Kannada NewsKarnataka NewsLatest

*ಬ್ರ್ಯಾಂಡ್ ಬೆಂಗಳೂರಿಗಾಗಿ ಅಂತರ ಶಾಲಾ ಐಡಿಯಾಥಾನ್ ಸ್ಪರ್ಧೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪರಿವರ್ತನೆಯ ಭಾಗವಾಗಿ “ಬ್ರ್ಯಾಂಡ್ ಬೆಂಗಳೂರಿಗಾಗಿ” ಹೊಸ ಆಲೋಚನೆಗಳ ಆವಿಷ್ಕಾರಕ್ಕೆ ಅಂತರ ಶಾಲಾ ಐಡಿಯಾಥಾನ್ ಸ್ಪರ್ಧೆ ಆರಂಭಿಸಲಾಗಿದೆ.

ತಮ್ಮ ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಲಾ ಮಕ್ಕಳ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಲು ವಿಶಿಷ್ಟ ಅಂತರ-ಶಾಲಾ ಸ್ಪರ್ಧೆಯನ್ನು ಮಕ್ಕಳ ದಿನಾಚರಣೆಯಂದು ಘೋಷಿಸಲಾಗಿದೆ.

ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರು ನಗರಾದ್ಯಂತ ಶಾಲೆಗಳಲ್ಲಿ ವಿಭಿನ್ನ ಐಡಿಯಾಥಾನ್ ಮತ್ತು ಯುವ ನಾಯಕತ್ವ ಸಮ್ಮೇಳನ ಆರಂಭಿಸಲಾಗಿದೆ. ಬೆಂಗಳೂರು ನಗರವನ್ನು ಸ್ವಚ್ಛ, ಹಸಿರು ಹಾಗೂ ಸುಸ್ಥಿರ ನಗರವನ್ನಾಗಿಸಲು ಕರ್ನಾಟಕ ಸರ್ಕಾರವು ಹಮ್ಮಿಕೊಂಡಿರುವ “ಬ್ರ್ಯಾಂಡ್ ಬೆಂಗಳೂರು” ಕಾರ್ಯಕ್ರಮದ ಮೂಲ ಉದ್ದೇಶಗಳ ಬಗ್ಗೆ ಮಕ್ಕಳಲ್ಲಿ ಅರಿವು, ಜಾಗೃತಿ ಮೂಡಿಸಲು, ಇದೇ ಮೊದಲ ಬಾರಿಗೆ ಇಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉದ್ದೇಶ ಹಾಗೂ ಸ್ಪರ್ಧೆ ವಿವರ:

“ಐಡಿಯಾಥಾನ್ 23” ಅಂತರ ಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮವಾಗಿದ್ದು, ನಗರದ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಪರಿಹಾರ ರೂಪಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಒಳಗೊಳ್ಳುವುದು ಇದರ ಮೂಲ ಉದ್ದೇಶವಾಗಿದೆ.

ಐಡಿಯಾಥಾನ್ ’23 ನಾಗರಿಕ ಚಟುವಟಿಕೆಯಲ್ಲಿ ಮಕ್ಕಳು ಪಾಲ್ಗೊಳ್ಳಲು ಒಂದು ವಿಶೇಷ ವೇದಿಕೆ. ಬೆಂಗಳೂರಿನ ಯುವ ಸಮುದಾಯ ನಗರದ ಸಮಸ್ಯೆಗಳಿಗೆ ಸೃಜನಾತ್ಮಕ ಪರಿಹಾರ ಸೂಚಿಸುವ ಹಾಗೂ ನಾಗರಿಕ ಚಟುವಟಿಕೆ ಹೊರಹೊಮ್ಮುವ ರೀತಿಯಲ್ಲಿ ಈ ಸ್ಪರ್ಧೆಯನ್ನು ರೂಪಿಸಲಾಗಿದೆ. ಬೆಂಗಳೂರಿನಾದ್ಯಂತ ಶಾಲೆಗಳಲ್ಲಿನ ಯುವ ಪೀಳಿಗೆಯ ಚಿಂತನಾ ಶಕ್ತಿ ಹಾಗೂ ಪ್ರತಿಭೆಯ ಅನಾವರಣ ಈ ಸ್ಪರ್ಧೆಯ ಗುರಿ.

ಈ ಸ್ಪರ್ಧೆಯಲ್ಲಿ ಬೆಂಗಳೂರು ನಗರದಲ್ಲಿರುವ ಶಾಲೆಗಳ 10 ರಿಂದ 12 ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಶಾಲೆಯು ಇಬ್ಬರು ವಿದ್ಯಾರ್ಥಿಗಳ ಒಂದು ತಂಡವನ್ನು ಕಳಿಸಬಹುದು.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಮಾತ್ರ ತಮ್ಮ ವಿಚಾರ ಮಂಡಿಸಲು ಅವಕಾಶವಿದೆ.

ಈ ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮೊದಲು ನೊಂದಣಿಯಾಗುವ 200 ಶಾಲೆಗಳಿಗೆ ಮಾತ್ರ ಅವಕಾಶ.

ಆಸಕ್ತ ಶಾಲೆಗಳು 2023 ಡಿಸೆಂಬರ್ 5 ರೊಳಗೆ https://www.youngleadersofbengaluru.com ನಲ್ಲಿ ನೊಂದಣಿ ಮಾಡಿಕೊಳ್ಳಬಹುದು.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನಗರದ ಸುಧಾರಣೆಗೆ ತಮ್ಮ ಸಲಹೆ, ಪರಿಹಾರ ಸೂಚಿಸಬೇಕು. ಹಲವು ಸುತ್ತಿನ ನಂತರ ಅತ್ಯುತ್ತಮ ಆಲೋಚನೆಗಳು, ಸಲಹೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿ ಜಡ್ಜ್ ಗಳ ಮುಂದೆ ಇಡಲಾಗುವುದು. ಐಡಿಯಾಥಾನ್ ಪರಿಹಾರಗಳು 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿಯ ಸುತ್ತ ಕೇಂದ್ರೀಕೃತವಾಗಲಿವೆ.

ಸ್ಪರ್ಧೆಯ ಅಂತಿಮ ಸುತ್ತು 2024ರ ಜನವರಿ 13 ರಂದು ನಡೆಯುವ ಯುವ ನಾಯಕತ್ವ ಸಮ್ಮೇಳನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಗಣ್ಯರು ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಸ್ಪರ್ಧೆಯ ವಿದ್ಯಾರ್ಥಿಗಳು ಪರಿಣಾಮಕಾರಿ ಪರಿಹಾರ ಕೇಂದ್ರಿತ ಉತ್ತಮ ನಾಗರೀಕರಾಗಲು ಉತ್ತೇಜನ ನೀಡಲಿದ್ದಾರೆ.

ಕಾರ್ಯಕ್ರಮದ ರೂವಾರಿಗಳು:

ಕರ್ನಾಟಕ ಸರಕಾರದ ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯುವ ನಾಯಕತ್ವ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.

ಖ್ಯಾತ ಉದ್ಯಮಿ, ಚಿಂತಕಿ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಯುವ ನಾಯಕತ್ವ ಸಮ್ಮೇಳನದ ಮುಖ್ಯ ತೀರ್ಪುಗಾರರಾಗಿರುತ್ತಾರೆ.

ವಿದ್ಯಾರ್ಥಿಗಳ ಚಿಂತನೆ, ಪ್ರತಿಭೆ ಆವಿಷ್ಕಾರ ಕಾರ್ಯಕ್ರಮವು ಬೆಂಗಳೂರಿನ ಯುವ ಉತ್ಸಾಹಿ ಶಿಕ್ಷಣಜ್ಞೆ ಐಶ್ವರ್ಯ ಡಿಕೆಎಸ್ ಹೆಗ್ಡೆ ಅವರ ಪರಿಕಲ್ಪನೆಯಾಗಿದೆ. ನಗರ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಶಾಲಾ ಮಕ್ಕಳಿಗೆ ಅವಕಾಶ ಕಲ್ಪಿಸುವುದು ಅವರ ಉದ್ದೇಶವಾಗಿದೆ.

ಯುವ ನಾಯಕತ್ವ ಸಮ್ಮೇಳನದಲ್ಲಿ ಹಾಗೂ ತೀರ್ಪುಗಾರರಾಗಿ ಬೆಂಗಳೂರಿನ ಇತರೆ ಗಣ್ಯರು ಭಾಗವಹಿಸಲಿದ್ದಾರೆ. ಐಡಿಯಾಥಾನ್ ಹಾಗೂ ಯುವ ನಾಯಕತ್ವ ಸಮ್ಮೇಳನ ಕಾರ್ಯಕ್ರಮಗಳನ್ನು ಖ್ಯಾತ ಕ್ವಿಜ್ ಮಾಸ್ಟರ್ ಹಾಗೂ ಶಿಕ್ಷಣ ತಜ್ಞ ಗಿರಿ ಪಿಕ್ ಬ್ರೈನ್ ಬಾಲಸುಬ್ರಮಣಿಯಂ ನೇತೃತ್ವದ ಗ್ರೇಕ್ಯಾಪ್ಸ್ ನಾಲೇಡ್ಜ್ ಟ್ರೈಬ್ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button