳುತ್ತಿರುವ ಈ ಸರಕಾರಕ್ಕೆ ಅನ್ನಭಾಗ್ಯದ 175 ರೂಪಾಯಿ ಹಣ ಕೊಡುವ ಯೋಗ್ಯತೆ ಇಲ್ಲ. ಎರಡು ಮೂರು ತಿಂಗಳಿಂದ ಇವರಿಂದ ಹಣ ಕೊಡಲು ಆಗಿಲ್ಲ, ಯಾವ ಕುಟುಂಬಕ್ಕೂ ಹಣ ಕೊಟ್ಟಿಲ್ಲ, ಹಾಲು ಉತ್ಪಾದಕರ ಸಹಾಯಧನ ಕೊಟ್ಟಿಲ್ಲ, ಮಳೆ ಬರುತ್ತಿದೆ, ಬಿತ್ತನೆ ಬೀಜ ದುಬಾರಿ ಆಗಿದೆ. ಬಿತ್ತನೆ ಬೀಜದ ಬೆಲೆ 75% ಏರಿಸಿದ್ದಾರೆ. ಹಳೆಯ ಪಿಂಚಣಿ ಯೋಜನೆಯ ಬಗ್ಗೆ ಇವರು ಸುಳ್ಳು ಹೇಳುತ್ತಿದ್ದಾರೆ. ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಸರಕಾರ ಎಂದು ಕಾಂಗ್ರೆಸ್ ಮೇಲೆ ಟೀಕಾ ಪ್ರಹಾರ ನಡೆಸಿದರು ಅವರು.

Emergency Service

ರಾಜ್ಯದಲ್ಲಿ 2.75 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಖಾಲಿ ಇರುವ 30 ಲಕ್ಷ ಸರಕಾರಿ ಹುದ್ದೆ ತುಂಬುತ್ತಾರಂತೆ! ಮೊದಲು ಕರ್ನಾಟಕದಲ್ಲಿ ಭರ್ತಿ ಮಾಡಿ, ಆಮೇಲೆ ದೇಶದ ಕಥೆ ನೋಡೋಣ ಎಂದು ತಿರುಗೇಟು ಕೊಟ್ಟರು ಕುಮಾರಸ್ವಾಮಿ.

ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ; ಪರಿಷತ್ ಗೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು. ರಾಜ್ಯಕ್ಕೆ ಸಂದೇಶ ಕೊಡಬೇಕು. ಮೈತ್ರಿಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

ನಿರುದ್ಯೋಗಿ ಯುವಕರಿಗೆ ಮಾಸಕ ಮೂರು ಸಾವಿರ ರೂಪಾಯಿ ಕೊಡುವ ಯುವನಿಧಿ ಯೋಜನೆಗೆ ಕೂಡ ಷರತ್ತುಗಳನ್ನು ಹಾಕಿದ್ದಾರೆ. ಮೊದಲು ಎಲ್ಲರಿಗೂ ಹಣ ಕೊಡುತ್ತೇವೆ ಎಂದವರು ಈಗ 2022-2 3ನೇ ಸಾಲಿನಲ್ಲಿ ಪಾಸಾದವರಿಗೆ ಮಾತ್ರ ಎನ್ನುತ್ತಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.

ಹೋಮ್ ಮಿನಿಸ್ಟರ್ ಯಾರು ಅನ್ನೋದೇ ಗೊತ್ತಾಗ್ತಾ ಇಲ್ಲ: ಅಶೋಕ್:

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಎಷ್ಟು ಹದಗೆಟ್ಟು ಹೋಗಿದೆ ಎಂದರೆ, ಹೋಮ್ ಮಿನಿಸ್ಟರ್ ಯಾರು ಅನ್ನೋದೇ ಗೊತ್ತಾಗ್ತಾ ಇಲ್ಲ. ಹೆಣ್ಣು ಮಕ್ಕಳು ಶಾಲೆಗೆ ಹೋದರೆ, ಮಹಿಳೆಯರು ಕೆಲಸಕ್ಕೆ ಹೋದರೆ ಮನೆಗೆ ವಾಪಸ್ ಬರುವ ಗ್ಯಾರಂಟಿಯೇ ಇಲ್ಲ ಎಂದು ಪ್ರತಿಪಕ್ಷ ನಾಯಕರಾದ ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವರಾಮೇಗೌಡ ಎನ್ನುವ ವ್ಯಕ್ತಿ ಹೇಳುತ್ತಾನೆ.. ಮೋದಿಗೆ ಹೇಳಿ ಜೆಡಿಎಸ್ -ಬಿಜೆಪಿ ಭಾಗ ಮಾಡಿಬಿಟ್ಟರೆ ನಮಗೆ ಒಳ್ಳೆಯದು. ಇವರೆಂಥಾ ಚಂಡಾಳರು ಎನ್ನುವುದು ಇದರಿಂದ ಗೊತ್ತಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆವರೆಗೂ ಇವರು ಒಂದಾಗಿದ್ದರೆ ನಮಗೆ ಉಳಿಗಾಲ ಇಲ್ಲ ಎನ್ನುವುದು ಅವರ ಹೆದರಿಕೆ ಎಂದು ಅವರು ಲೇವಡಿ ಮಾಡಿದರು.

ಇವರು ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿದರು ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಶೋಕ್ ಅವರು; ಕೆಲಸ ಆಗಬೇಕಾದರೆ ಕೈ ಎತ್ತು. ಕೆಲಸ ಆದ ಮೇಲೆ ಚೂರಿ ಹಾಕು. ಇದೇ ಕಾಂಗ್ರೆಸ್ ನೀತಿ. ನಾನು ಹದಿನಾಲ್ಕು ತಿಂಗಳು ದುಷ್ಟರ ಸಹವಾಸ ಮಾಡಿದ್ದೆ, ಅವರನ್ನು ನನ್ನನ್ನು ಕ್ಲರ್ಕ್, ಜವಾನನ ರೀತಿ ನಡೆಸಿಕೊಂಡರು ಎಂದರು.

ಕಾಂಗ್ರೆಸ್ ಸರಕಾರ ಎಲ್ಲ ಕಡೆ ಲೂಟಿ ಮಾಡುತ್ತಿದೆ. ಈಗ ಬಿಡಿಎ ಕಾಂಪ್ಲೆಕ್ಸ್ ಗಳನ್ನು ಮಾರಾಟಕ್ಕೆ ಇಟ್ಟಿದೆ. ಹಿಂದೆ ಲಕ್ಷ್ಮಣರಾವ್ ಅವರಂಥ ಮಹಾನುಭಾವರು ಇವನ್ನೆಲ್ಲ ಕಾಪಾಡಿಕೊಂಡು ಬಂದಿದ್ದರು. ಸರ್ಕಾರದಲ್ಲಿ ಹಣ ಇಲ್ಲ. ಅವರ ವರಿಷ್ಠರಿಗೆ ಕಪ್ಪ ಕೊಡಲು ಇಲ್ಲಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಅಶೋಕ್ ಟೀಕಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲ: ಡಾ.ಸಿ.ಎನ್.ಅಶ್ವತ್ಥನಾರಾಯಣ:

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ; ಕಾಂಗ್ರೆಸ್ ಮುಕ್ತ ಕರ್ನಾಟಕವೇ ಈ ಮೈತ್ರಿ ಉದ್ದೇಶ. ಎರಡೂ ಪಕ್ಷಗಳ ಉದ್ದೇಶ ಒಂದೇ, ಕಾಂಗ್ರೆಸ್ ವಿರೋಧಿ ನೀತಿ. ಹೀಗಾಗಿ ನಾವು ಒಂದಾಗಿದ್ದೇವೆ. ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ದೇವೇಗೌಡರು ಮೋದಿ ಅವರು ಈ ಮೈತ್ರಿಗೆ ಕಾರಣರು ಎಂದರು.

ಸಮೃದ್ಧ ಕರ್ನಾಟಕ ನಿರ್ಮಾಣ ಈ ಮೈತ್ರಿಕೂಟದಿಂದ ಸಾಧ್ಯ. ಕಾಂಗ್ರೆಸ್ ಎದುರಿಸಲು ನಾವು ಒಂದಾಗಿದ್ದೇವೆ. ಕುಮಾರಸ್ವಾಮಿ ಅವರ ಪ್ರೀತಿಗೆ ನಾವು ಪೂರ್ಣವಾಗಿ ಸೋತಿದ್ದೇವೆ. ನಮ್ಮನ್ನೆಲ್ಲ ಪ್ರೀತಿಯಿಂದ ಕರೆದು ಮಾತನಾಡಿದ್ದಾರೆ. ಜನರು ಕಾರ್ಯಕರ್ತರು ನಮ್ಮನ್ನು ಒಪ್ಪಿದ್ದಾರೆ. ಮೊದಲ ಪರೀಕ್ಷೆಯಲ್ಲಿ ನಾವು ಪಾಸಾಗುತ್ತೇವೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿದೆ. ಬರ ನಿರ್ವಹಣೆ, ಆರೋಗ್ಯ, ಮೂಲ ಸೌಕರ್ಯದಲ್ಲಿಯೂ ವಿಫಲವಾಗಿದೆ ಈ ಸರ್ಕಾರ. ಕೇವಲ ಒಂದು ಸಮುದಾಯವನ್ನು ತುಷ್ಟೀಕರಣ ಮಾಡುತ್ತಿದೆ. ಕೊಲೆ ಸುಲಿಗೆ, ಅತ್ಯಾಚಾರದಂತ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ನವರು ಭಂಡತನದವರು, ಅವರಿಗೆ ಸೂಕ್ಷ್ಮತೆಯೇ ಇಲ್ಲ. ಅವರ ಐವತ್ತು ವರ್ಷದ ಅನುಭವ ಬರೀ ಭಾಷಣದ ಹಾವಭಾವ ಸೀಮಿತವಾಗಿ, ಸಮಾಜ ಒಡೆಯುವುದಕ್ಕೆ ಮಾತ್ರ ಮೀಸಲಾಗಿದೆ ಎಂದು ದೂರಿದರು.

ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಮುನಿರತ್ನ, ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಡಾ.ಶ್ರೀನಿವಾಸಮೂರ್ತಿ, ಎ.ಮಂಜುನಾಥ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ರಾಜ್ಯ ಮಹಿಳಾ ಜೆಡಿಎಸ್ ಅಧ್ಯಕ್ಷೆ ರಶ್ಮಿ ರಾಮೇಗೌಡ, ನಾರಾಯಣ ಸ್ವಾಮಿ (ರಾಜರಾಜೇಶ್ವರಿ ನಗರ), ಹಿರಿಯ ನಾಯಕರಾದ ಅಂದಾನಯ್ಯ, ಗಂಗಾಧರ ಮೂರ್ತಿ, ಆರ್.ಪ್ರಕಾಶ್, ರಾಜಣ್ಣ, ತಿಮ್ಮೇಗೌಡ, ಜವರಾಯಿ ಗೌಡ, ಶೈಲಜಾ ರಾವ್, ರೋಷನ್ ಅಬ್ಬಾಸ್ ಸೇರಿ ಎರಡೂ ಪಕ್ಷಗಳ ಅನೇಕ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.

Bottom Add3
Bottom Ad 2