
ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ನಿಗಮದಲ್ಲಿ ಹಗರಣ ಹಾಗೂ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಪ್ರಕರಣ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ ನಡೆದಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು, ಬಳಿಕ ಅಲ್ಲಿಂದ ನೇರವಾಗಿ ವಿಧಾನಸೌಧದತ್ತ ತೆರಳಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು.
ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಅದರ ಮೇಲೆ ಹತ್ತಿ ವಿಧಾನಸೌಧದತ್ತ ಮುನ್ನುಗ್ಗಿದ್ದರು. ಈ ವೇಳೆ ನೂರಾರು ಪೊಲೀಸರು ಬಿಜೆಪಿ ನಾಯಕರನ್ನು ತಡೆಹಿಡಿದಿದ್ದಾರೆ. ಪೊಲೀಸರು ಹಾಗೂ ಬಿಜೆಪಿ ನಾಯಕರ ನಡುವೆ ವಾಗ್ವಾದವೇ ನಡೆದಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ತುಂಬಿ ಕರೆದೊಯ್ದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ