ಪ್ರಗತಿವಾಹಿನಿ ಸುದ್ದಿ: ದೇಶದಾದ್ಯಂತ ಹುಸಿ ಬಾಂಬ್ ದಾಳಿ ಬೆದರಿಕೆ ಸಂದೇಶಗಳು ಕಳೆದ ಕೆಲವು ತಿಂಗಳುಗಳಿನಿಂದ ವಿಪರೀತ ಹೆಚ್ಚಾಗಿದೆ. ಇದು ಪೊಲೀಸರನ್ನು ಹಾಗೂ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ್ದು, ಇದರ ಬೆನ್ನಲ್ಲೇ ಮತ್ತೆ ಬೆಂಗಳೂರಿನ ಹೋಟೆಲ್ ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಬೆಂಗಳೂರಿನ ಮೂರು ಫೈವ್ ಸ್ಟಾರ್ ಹೋಟೆಲ್ ಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ವಿಷಯ ತಿಳಿದು ಹೋಟೆಲ್‌ಗೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಬೆಳಗ್ಗೆ ಹೋಟೆಲ್ ಸಿಬ್ಬಂದಿ ಮೇಲ್ ಪರಿಶೀಲಿಸಿದಾಗ ಬೆದರಿಕೆ ಸಂದೇಶ ಬೆಳಕಿಗೆ ಬಂದಿದೆ. ಮಧ್ಯರಾತ್ರಿ 2 ಗಂಟೆಗೆ ಬಾಂಬ್ ಸ್ಫೋಟಿಸುವುದಾಗಿ ಉಲ್ಲೇಖಿಸಲಾಗಿದೆ. ತಕ್ಷಣವೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೆಲವೇ ದಿನಗಳ ಹಿಂದೆ ಬೆಂಗಳೂರು ದಕ್ಷಿಣ ತಾಲೂಕು ವ್ಯಾಪ್ತಿಯ ಕಗ್ಗಲಿಪುರದ ಕನಕಪುರ ರಸ್ತೆ ಸೋಮನಹಳ್ಳಿ ಬಳಿಯ ಈಡಿಫೈ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಪರಿಶೀಲನೆಯ ನಂತರ ಈ ಎರಡೂ ಬೆದರಿಕೆ ಸಂದೇಶಗಳು ಹುಸಿ ಎಂಬುದು ತಿಳಿದು ಬಂದಿತ್ತು.
ಕಳೆದ ತಿಂಗಳು ಜಾಲಹಳ್ಳಿ ಠಾಣೆ ವ್ಯಾಪ್ತಿಯ ಎಚ್‌ಎಂಟಿ ಮೈದಾನ ಬಳಿಯ ಕದಂಬ ಹೋಟೆಲ್ ಸುತ್ತಮುತ್ತ ಬಾಂಬ್ ಇರಿಸಲಾಗಿದೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ ಬಂದಿದ್ದು ಆತಂಕಕ್ಕೆ ಕಾರಣವಾಗಿತ್ತು. ನಂತರ ಅದು ಹುಸಿ ಬೆದರಿಕೆ ಎಂಬುದು ತಿಳಿದು ಬಂದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ