Karnataka NewsLatestUncategorized

*ಬೊಮ್ಮಾಯಿಗೆ ಮುಂದಿನ 5 ವರ್ಷಗಳ ಕಾಲ ಮತ್ತೆ ಅವಕಾಶ: ಜೆಪಿ ನಡ್ಡಾ* *ನನ್ನ ಸಾವಾದರೆ ಶಿಗ್ಗಾವಿಯಲ್ಲಿ ಮಣ್ಣು ಮಾಡಿ*

*ಶಿಗ್ಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬೃಹತ್ ರೋಡ್ ಶೊ*

*ನನ್ನ ಸಾವಾದರೆ ಶಿಗ್ಗಾವಿಯ ಮಣ್ಣಿನಲ್ಲಿ ಮಣ್ಣು ಮಾಡಿ*

 *ನಾನು ಓಡಿ ಹೋಗುವ ಸಿಎಂ ಅಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಹಾವೇರಿ (ಶಿಗ್ಗಾವಿ) : ನನ್ನನ್ನು ಬೆಳಸಿದವರು ನೀವು. ನನ್ನನ್ನು ಉಳಿಸಿಕೊಳ್ಳುವವರು ನೀವು. ನಾನು ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆಯನ್ನು ಮಾಡುತ್ತೇನೆ. ನನ್ನ ಸಾವಾದರೆ, ನನ್ನನ್ನು ಶಿಗ್ಗಾವಿಯಲ್ಲೇ ಮಣ್ಣು ಮಾಡಬೇಕು. ಇದು ನನ್ನ ಶಿಗ್ಗಾವಿಯ ಭೂಮಿ ತಾಯಿಯ ಮಣ್ಣಿನ ಋಣ ತೀರಿಸುವಂತದ್ದಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Home add -Advt

ಇಂದು ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಅದ್ಯಾವ ಜನ್ಮದ ಸಂಬಂಧವೊ ಯಾವ ಋಣಾನುಬಂಧವೊ ನೀವು ಹದಿನೈದು ವರ್ಷ ಸತತ ಬೆಂಬಲ ನೀಡಿದ್ದೀರಿ, ನಮ್ಮ ನಿಮ್ಮ ನಡುವೆ ಯಾವುದೇ ಶಕ್ತಿ ಅಡ್ಡಿ ಬರುವುದಿಲ್ಲ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ತಲೆ ಬಾಗಿ, ನನ್ನ ಕೊನೆ ಉಸಿರು ಇರುವ ತನಕ ನಿಮ್ಮ ಸೇವೆ ಮಾಡುತ್ತೇನೆ ಎಂಬ ಪ್ರತಿಜ್ಞೆ ಮಾಡುತ್ತೇನೆ ಎಂದರು.

ಶಿಗ್ಗಾವಿ-ಸವಣೂರಿನ ಅಭಿವೃದ್ಧಿ ನಮ್ಮೆಲ್ಲರ ಕನಸಾಗಿತ್ತು. 2008ರಲ್ಲಿ ನಾನು ಬಂದಾಗ ಒಳ್ಳೆಯ ರಸ್ತೆ ಇರಲಿಲ್ಲ, ರಸ್ತೆಯ ಮಧ್ಯೆ ಹಳ್ಳಗಳಿದ್ದವು.  ಕುಡಿಯಲು ನೀರಿರಲಿಲ್ಲ. ಕುಡಿಯುವ ನೀರಿಗಾಗಿ ನಮ್ಮ ತಾಯಂದಿರು ರಸ್ತೆಯಲ್ಲಿ ಕೊಡ ಹಿಡಿದುಕೊಂಡು ಸಾಲು ಹಿಡಿದು ನಿಲ್ಲುತ್ತಿದ್ದರು. ಒಂದು ಒಳ್ಳೆಯ ಆಫೀಸ್ ನ ಕಟ್ಟಡ ಇರಲಿಲ್ಲ. ಜನರ ಕಷ್ಟಕ್ಕೆ ಸ್ಪಂದನೆ ಇರಲಿಲ್ಲ. ಕೆರೆಗಳಿಗೆ ನೀರು ಇರಲಿಲ್ಲ. ಇದರ ಮಧ್ಯೆ ಪ್ರಾರಂಭವಾಗಿರುವ ನಮ್ಮ ಅಭಿವೃದ್ಧಿ ಪಯಣ ಇವತ್ತು ಎರಡು ಏತ ನೀರಾವರಿ ಮಾಡಿ 100ಕ್ಕಿಂತ ಹೆಚ್ಚು ಕೆರೆಗಳನ್ನು ತುಂಬಿಸಿರುವ ದಾಖಲೆ ಶಿಗ್ಗಾವಿ-ಸವಣೂರನಲ್ಲಿ ಆಗಿದೆ ಎಂದರು.

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಳ್ಳಿಯಿಂದ ಹೊಲಗಳಿಗೆ ಹೋಗುವ 2 ಸಾವಿರ ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣ ಮಾಡಿದ್ದೇವೆ. 15 ವರ್ಷಗಳಲ್ಲಿ ಮಾರು 10 ಸಾವಿರ ಬಡವರಿಗೆ ಮನೆ ನಿರ್ಮಾಣ ಮಾಡಿದ್ದೆವೆ. ಮಳೆಯಿಂದ ಹಾನಿಗೊಳಗಾದ ಜನರಿಗೆ 12 ಸಾವಿರ ಮನೆಗಳನ್ನು ಕಟ್ಟಿರುವ ದಾಖಲೆಯನ್ನು ಮಾಡಿದ್ದೇವೆ. ಬಡತನ ಶಾಪವಲ್ಲ. ಹುಟ್ಟುವಾಗ ಬಡತನ ಇರಬಹುದು. ಆದರೆ ಸಾಯುವವರೆಗೂ ಬಡತನದಲ್ಲಿಯೇ ಇರಬೇಕೆಂದು ಇಲ್ಲ. ತಮ್ಮ ದುಡಿಮೆಯಿಂದ ಪ್ರಾಮಾಣಿಕವಾಗಿ ಮುಂದೆ ಬರುವ ಅವಕಾಶವನ್ನು ಮಾಡಿಕೊಟ್ಟಿದ್ದೇನೆ. ಆದ್ದರಿಂದ ಜನರು ಸ್ವಾಭಿಮಾನದ ಬದುಕಿನಿಂದ ಬಾಳುತ್ತಿದ್ದಾರೆ ಎಂದರು.

ಶಿಗ್ಗಾವಿ, ಸವಣೂರು, ಬಂಕಾಪುರದಲ್ಲಿ 6 ಸಾವಿರ ಮನೆ ನಿರ್ಮಾಣ ಮಾಡಿದ್ದೇವೆ. ನಗರಗಳ ಸಂಪೂರ್ಣ ಅಭಿವೃದ್ಧಿಯನ್ನು ಮಾಡಿದ್ದೇವೆ. ಪ್ರತಿಯೊಂದು ಗ್ರಾಮಕ್ಕೆ ಇನ್ನು ಆರು ತಿಂಗಳಲ್ಲಿ ಪ್ರತಿಯೊಂದು ಮನೆಗೆ ನಳದಿಂದ ನೀರು ಕೊಡುವಂತಹ ವ್ಯವಸ್ಥೆ ನಮ್ಮ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಆಗುತ್ತಿದೆ. ನಮ್ಮ ಪ್ರಧಾನಿ ಮೋದಿ, ನಡ್ಡಾ ಅವರ ನೇತೃತ್ವದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಹಳ್ಳಿ ಹಳ್ಳಿಯ ಪ್ರತಿ ಮನೆಗೂ ನಲ್ಲಿ ನೀರು ಕೊಡಲಾಗುತ್ತಿದೆ ಎಂದರು.

ಜೆ.ಪಿ ನಡ್ಡಾ ಅವರ ನೇತೃತ್ವದಲ್ಲಿ ಪಕ್ಷ ಕರ್ನಾಟಕದಲ್ಲಿ ಅತ್ಯಂತ ಸಂಘಟಿತವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ 125 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಪಡೆದು, ಮತ್ತೊಮ್ಮೆ ಕನ್ನಡ ನಾಡಿನ ಸೇವೆಯನ್ನು ಮಾಡಲು ಬಾರತೀಯ ಜನತಾ ಪಕ್ಷಕ್ಕೆ ಜನರು ಆಶೀರ್ವಾದ ಮಾಡುತ್ತಾರೆ. ಮುಖ್ಯಮಂತ್ರಿಯಾಗಿ ನಾನು ರೈತರಿಗೆ, ಯುವಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ ಏನೆಲ್ಲ ಕೆಲಸ ಮಾಡಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದರು.

ನಾನು ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗುತ್ತೇನೆ ಎಂದು ಕೇಳಿದರು. ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ಏನೇ ಆದರೂ ನನ್ನ ಜನರ ಮುಂದೆ ತೀರ್ಮಾನ ಆಗಬೇಕು. ನೀವೇ ನನ್ನ ಮಾಲೀಕರು, ನಾನು ಕ್ಷೇತ್ರ ಬಿಟ್ಟು ದಾವಣಗೆರೆಗೆ ಹೋಗುತ್ತೆನೆ. ಎಂದು ಹಬ್ಬಿಸಿದ್ದರು. ಯಾವ ನನ್ನ ಮಗ ಹೇಳಿದ್ದು ಎಂದು ಕೇಳಿದೆ. ಇದು ನನ್ನ ಆತ್ಮಸ್ಥೈರ್ಯ. ಕರ್ನಾಟಕ ಮಾತೆಗೆ, ಕನ್ನಡಿಗರಿಗೆ ಮತ್ತು ಈ ಕ್ಷೇತ್ರದ ಜನರಿಗೆ ನಾನು ಪ್ರಾಮಾಣಿಕ ಸೇವೆಯನ್ನು ಮಾಡಿದ್ದೇನೆ. ಅದರಲ್ಲಿ ನನ್ನ ನಂಬಿಕೆಯಿದೆ ಎಂದರು.

ಕ್ಷೇತ್ರದಲ್ಲಿ ಆರ್ಯುವೇದಿಕ ಆಸ್ಪತ್ರೆ, ಶಿಗ್ಗಾವಿ, ಸವಣೂರಿನಲ್ಲಿ 250 ಹಾಸಿಗೆಯ ಆಸ್ಪತ್ರೆ, ಜಿಟಿಟಿಸಿ ಮತ್ತು ಇಂಜಿನಿಯರಿಂಗ್ ಕಾಲೇಜು, 10 ಸಾವಿರ ಜನರಿಗೆ ಉದ್ಯೋಗ ಕೊಡುವ ಟೆಕ್ಸ್ಟೈಲ್ ಪಾರ್ಕ್ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡಿದ್ದೇನೆ. ಬಂಕಾಪುರ ತಾಲ್ಲೂಕು ಆಗಬೇಕೆಂದು ಜನರ ಬೇಡಿಕೆ ಇದೆ. ನಾನು ಇವತ್ತು ಅದಕ್ಕೆ ಎಲ್ಲ ಅನುಮತಿ ಕೊಟ್ಟು ಆಜ್ಞೆ ಮಾಡಿದ್ದೇನೆ. ಚುನಾವಣೆ ನೀತಿ ಸಂಹಿತೆ ಅದಕ್ಕೆ ಅಡಚಣೆಯಾಗಿದೆ. ಬರುವ ದಿನಗಳಲ್ಲಿ ಬಂಕಾಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುತ್ತೇನೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡ, ಹಿರಿಯ ನಾಯಕರಾದ ಗೋವಿಂದ ಕಾರಜೋಳ, ಸಿ.ಸಿ ಪಾಟೀಲ, ಮುರುಗೇಶ ನಿರಾಣಿ, ಬಿ.ಸಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ಬೊಮ್ಮಾಯಿಗೆ ಮುಂದಿನ 5 ವರ್ಷಗಳ ಕಾಲ ಮತ್ತೆ ಅವಕಾಶ: ಜೆಪಿ ನಡ್ಡಾ*

ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ್ ಬೋಮ್ಮಾಯಿಯವರ ನಾಮ ಪತ್ರ ಸಲ್ಲಿಸುತ್ತಿದ್ದಾರೆ. ಆ ನಾಮಪತ್ರ ಕೇವಲ ಶಾಸಕ ಸ್ಥಾನಕ್ಕೆ ಮಾತ್ರವಲ್ಲ, ಕರ್ನಾಟಕವನ್ನು ಹೊಸ ದಿಕ್ಕಿಗೆ ಒಯ್ಯುವ ಮಾರ್ಗವಾಗಲಿದೆ. ನಿಮ್ಮಲ್ಲಿರುವ ಆತ್ಮ ವಿಶ್ವಾಸ, ಉತ್ಸಾಹ ನೋಡಿದರೇ ಬೊಮ್ಮಾಯಿ ಅವರಿಗೆ ಮುಂದಿನ ಐದು ವರ್ಷಗಳ ಕಾಲ ಮತ್ತೆ ಅವಕಾಶ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದರು. 

ಅವರು ಇಂದು ಶಿಗ್ಗಾಂವಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.

ಬೊಮ್ಮಾಯಿಯವರ ಮಾತು ಕೇಳಿದೆ. ಅವರು ಬಡವರಿಗೆ 12 ಸಾವಿರ ಮನೆ ನಿರ್ಮಾಣ ಹಾಗೂ ಸಾಕಷ್ಟು ಅಭಿವೃದ್ಧಿ ಮಾಡಿರುವುದಾಗಿ ಹೇಳಿದರು. ಸುದೀಪ್ ಅವರು ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಮೆಚ್ಚಿರುವುದಾಗಿ ಹೇಳಿದರು. ಅಲ್ಲದೇ ಬೊಮ್ಮಾಯಿ ಅವರಿಗೆ ಕಡಿಮೆ ಸಮಯ ಸಿಕ್ಕಿದೆ ಇನ್ನಷ್ಟು ಸಮಯ ಬೇಕಿದೆ ಎಂದೂ ಬಯಕೆ ವ್ಯಕ್ತಪಡಿಸಿದರು. ನಾನು ಕೇವಲ ಬೊಮ್ಮಾಯಿ ಪರವಾಗಿ ಮತಕೇಳಲು ಬಂದಿಲ್ಲ. ಕರ್ನಾಟಕದಲ್ಲಿ ವಿಕಾಸದ ಗಂಗಾ ಹರಿಸಲು ಕಮಲಕ್ಕೆ ನಿಮ್ಮ ಮತ ಕೇಳಲು ಬಂದಿದ್ದೇನೆ ಎಂದು ಜೆ.ಪಿ. ನಡ್ಡಾ ಹೇಳಿದರು.

*ಕಾಂಗ್ರೆಸ್ ಅಂದ್ರೆ ಕಮಿಷನ್, ಕರಪ್ಷನ್*

ಕಾಂಗ್ರೆಸ್ ಅಂದ್ರೆ ಕರಪ್ಷನ್, ಕಮಿಷನ್, ಕ್ರಿಮಿನಲೈಸೇಷನ್. ಕಾಂಗ್ರೆಸ್ ನಾಯಕರು ನಾಯಕರಲ್ಲ. ಅವರು ಎಟಿಎಂ ಮಷಿನ್ ನಡೆಸೋ ಜನರು. ಎಟಿಎಂ ಅಂದರೆ ಆಟೋಮ್ಯಾಟಿಕ್ ಟ್ರಾನ್ಸಫರ್ ಆಫ್ ಮನಿ. ಕಾಂಗ್ರೆಸ್ ಅವರನ್ನು ಇಲ್ಲಿ ಕೂರಿಸಿದರೆ ಮೋದಿ ಅವರು ರಾಜ್ಯಕ್ಕೆ ಕಳಿಸಿದ ಹಣವನ್ನು ಇವರು ಡೆಲ್ಲಿ ಕಾಂಗ್ರೆಸ್ಗೆ ಕಳಿಸುತ್ತಾರೆ. ಇಂತಹ ಸರ್ಕಾರ ನಿಮಗೆ ಬೇಕಾ? ಮೋದಿ ಕಳಿಸೋ ಹಣ ರಾಜ್ಯದ ಅಭಿವೃದ್ಧಿಗೆ ಸದ್ಬಳಕೆ ಆಗಬೇಕು ಅಂದರೆ ನೀವು ಬಿಜೆಪಿಗೆ ಮತ ಹಾಕಿ ಎಂದು ಜೆ ಪಿ ನಡ್ಡಾ ಹೇಳಿದರು.

*ಬಿಜೆಪಿ ಅಂದರೆ ಅಭಿವೃದ್ಧಿ*

ರಾಜ್ಯದಲ್ಲಿ ಹೈವೇ ಗಳು ನಿರ್ಮಾಣ ಆಗ್ತಿದೆ. ತುಮಕೂರಿನಲ್ಲಿ ಹೆಲಿಕ್ಯಾಪ್ಟರ್, ಪ್ಲೇನ್ಗಳು ನಿರ್ಮಾಣ ಆಗ್ತಿದೆ. ರಾಜ್ಯದಲ್ಲಿ ವಂದೇ ಭಾರತ ರೈಲು ಓಡಾಡ್ತಿದೆ. ರೈಲುಗಳು ಇನ್ನೂ ಹೆಚ್ಚು ಓಡಾಡಬೇಕು ಅಂದರೆ ಬಿಜೆಪಿಗೆ ಮತ ನೀಡಿ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಮನೆ, ಅಕ್ಕಿ ಪಡೆಯಲು ಕಮಲದ ಗುರುತಿಗೆ ಮತ ಹಾಕಿ. ಆಯುಷ್ಮಾನ ಭಾರತ ಯೋಜನೆಯಿಂದ ಬಡವರಿಗೆ ಅನಕೂಲ ಆಗುತ್ತಿದೆ. ಈ ಯೋಜನೆ ಮುಂದುವರೆಯಲು ಬಿಜೆಪಿ ಗುರುತಿಗೆ ಬಟನ್ ಒತ್ತಿ. ಎಫ್ ಡಿ ಐ ಮೂಲಕ ಕರ್ನಾಟಕಕ್ಕೆ ಅತಿ ಹೆಚ್ಚು ಬಂಡವಾಳ ಬರುತ್ತಿದೆ. ಇದು ಇನ್ನೂ ಹೆಚ್ಚಾಗಲು ಬೊಮ್ಮಾಯಿ ಕೈ ಬಲಪಡಿಸಲು ಬಿಜೆಪಿಗೆ ಮತ ಹಾಕಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಬಹಿರಂಗ ಸಭೆಯಲ್ಲಿ ಹೇಳಿದರು.

*ರಾಜ್ಯದಲ್ಲಿ ಶಾಂತ ವಾತಾವರಣ ಇದೆ*

ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿದೆ. ಸಿದ್ದರಾಮಯ್ಯ ಪಿಎಫ್ಐ ಬ್ಯಾನ್ ಮಾಡಿದ್ದನ್ನು ಹಿಂಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಪಿಎಫ್ಐ ಬ್ಯಾನ್ ಮುಂದುವರೆಯಬೇಕು ಅಂದರೆ ಕಮಲದ ಗುರುತಿಗೆ ಮತ ನೀಡಿ. ಬೊಮ್ಮಾಯಿ ಸರ್ಕಾರದಲ್ಲಿ ಅಪರಾಧ ಸಂಖ್ಯೆ ಕಡಿಮೆ ಆಗಿದೆ. ಇಂದು ರಾಜ್ಯದಲ್ಲಿನ ಅನೇಕ ಕ್ರಿಮಿನಲ್ಗಳು ಜೈಲಿನಲ್ಲಿದ್ದಾರೆ. ರಾಜ್ಯದಲ್ಲಿ ಶಾಂತಿ ಮತ್ತು ವಿಕಾಸಕ್ಕಾಗಿ ಕಮಲಕ್ಕೆ ಮತ ಹಾಕಬೇಕು. ಬೊಮ್ಮಾಯಿ ಅವರನ್ನು ನೀವು ಈಗಾಗಲೇ ಗೆಲ್ಲಿಸಿದ್ದೀರಿ. ರಾಜ್ಯದಲ್ಲಿ ಕಮಲವನ್ನು ಅರಳಿಸಲು ಮನೆಮನೆಗೆ ತೆರಳಿ ಪ್ರಚಾರ ಮಾಡಿ ಎಂದು ಜೆಪಿ ನಡ್ಡಾ ಜನರನ್ನು ಉದ್ದೇಶಿಸಿ ಹೇಳಿದರು.

*ಅಭಿವೃದ್ಧಿಗೆ ಇನ್ನೊಂದು ಬಾರಿ ಬೊಮ್ಮಾಯಿ ಅವರಿಗೆ ಮತ ಕೊಡಿ: ನಟ ಸುದೀಪ್*

ಹಾವೇರಿ: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಳ ಕಡಿಮೆ ಅವಧಿ ಸಿಕ್ಕಿದೆ. ಕಡಿಮೆ ಅವಧಿಯಲ್ಲಿ ಬಹಳ ಅಭಿವೃದ್ಧಿ ಮಾಡಿದ್ದಾರೆ. ಇಷ್ಟು ಜನ ಸೇರಿದ್ದೀರಿ ಅಂದರೆ ಅವರು ಮಾಡಿದ ಕೆಲಸ ಗೊತ್ತಾಗುತ್ತದೆ. ಅವರ ಪರವಾಗಿ ನಾನು ಬಂದಿದ್ದೇನೆ. ಜನರಿಗೆ ಒಳ್ಳೆಯದು ಆಗಬೇಕಬೇಕಾದರೆ ಮತ್ತೊಮ್ಮೆ ನೀವು ಅವರನ್ನು ಗೆಲ್ಲಿಸಬೇಕು ಎಂದು ನಟ ಸುದೀಪ್ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರ ಪರ ರೋಡ್‌ ಶೋ ನಡೆಸಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.  

ಮೊದಲ ಬಾರಿಗೆ ನಾನು ಈ ಊರಿಗೆ ಬಂದಿದ್ದೇನೆ. ಬಹಳ ಸುಂದರವಾಗಿ ನನ್ನನ್ನು ಸ್ವಾಗತ ಮಾಡಿದ್ದೀರಿ. ಸಂತ ಶಿಶುನಾಳ ಶರೀಫರ ಭೂಮಿಯಲ್ಲಿ ಪ್ರಚಾರ ಆರಂಭಿಸಿದ್ದು ಬಹಳ ಸಂತಸ ತಂದಿದೆ. ಬಸವರಾಜ ಬೊಮ್ಮಾಯಿ ಅವರು ನಾಮಕಾವಸ್ಥೆ ಅಲ್ಲ, ಕಾಮಕಾವಸ್ಥೆ. ಅಭಿವೃದ್ಧಿ ಆಗಬೇಕೆಂದರೆ ಮತ್ತೆ ಬೊಮ್ಮಾಯಿ ಅವರಿಗೆ ಮತ್ತೊಂದು ಅವಕಾಶ ನೀಡಿ ಎಂದರು.

ನಿಮ್ಮ ಬೆಂಬಲ ಇದ್ದರೆ ಕೆಲಸ ಆಗುತ್ತದೆ. ನಾನು ಕೆಲಸ ಆಗುವವರ ಪರ ಇರುತ್ತೇನೆ . ನಾನು ಒಬ್ಬ ಭಾರತೀಯನಾಗಿ ಪ್ರಧಾನಿ ಮೋದಿಯವರ ಕೆಲಸವನ್ನು ಮೆಚ್ಚುತ್ತೇನೆ. ವಿದೇಶದಲ್ಲಿ ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ ಎಂದು ಮೋದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾನು ಸುಮ್ನೆ ಪ್ರಚಾರಕ್ಕೆ ಇಳಿಯಲ್ಲ. ಗೆದ್ದೆ ಗೆಲ್ಲುವೆ ಒಂದು ದಿನ. ಗೆಲ್ಲಲೇಬೇಕು ಒಳ್ಳೆಯತನ. ಬೊಮ್ಮಾಯಿ ಅವರನ್ನು ಗೆಲ್ಲಿಸಿಕೊಂಡು ಹೋಗುತ್ತೇನೆ. ಬೊಮ್ಮಾಯಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡ, ಹಿರಿಯ ನಾಯಕರಾದ ಗೋವಿಂದ ಕಾರಜೋಳ, ಮುರಗೇಶ್ ನಿರಾಣಿ, ಬಿ. ಸಿ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

https://pragati.taskdun.com/bjpstar-campaignerpm-modijp-nadda/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button